ADVERTISEMENT

`ಯಕ್ಷಗಾನ ಕಲೆ ಅಭಿವೃದ್ಧಿಯಾಗಲಿ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 7:59 IST
Last Updated 17 ಡಿಸೆಂಬರ್ 2012, 7:59 IST

ಕಾರವಾರ: ಮಹಾಭಾರತದಲ್ಲಿ ಯಾವುದು ಇಲ್ಲವೋ ಅದು ಜಗತ್ತಿನಲ್ಲಿ ಇಲ್ಲ. ಅದೇ ರೀತಿ ಯಕ್ಷಗಾನದಲ್ಲಿ ಯಾವುದು ಇಲ್ಲವೋ ಅದು ವಿಶ್ವದಲ್ಲಿ ಇಲ್ಲ ಎಂದು ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ಪ್ರೊ. ಎಮ್.ಎಲ್. ಸಾಮಗ ಅಭಿಪ್ರಾಯಪಟ್ಟರು.

ವೆಂಕಟರಮಣ ನಾಯಕ ಹಿರೇಗುತ್ತಿ ಪ್ರತಿಷ್ಟಾನ ಭಾನುವಾರ ನಗರದ ಜಿಲ್ಲಾರಂಗ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡ 'ದ್ರೌಪದಿ ಪ್ರತಾಪ' ಯಕ್ಷಗಾನ ಪ್ರದರ್ಶನ ಹಾಗೂ ಕಲಾವಿದ ರಾಮಕೃಷ್ಣ ಗುಂದಿ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.

ಯಕ್ಷಗಾನ ಕಲೆ ಅಭಿವೃದ್ಧಿಯಾಗಬೇಕು. ಅದರ ಉನ್ನತೀಕರಣ ಮಾಡಬೇಕು. ವಿಶ್ವರೂಪವಾಗಿ ಈ ಕಲೆಯನ್ನು ಬೆಳೆಸಬೇಕಾಗಿದೆ. ಜಾಗತಿಕ ಮಟ್ಟದಲ್ಲಿ ಈ ಕಲೆಯನ್ನು ಗುರುತಿಸುವಂತಾಗಬೇಕಿದೆ. ಈ ನಿಟ್ಟಿನಲ್ಲಿ ಅಕಾಡೆಮಿ ಪ್ರಯತ್ನವನ್ನು ಮುಂದುವರಿಸಿದೆ ಎಂದರು.

ವೃತ್ತಿ ನಿರತ ಕಲಾವಿದರೊಂದಿಗೆ ಹವ್ಯಾಸಿ ಕಲಾವಿದರೂ ಯಕ್ಷಗಾನ ಕಲೆ ಉಳಿವಿಗೆ ಶ್ರಮಿಸುತ್ತಿದ್ದಾರೆ. ಇದು ಸಂತಸದ ಸಂಗತಿ. ಕಲೆಯಲ್ಲಿ ಆಸಕ್ತಿ ಇರುವುದರಿಂದ, ಅದರ ಬಗ್ಗೆ ಪ್ರೀತಿ, ಸೆಳೆತ ಇರುವುದರಿಂದಲೇ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಲು ಸಾಧ್ಯ ಎಂದು ಅವರು ನುಡಿದರು.

ವೃತ್ತಿ, ಹವ್ಯಾಸಿ ರಂಗಭೂಮಿ ಬೆಳೆದಂತೆ ಯಕ್ಷಗಾನವೂ ಬೆಳೆಯಬೇಕಾಗಿದೆ. ಈ ನಿಟ್ಟಿನಲ್ಲಿ ಯುವ ಪೀಳಿಗೆಯ ಪಾತ್ರ ಮಹತ್ವದ್ದಾಗಿದೆ. ರಾಜ್ಯದಾದ್ಯಂತ ನಡೆಯುವ ಯಕ್ಷಗಾನ ಶಿಬಿರಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಕ್ರಮವು ನಮ್ಮ ಯೋಜನೆಯಲ್ಲಿ ಸೇರಿದೆ ಎಂದರು.

ಯಕ್ಷಗಾನ ಕಲಾವಿದ, ದಿವೇಕರ ಕಾಲೇಜಿ ಪ್ರಾಂಶುಪಾಲ ರಾಮಕೃಷ್ಣ ಗುಂದಿ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಪ್ರತಿಷ್ಟಾನದ ಅಧ್ಯಕ್ಷ ಡಾ. ಎನ್.ವಿ.ನಾಯಕ ವೇದಿಕೆಯಲ್ಲಿದ್ದರು. ಡಾ. ವೈಜಯಂತಿ ನಾಯಕ ಸ್ವಾಗತಿಸಿದರು. ರಾಮಾ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.