ADVERTISEMENT

ಯೋಜನೆಯಿಲ್ಲದ ಲೇಔಟ್ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 20 ಜೂನ್ 2013, 9:56 IST
Last Updated 20 ಜೂನ್ 2013, 9:56 IST

ಶಿರಸಿ: ನಗರ ಪ್ರದೇಶದ ವಿಸ್ತರಣೆ, ಹೆಚ್ಚಿದ ರಿಯಲ್ ಎಸ್ಟೇಟ್ ವ್ಯವಹಾರದಿಂದ ಗ್ರಾಮೀಣ ಪ್ರದೇಶದ ಕೃಷಿಭೂಮಿಗಳು ವಸತಿ ಕಾಲೊನಿಗಳಾಗಿ ಪರಿವರ್ತನೆಯಾಗುತ್ತಿದ್ದು, ಭೂಮಿ ಖರೀದಿಯ ಭರದಲ್ಲಿ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಲೇಔಟ್ ನಿರ್ಮಿಸಲಾಗುತ್ತಿದೆ.

ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅನಧಿಕೃತ ಆಸ್ತಿ ನೋಂದಣಿ ನಿಯಂತ್ರಿಸುವ ಕುರಿತಂತೆ ರಾಜ್ಯ ಸರ್ಕಾರ ಜನವರಿ ತಿಂಗಳಿನಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿದ್ದು, ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭೂ ಪರಿವರ್ತನೆ ಆದೇಶ ಇಲ್ಲದ ಮತ್ತು ಬಡಾವಣೆ ನಕ್ಷೆ ಅನುಮೋದನೆ ಇಲ್ಲದ ಆಸ್ತಿಗಳ ಕಾನೂನುಬಾಹಿರ ನೋಂದಣಿ ತಡೆಹಿಡಿಯುವ ಸಲುವಾಗಿ ವ್ಯವಸ್ಥೆ ರೂಪಿಸಬೇಕು ಹಾಗೂ ಅನಧಿಕೃತ ಆಸ್ತಿಗಳ ನೋಂದಣಿ ಕೂಡಲೇ ನಿಲ್ಲಿಸಬೇಕು ಎಂದು ಗ್ರಾ.ಪಂ.ಗಳಿಗೆ ಸೂಚಿಸಿದೆ. ರಂಗೋಲಿ ಕೆಳಗೆ ನುಸುಳುವ ಮೂಲಕ ಈ ಆದೇಶ ಉಲ್ಲಂಘಿಸಿ ಹೊಸ ಲೇಔಟ್‌ಗಳು ನಿರ್ಮಾಣವಾಗುತ್ತಿವೆ.

ಪಟ್ಟಣದ ಸುತ್ತಮುತ್ತಲಿನ ದೊಡ್ನಳ್ಳಿ, ಇಸಳೂರು, ಹುತ್ತಗಾರ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಇಂತಹ ಹತ್ತಾರು ಲೇಔಟ್‌ಗಳು ರಚನೆಯಾಗಿವೆ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಗ್ರಾಮೀಣ ಪ್ರದೇಶದ ಬೇಣ, ಗದ್ದೆಯಂತಹ ಜಾಗಗಳು 2 ಎಕರೆಯಿಂದ 10 ಎಕರೆಯವರೆಗೂ ಒಮ್ಮೆಲೆ ಖರೀದಿಯಾಗುತ್ತವೆ. ಈ ಜಾಗದಲ್ಲಿ ಲೇಔಟ್ ನಿರ್ಮಾಣ ಮಾಡುವಾಗ ರಸ್ತೆ, ಚರಂಡಿ, ಆಟದ ಮೈದಾನ ಸೇರಿದಂತೆ ವಿವಿಧ ಮೂಲ ಸೌಕರ್ಯ ಒದಗಿಸಬೇಕೆಂಬ ನಗರ ಯೋಜನಾ ಪ್ರಾಧಿಕಾರದ ನಿಯಮವಿದ್ದರೂ ಅವನ್ನೆಲ್ಲ ಕಡೆಗಣಿಸಿ ಬಿಡಿಯಾಗಿ ಗುಂಟೆವಾರು ಸೈಟ್ ಮಾರಾಟ ಮಾಡಲಾಗುತ್ತಿದೆ.

