ADVERTISEMENT

ಮುರ್ಡೇಶ್ವರದಲ್ಲಿ ಬಿಳಿಕೊಕ್ಕರೆ ಕಲರವ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2012, 10:45 IST
Last Updated 18 ಡಿಸೆಂಬರ್ 2012, 10:45 IST

ಭಟ್ಕಳ: ವಿಶ್ವದೆಲ್ಲೆಡೆಯ ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವ ಭಟ್ಕಳ ತಾಲ್ಲೂಕಿನ ಪ್ರಸಿದ್ಧ ಪ್ರವಾಸಿ ಕೇಂದ್ರ ಮುರ್ಡೇಶ್ವರ ಸುತ್ತಲಿನ ಗದ್ದೆಗಳಲ್ಲಿ, ಅದರ ಸನಿಹದಲ್ಲಿರುವ ಮರಗಳ ಮೇಲೆ ಬಿಳಿ ಕೊಕ್ಕರೆಗಳ ಕಲರವ ಆಕರ್ಷಿಸುತ್ತಿದೆ.

ಮುರ್ಡೇಶ್ವರ ಸಮೀಪದ ಮೂಡ್ಲಗದ್ದೆ ವಾರ್ಡನ ಮೂಡ್ಲಕಟ್ಟೆಯ ನೀರು ತುಂಬಿದ ಗದ್ದೆ, ನದಿ ನೀರಿನಂಚಿನಲ್ಲಿ ನೂರಾರು ಕೊಕ್ಕರೆಗಳು ವಿಹರಿಸುತ್ತಿವೆ. ನೀರಿನಲ್ಲಿರುವ ಮೀನು, ಹುಳುಹುಪ್ಪಟೆಗಳನ್ನು ಹುಡುಕುವ, ಬಾನಾಡಿಯಲ್ಲಿ ಒಮ್ಮೆಲೆ ಹಾರುವ ದೃಶ್ಯ, ಸನಿಹದ ಮರದ ಮೇಲೆ ಗೂಡುಕಟ್ಟಿಕೊಂಡು ಗುಂಪುಗುಂಪಾಗಿ ಸುತ್ತಾಡುವ ದೃಶ್ಯ ಎಲ್ಲರ ಗಮನ ಸೆಳೆಯುತ್ತದೆ. ಪಕ್ಷಿಗಳನ್ನು ನೋಡುವುದಕ್ಕಾಗಿಯೇ ಸುತ್ತಲಿನ ಹಳ್ಳಿಗರು, ಪ್ರವಾಸಿಗರು ಸಂಜೆ ಮೂಡ್ಲಗದ್ದೆಯತ್ತ ಪಯಣಿಸುತ್ತಾರೆ.

ಚಳಿಗಾಲ ಆರಂಭವಾಗುತ್ತಿದ್ದಂತೆ ನದಿ, ಕೆರೆಕೊಳ್ಳಗಳಿರುವ ಪಕ್ಷಿಧಾಮಗಳಿಗೆ ವಿವಿಧ ಜಾತಿಯ ಪಕ್ಷಿಗಳು ವಲಸೆ ಬರುವುದು ಸಾಮಾನ್ಯ. ಪಕ್ಷಿಧಾಮವಿಲ್ಲದ  ಹೇಳಿಕೊಳ್ಳುವಂಥಹ ದೊಡ್ಡ ಕೆರೆ, ನದಿಯೂ ಇಲ್ಲದ, ಕಣ್ಣು ಹಾಯಿಸಿದಷ್ಟೂ ಉಪ್ಪು ನೀರಿನ ಸಮುದ್ರವಿರುವ ಮುರ್ಡೇಶ್ವರಕ್ಕೆ ಪಕ್ಷಿಗಳು ವಲಸೆ ಬಂದದ್ದು ಕುತೂಹಲಕ್ಕೆ ಕಾರಣವಾಗಿದೆ.

ಬ್ಲಾಕ್‌ವಿಂಗ್ ಸ್ವಿಲ್ವ್: ಈ ಬಿಳಿ ಕೊಕ್ಕರೆಗಳನ್ನು ಕಂಡ ಹಲವು ಪಕ್ಷಿಪ್ರಿಯ ಪ್ರವಾಸಿಗರು ಹೇಳುವಂತೆ, ಇದನ್ನು ಓಪನ್ ಬಿಲ್ (ಬಾಯಿಕಳಕ) ಅಥವಾ ಬ್ಲಾಕ್‌ವಿಂಗ್ ಸ್ವಿಲ್ವ್ ಎಂದೂ ಕರೆಯಲಾಗುತ್ತದೆ. ಇದರ ರೆಕ್ಕೆಯ ಅಂಚಿನ ತುದಿ ಕಂದುಮಿಶ್ರಿತ ಕಪ್ಪು. ಕಾಲುಗಳು ಕಡ್ಡಿಯ (ಸ್ಟ್ರಾ) ರೀತಿಯಲ್ಲಿ ಇರುತ್ತದೆ.

ಅಚ್ಚ ಬಿಳುಪಿನ ಶರೀರ, ಗುಲಾಬಿ ಕಾಲುಗಳನ್ನು ಹೊಂದಿದೆ. ಇದರ ಮೂಲ ಅಂಟಾರ್ಟಿಕ. ಚಳಿಗಾಲದಲ್ಲಿ ಹೆಚ್ಚಾಗಿ ಉತ್ತರಭಾರತದಲ್ಲಿ ಕಂಡುಬರುತ್ತದೆ ಎಂದು ಹವ್ಯಾಸಿ ಛಾಯಾಗ್ರಾಹಕರೂ ಆಗಿರುವ ಡಾ. ಹರಿಪ್ರಸಾದ ಕಿಣಿ `ಪ್ರಜಾವಾಣಿ'ಗೆ ಮಾಹಿತಿ ನೀಡಿದರು.

ರಂಗನತಿಟ್ಟು, ಗುಡವಿ, ಕೊಕ್ಕರೆ ಬೆಳ್ಳೂರಿನಂತಹ ಪಕ್ಷಿಧಾಮದಲ್ಲಿ ಚಳಿಗಾಲದಲ್ಲಿ ಕಂಡು ಬರುವ ಇವು ಗುಂಪುಗುಂಪಾಗಿ ಬಾನಾಡಿಯಲ್ಲಿ ಹಾರಾಡುವುದನ್ನು ನೋಡುವುದೇ ಸೊಬಗು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT