ADVERTISEMENT

ಯೋಜನೆಗಳ ಉಪಯೋಗ ಪಡೆಯಿರಿ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2011, 9:00 IST
Last Updated 22 ಫೆಬ್ರುವರಿ 2011, 9:00 IST

ಯಲ್ಲಾಪುರ: ಇಂದು ರೈತ ತೀರಾ ಸಂಕಷ್ಟದಲ್ಲಿದ್ದು ರೈತನಾಗಿ ಉಳಿಯುವುದೇ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೃಷಿಗೆ ಒತ್ತು ನೀಡಿ ರೈತ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಸಂಪೂರ್ಣ ಉಪಯೋಗವನ್ನು ರೈತರು ಪಡೆದುಕೊಳ್ಳುವಂತಾಗಬೇಕು ಎಂದು ಶಾಸಕ ವಿ.ಎಸ್. ಪಾಟೀಲ ಹೇಳಿದರು.ಅವರು ಸೋಮವಾರ ಸ್ಥಳೀಯ ವೈ.ಟಿ.ಎಸ್.ಎಸ್. ಮೈದಾನದಲ್ಲಿ ಆಯೋಜಿಸಿದ್ದ ಮೂರು ದಿನಗಳ ಕೃಷಿ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಸರ್ಕಾರದ ಯೋಜನೆಗಳ ಸಂಪೂರ್ಣ ಮಾಹಿತಿ ರೈತರಿಗೆ ನೀಡುವ ಕಾರ್ಯವಾಗಬೇಕಿದೆ. ಇವುಗಳ ಪ್ರಯೋಜನವನ್ನು ರೈತರು ಎಷ್ಟು ಪಡೆದುಕೊಳ್ಳುತ್ತಿದ್ದಾರೆ ಎಂದು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದರು.

ಸಾವಯವ ಕೃಷಿ ಪದ್ಧತಿಯನ್ನು ರೈತರು ಅಳವಡಿಸಿಕೊಳ್ಳುವುದರಿಂದ ಉತ್ತಮ ಬೆಳೆ ಬೆಳೆಯಬಹುದಾಗಿದೆ. ಕೀಟ ನಾಶಕಗಳ ಅಗತ್ಯತೆಯೂ ಕಡಿಮೆಯಾಗುತ್ತದೆ. ಸುಧಾರಿತ ತಳಿ ಉಪಯೋಗಿಸಿ ಹೆಚ್ಚಿನ ಬೆಳೆ ಬೆಳೆಯುವಂತೆ ಕರೆ ನೀಡಿದ ಶಾಸಕರು, ರೈತರಿಗೆ ಇದುವರೆಗೆ ಶೇ. 3 ಬಡ್ಡಿ ದರದಲ್ಲಿ ಸಾಲ ವಿತರಿಸಲಾಗುತ್ತಿದ್ದು, ಈ ಬಾರಿಯ ಬಜೆಟ್‌ನಲ್ಲಿ ಶೇ. 1 ರ ಬಡ್ಡಿದರದಲ್ಲಿ ಸಾಲ ನೀಡಲು ಯಡಿಯೂರಪ್ಪನವರ ಸರ್ಕಾರ ನಿರ್ಧರಿಸಿದೆ. ರೈತರಿಗೆ  ಕೃಷಿಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗುವ ಉದ್ದೇಶದಿಂದ ಪ್ರತಿ ತಾಲ್ಲೂಕು,  ಹಾಗೂ  ಜಿಲ್ಲಾ ಮಟ್ಟದ ಕೃಷಿ ಮೇಳಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಕೃಷಿ ಕೂಲಿಕಾರರ ಸಮಸ್ಯೆಗಳನ್ನು ಅರಿತ ಸರ್ಕಾರ  ಕೃಷಿ ಉಪಕರಣ, ಯಂತ್ರಗಳ ಖರೀದಿಗೆ ಸಬ್ಸಿಡಿಗಳನ್ನು ನೀಡುತ್ತಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಚಂದ್ರಶೇಖರ ಕೆ., ಕೃಷಿ ಮೇಳ ರೈತರಿಗೆ ಅನೇಕ ಮಾಹಿತಿ ನೀಡುತ್ತಿದ್ದು ಅದರ ಪ್ರಯೋಜನ ಪಡೆದುಕೊಂಡು ಅಭಿವೃದ್ಧಿ ಸಾಧಿಸುವಂತೆ ತಿಳಿಸಿದರು.ಜಂಟಿ ಕೃಷಿ ನಿರ್ದೇಶಕ ಎಸ್.ಎಂ. ಗಡಾದ  ರೈತರು, ಬೆಳೆ ಅಭಿವೃದ್ಧಿಯಲ್ಲಿ ಹೊಸ ಹೊಸ ವಿಧಾನಗಳನ್ನು ಅನುಸರಿಸಬೇಕೆಂದರು. ಪ.ಪಂ. ಅಧ್ಯಕ್ಷ ಪಿ.ಟಿ. ಮರಾಠೆ , ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸತೀಶ ಭಟ್ಟ ಜಾನುವಾರು ಮಳಿಗೆಯನ್ನು ಉದ್ಗಾಟಿಸಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ತಾ.ಪಂ. ಅಧ್ಯಕ್ಷೆ ಗಿರಿಜಾ ಕೊಂಬೆ ವಹಿಸಿ ಶುಭ ಕೋರಿದರು.

ವೇದಿಕೆಯಲ್ಲಿ ತಹಸೀಲ್ದಾರ ಮಂಜುನಾಥ ಬಳ್ಳಾರಿ, ಜಿ.ಪಂ. ಸದಸ್ಯ ರಾಘವೇಂದ್ರ ಭಟ್ಟ, ತಾ.ಪಂ. ಉಪಾಧ್ಯಕ್ಷ ನಟರಾಜ ಗೌಡ, ಟಿ.ಎಂ.ಎಸ್. ಅಧ್ಯಕ್ಷ ಆರ್.ಎನ್. ಹೆಗಡೆ ಗೊರ್ಸಗದ್ದೆ,  ಮಾಜಿ. ಜಿ.ಪಂ. ಸದಸ್ಯ ಉಮೇಶ ಭಾಗ್ವತ್, ಸಹಾಯಕ ಕೃಷಿ ನಿರ್ದೇಶಕ ಬಿ.ಡಿ. ಓಂಕಾರೇಶ್ವರ,  ಕೃಷಿ ಸಂಶೋಧನಾ ಕೇಂದ್ರದ ಡಾ. ಹನುಮರಟ್ಟಿ, ಡಾ. ಹಿರೇಮಠ. ಉಪಸ್ಥಿತರಿದ್ದರು,
ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿನಿಯರಾದ ವಸುಶ್ರೀ, ಮಧುರಾ, ವೈಶಾಲಿ ಸ್ವಾಗತ ಗೀತೆ ಹಾಡಿದರು. ಸರಸ್ವತಿ ಸಂಗೀತ ವಿದ್ಯಾಲಯದ  ವಿದ್ಯಾರ್ಥಿಗಳು ರೈತ ಗೀತೆ ಹಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಅಧಿಕಾರಿ ಅಮರಪ್ರಸಾದ ಶೆಟ್ಟಿ ಸ್ವಾಗತಿಸಿದರು.  ವಿನೇಶ ಭಟ್ಟ ವಂದಿಸಿದರು. ಕೃಷಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪರಿಚಯ ಪುಸ್ತಕವನ್ನು ಶಾಸಕ ವಿ.ಎಸ್. ಪಾಟೀಲ ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.