ಯೋಜನೆಯಿಲ್ಲದೆ ರೂಪುಗೊಂಡ ಲೇಔಟ್‌ನಲ್ಲಿ ಜಾಗದ ಮಾಲೀಕರು ಮನೆ ಕಟ್ಟಿ ವಸತಿ ಪ್ರಾರಂಭಿಸಿದ ಮೇಲೆ ಒಂದೊಂದಾಗಿ ಸಮಸ್ಯೆಗಳು ಎದುರಾಗುತ್ತಿವೆ. ಸಮರ್ಪಕ ಚರಂಡಿ ಕೊರತೆಯಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಇರುವುದಿಲ್ಲ. ಸಮಸ್ಯೆ ಎದುರಾದಾಗ ಸಂಬಂಧಿತ ಗಾಮ ಪಂಚಾಯ್ತಿಗೆ ದುಂಬಾಲು ಬೀಳುವ ನಿವಾಸಿಗಳು ಚರಂಡಿ, ಬೀದಿದೀಪ, ರಸ್ತೆ ಮತ್ತಿತರ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸುತ್ತಾರೆ. ಇದು ಗ್ರಾಮ ಪಂಚಾಯ್ತಿಗಳಿಗೆ ದೊಡ್ಡ ತಲೆನೋವಾಗಿದ್ದು, ದೊಡ್ಡ ಬಡಾವಣೆಯಲ್ಲಿ ವಿಕೇಂದ್ರಿತವಾಗಿ ನಿರ್ಮಾಣವಾಗುವ ಮನೆಗಳಿಗೆ ಪ್ರತ್ಯೇಕ ಸೌಲಭ್ಯ ಒದಗಿಸಲು ಲಕ್ಷಾಂತರ ರೂಪಾಯಿ ವೆಚ್ಚ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಲೇಔಟ್‌ಗಳಲ್ಲಿರುವ ನಿವೇಶನ ಒಬ್ಬರಿಂದ ಇನ್ನೊಬ್ಬರ ಹೆಸರಿಗೆ ಬದಲಾಗುವಾಗ ನಮೂನೆ-9 ಹಾಗೂ ನಮೂನೆ-11ನ್ನು ಸಂಬಂಧಿತ ಗ್ರಾ.ಪಂ.ನಿಂದ ಕಡ್ಡಾಯವಾಗಿ ಪಡೆಯಬೇಕು. ಈ ಹಿನ್ನೆಲೆಯಲ್ಲಿ ಪ್ರಾಧಿಕಾರದ ಅನುಮೋದನೆ ಇಲ್ಲದ ಲೇಔಟ್‌ಗಳ ನೋಂದಣಿಗೆ ಅನುಮತಿ ನೀಡದಂತೆ ಪ್ರಾಧಿಕಾರ ಗ್ರಾಮ ಪಂಚಾಯ್ತಿಗಳಿಗೆ ಆದೇಶಿಸಿದೆ. ಆದರೆ ಟೇಬಲ್ ಕೆಳಗಿನ ವ್ಯವಹಾರದಲ್ಲಿ ಈ ಆದೇಶ ನಿರ್ಲಕ್ಷ್ಯಿಸಲ್ಪಟ್ಟಿದ್ದು, ಪಂಚಾಯ್ತಿ  ಪ್ರಮುಖರ ಮೂಲಕ ನಿಗದಿತ ನಮೂನೆ ಸುಲಭವಾಗಿ ದೊರೆಯುತ್ತದೆ!

ನಗರದ ಹೊರವಲಯದ ಚಿಪಗಿ ಸಮೀಪ ಹೊಸದಾಗಿ ರೂಪುಗೊಂಡ ಬಡಾವಣೆಯ ಸೈಟ್ ಪರಭಾರೆಗೆ ಅನುಮತಿ ನೀಡಲು ನಿರಾಕರಿಸಿದ ಅಧಿಕಾರಿಯನ್ನು ರಾಜಕೀಯ ಪ್ರಭಾವದಿಂದ ರಾತ್ರಿ ಬೆಳಗಾಗುವಷ್ಟರಲ್ಲಿ ಸದ್ದಿಲ್ಲದೆ ಎತ್ತಂಗಡಿ ಮಾಡಿದ ಘಟನೆಯೂ ನಡೆದಿದೆ.

`ವ್ಯಾಪಕವಾಗಿ ವಿಸ್ತರಿಸಿದ ಲೇಔಟ್ ಉದ್ಯಮದಿಂದ ಜಾಗದ ಬೆಲೆ ಗಗನಕ್ಕೇರಿದೆ. ಇಸಳೂರು ಸುತ್ತಮುತ್ತಲಿನ ಒಂದು ಎಕರೆ ಜಾಗಕ್ಕೆ ನಾಲ್ಕಾರು ವರ್ಷಗಳ ಹಿಂದೆ 2-3 ಲಕ್ಷ ರೂಪಾಯಿ ಬೆಲೆ ಇದ್ದರೆ ಈಗ ಇದೇ ಜಾಗದ ಬೆಲೆ 20-22 ಲಕ್ಷ ರೂಪಾಯಿಗೆ ಜಿಗಿದಿದೆ. ಒಂದೆರಡು ವರ್ಷಗಳಲ್ಲಿ ಈ ಭಾಗದಲ್ಲಿ ಸುಮಾರು 30 ಎಕರೆಯಷ್ಟು ಜಾಗ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಖರೀದಿಯಾಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಅಳಲು ತೊಡಿಕೊಂಡರು.

ಇಸಳೂರು ಗ್ರಾ.ಪಂ.ನಲ್ಲಿ ಹಿಂದಿನ ಒಂದು ತಿಂಗಳ ಅವಧಿಯಲ್ಲಿ 15 ಮಂದಿ ಅರ್ಜಿ ನಮೂನೆ ಒಯ್ದಿದ್ದಾರೆ ಎಂದು ಗ್ರಾಮ ಪಂಚಾಯ್ತಿ ಸದಸ್ಯ ಆರ್.ವಿ.ಹೆಗಡೆ ಹೇಳುತ್ತಾರೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.