ADVERTISEMENT

ಯಲ್ಲಾಪುರ ಕ್ಷೇತ್ರ: ಸಂಜೆ 5ರ ವರೆಗೂ ನಾಮಪತ್ರ ಸಲ್ಲಿಕೆ!

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2013, 12:52 IST
Last Updated 18 ಏಪ್ರಿಲ್ 2013, 12:52 IST

ಯಲ್ಲಾಪುರ/ಮುಂಡಗೋಡ: ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಬುಧವಾರ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ 12 ಜನ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಅವಧಿ 3 ಗಂಟೆಗೆ ಮುಗಿದರೂ, 5 ಗಂಟೆಯವರೆಗೆ ಪ್ರಕ್ರಿಯೆ ಮುಂದುವರಿದಿತ್ತು, 3 ಗಂಟೆಯ ಒಳಗೇ ಬಂದ ಅಭ್ಯರ್ಥಿಗಳಿಂದ ಮಾತ್ರ  ನಾಮಪತ್ರ ಸ್ವೀಕರಿಸಲಾಯಿತು.

ಜೆಡಿಎಸ್‌ನಿಂದ ಡಿ.ಅನಿಲಕುಮಾರ್ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ ಆಶಾ, ಸಹೋದರರಾದ ಅಜಿತ್‌ಕುಮಾರ್, ಶಾಜಿಕುಮಾರ್, ಪಿ.ಜಿ.ಭಟ್ಟ ಬರಗದ್ದೆ ಉಪಸ್ಥಿತರಿದ್ದರು.

ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪಟ್ಟಣದ ಗ್ರಾಮದೇವಿ ದೇವಸ್ಥಾನ ಹಾಗೂ ವಿವಿಧ ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಿದರು. ದೇವಿ ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಿದ ನಂತರದಲ್ಲಿ  ಸಾವಿರಾರು ಕಾರ್ಯಕರ್ತರು, ಅಭಿಮಾನಿಗಳೊಂದಿಗೆ ಮೆರವಣಿಗೆ ಸಾಗಿಬಂದರು.

ಕೆಜೆಪಿಯಿಂದ ಮಹೇಶ ಹೊಸ್ಕೊಪ್ಪ ನಾಮಪತ್ರದ ಮತ್ತೊಂದು ಸೆಟ್ ಸಲ್ಲಿಸಿದರು. ನ್ಯಾಷನಲ್ ಪೀಪಲ್ಸ್ ಪಾರ್ಟಿಯಿಂದ ನಾಗೇಶ ಬೋವಿವಡ್ಡರ್, ಬಿಎಸ್‌ಪಿಯಿಂದ ಶಕುಂತಲಾ ಪ್ರಭಾಕರ್ ಹರಿಕಂತ್ರ, ಜೆಡಿಯುನಿಂದ ಲಕ್ಷ್ಮಣ ಭೀಮಣ್ಣ ಬನ್ಸೊಡೆ, ಬಿಎಸ್‌ಆರ್‌ನಿಂದ ವೆಂಕಟ್ರಮಣ ಭಾಗ್ವತ ಹಾಗೂ ವಿಶ್ವನಾಥ ರಾಮಕೃಷ್ಣ ಭಾಗ್ವತ, ಅಖಿಲ ಭಾರತ ಹಿಂದು ಮಹಾಸಭಾದಿಂದ ಗಣೇಶ ನಾಗೇಶ ಭಂಡಾರಕರ್, ಪಕ್ಷೇತರರಾಗಿ ಸಂಗಮೇಶ ಬಿದರಿ, ಉಮೇಶ ಹೆಗಡೆ ಉಂಚಳ್ಳಿ, ಬಿಜೆಪಿ ಶಾಸಕ ವಿ.ಎಸ್.ಪಾಟೀಲ ಸಹೋದರ ವಿರೂಪಾಕ್ಷ ಗೌಡ ಶಿವನಗೌಡ ಪಾಟೀಲ ಹಾಗೂ ನೀಲಪ್ಪ ಕೀರಪ್ಪ ಲಮಾಣಿ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.