ADVERTISEMENT

ಮೈ ಪುಳಕಗೊಳಿಸಿದ ಈಜು ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 9:10 IST
Last Updated 7 ಫೆಬ್ರುವರಿ 2012, 9:10 IST

ಕಾರವಾರ: ಆತ ಈಜುವುದನ್ನು ನೋಡಿದರೆ ಅವನೊಬ್ಬ ಅಂಗವಿಕಲನೇ ಎನ್ನುವ ಪ್ರಶ್ನೆ ಮನದಲ್ಲಿ ಮೂಡುತ್ತದೆ. ನೀರೊಳಗೆ ಮೀನಿನಂತೆ ಅತ್ತಿಂದಿತ್ತನ ಓಡಾಡುತ್ತಿರುವುದನ್ನು ನೋಡಿ ಪ್ರೇಕ್ಷಕರ ಮೈಮನ ಪುಳಕಗೊಂಡಿತು.

ಅಂಗವಿಕಲ ಈಜು ನೀರಿನಲ್ಲಿ ಪ್ರದರ್ಶಿಸುತ್ತಿದ್ದ ಒಂದೊಂದು ಕಸರತ್ತಿಗೂ ಪ್ರೇಕ್ಷಕರಿಂದ ಚಪ್ಪಾಳೆಯ ಸರಿಮಳೆ ಆಗುತ್ತಿತ್ತು. ಈತನ ಸಾಧನೆ ತಾವು ಎನನ್ನಾದರೂ ಸಾಧಿಸಬೇಕು ಎನ್ನುವ ಪ್ರೇರಣೆ ಮಕ್ಕಳಿಗೆ ನೀಡಿತು.

ಕೈಗಾದ ಸಹ್ಯಾದ್ರಿ ಕನ್ನಡ ಸಂಘವು ಮಲ್ಲಾಪುರದ ಕೈಗಾ ವಸತಿ ಸಂಕೀರ್ಣದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸುವುದಕ್ಕೂ ಮುನ್ನ ವಸತಿ ಸಂಕೀರ್ಣದ ಮೈದಾನದಲ್ಲಿರುವ ಈಜುಕೊಳದಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚುಕಾಲ ಪ್ರೀಸ್ಟೈಲ್, ಬಟರ್ ಫ್ಲೈ, ಶವಾಸನ ಹೀಗೆ ನಾನಾ ವಿದಧ ಈಜು ಕೌಶಲವನ್ನು ಅಣ್ವೇಕರ್ ಪ್ರದರ್ಶಿಸಿದರು.

 ಧ್ವನಿ ವರ್ಧಕದಲ್ಲಿ ಈತನ ಸಾಧನೆಗಳ ವಿವರಗಳನ್ನು ಕೇಳಿದ ಪ್ರೇಕ್ಷಕರು ಮೂಗಿನ ಮೇಲೆ ಬೆರಳಿಟ್ಟುಕೊಂಡರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅಣ್ವೇಕರ್ ಮಾತನಾಡಿ, ಬಾಲ್ಯದಲ್ಲಿ ನನ್ನನ್ನು ನೋಡಿ ಅನೇಕರು ಹೀಯಾಳಿಸುತ್ತಿದ್ದರು. ಇದನ್ನೆಲ್ಲ ಸಹಿಸಿಕೊಂಡು ಅದನ್ನೇ ಸವಾಲಾಗಿ ಸ್ವೀಕರಿಸಿದೆ. ಶ್ರಮಪಡದೆ ಜೀವನದಲ್ಲಿ ಏನೂ ಸಿಗುವುದಿಲ್ಲ. ನಿಮ್ಮ ನ್ಯೂನತೆಗಳನ್ನು ಮೆಟ್ಟಿನಿಲ್ಲಿ.  ಆಗಲೇ ನೀವು ಸಾಧನೆ ಮಾಡಲು ಸಾಧ್ಯ ಎಂದರು.

ಇಲ್ಲಿಯ ಜನರ ಪ್ರೀತಿ ನಿಜವಾಗಿ ಅವಿಸ್ಮರಣೀಯ. ಈ ಸಂಘ ಇನ್ನಷ್ಟು ಇಂತಹ ಕಾರ್ಯಕ್ರಮಗಳಿಗೆ ಮಾದರಿಯಾಗಲಿ ಎಂದು ಅಣ್ವೇಕರ್ ನುಡಿದರು. 

 ರಾಘವೇಂದ್ರ ಅಣ್ವೇಕರ್ ಕುರಿತು `ಪ್ರಜಾವಾಣಿ~ಯಲ್ಲಿ ಬಂದ ವರದಿ ನೋಡಿದ ಕೈಗಾದ ಉದ್ಯೋಗಿಗಳು ಧನ ಸಹಾಯ ಮಾಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮೀನುಗಾರಿಕೆ ಸಚಿವ ಆನಂದ ಅಸ್ನೋಟಿಕರ್ ಮಾತನಾಡಿ, ರಾಘವೇಂದ್ರ ಅಣ್ವೇಕರ್ ಅವರಿಗೆ ಸರ್ಕಾರಿ ನೌಕರಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT