ADVERTISEMENT

ರಂಗಾಸಕ್ತರಿಂದ ದೂರವಾದ ರಂಗಶಾಲೆ

ನಾಟಕ ಪ್ರದರ್ಶನಕ್ಕೆ ಜಿಲ್ಲೆಯಲ್ಲಿಲ್ಲ ಕಾಯಂ ವೇದಿಕೆ , ಸಂಘಟನೆ, ತರಬೇತಿ ಕೊರತೆ

ಸದಾಶಿವ ಎಂ.ಎಸ್‌.
Published 26 ಮಾರ್ಚ್ 2019, 20:30 IST
Last Updated 26 ಮಾರ್ಚ್ 2019, 20:30 IST
ಚಿಂತನ ರಂಗ ಅಧ್ಯಯನ ಕೇಂದ್ರದಿಂದ ಶಾಲಾ ವಿದ್ಯಾರ್ಥಿಗಳಿಗೆ ರಂಗ ತರಬೇತಿಯ ದೃಶ್ಯ
ಚಿಂತನ ರಂಗ ಅಧ್ಯಯನ ಕೇಂದ್ರದಿಂದ ಶಾಲಾ ವಿದ್ಯಾರ್ಥಿಗಳಿಗೆ ರಂಗ ತರಬೇತಿಯ ದೃಶ್ಯ   

ಕಾರವಾರ: ರಾಜ್ಯದ ರಂಗಭೂಮಿಗೆ ಅತ್ಯಮೂಲ್ಯ ಕೊಡುಗೆಗಳನ್ನು ನೀಡಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದಕ್ಕೆ ಸಂಬಂಧಿಸಿದ ಸಂಘಟನೆ ಹಾಗೂ ತರಬೇತಿ ಕೇಂದ್ರವಿಲ್ಲ. ಇದರಿಂದಾಗಿ ಜಿಲ್ಲೆಯ ಹಲವು ಪ್ರತಿಭೆಗಳು ತವರಿಗೆ ಅಪರಿಚಿತರಾಗಿಯೇ ಉಳಿಯುವಂತಾಗಿದೆ ಎಂಬ ಕೊರಗು ರಂಗಪ್ರಿಯರದ್ದು.

‘ರಂಗಭೂಮಿಯಲ್ಲಿ ಅತ್ಯಂತ ಹೆಚ್ಚು ತರಬೇತಿ ಪಡೆದ, ಸೃಜನಶೀಲವಾಗಿ ತೊಡಗಿಕೊಂಡ ಅನೇಕರು ಈಗ ನಮ್ಮ ಜಿಲ್ಲೆಯಲ್ಲಿಲ್ಲ. ಅವರೆಲ್ಲರೂ ಬೇರೆ ಕಡೆಯಿದ್ದಾರೆ. ಇಲ್ಲಿ ಕಲಾವಿದರು, ಸಂಗೀತ ನಿರ್ದೇಶಕರಿಗೆ ಕೊರತೆಯೇ ಇಲ್ಲ. ರಾಜ್ಯ ರಂಗಭೂಮಿಯ ಸಂಗೀತಕಾರರಲ್ಲಿ ಅತಿಹೆಚ್ಚು ಮಂದಿ ಇಲ್ಲಿಯವರಿದ್ದಾರೆ. ಆದರೆ, ಸಂಘಟನೆಯಿಲ್ಲ’ ಎನ್ನುತ್ತಾರೆ ಹಿರಿಯ ರಂಗನಿರ್ದೇಶಕ ಶ್ರೀಪಾದ ಭಟ್.

‘ನಾನು ಉತ್ತರ ಕನ್ನಡ ಜಿಲ್ಲೆಗೆಂದೇ ನಾಟಕ ನಿರ್ದೇಶನ, ಪ್ರದರ್ಶನ ಮಾಡದೇ ನಾಲ್ಕೈದು ವರ್ಷಗಳಾದವು. ಒಂದುವೇಳೆ, ಮಾಡಿದರೂ ನಾನೇ ಜನರನ್ನು ಕರೆದುಕೊಂಡು ಬಂದು ನೋಡಿ ಎಂದು ಹೇಳಬೇಕು. ಅದರ ಬದಲು, ರಾಜ್ಯದ ಬೇರೆ ಕಡೆಗಳಲ್ಲಿ ಕ್ರಿಯಾಶೀಲವಾಗಿರುವ ಜಿಲ್ಲೆಗಳಿಗೆ ಹೋಗಿ ನಾಟಕ ನಿರ್ದೇಶಿಸಿ ಬರುತ್ತೇನೆ’ ಎಂದು ಅನಿವಾರ್ಯತೆಯನ್ನು ವಿವರಿಸಿದರು.

ADVERTISEMENT

ಜಿಲ್ಲೆಯ ಪ್ರಭಾವ: ಚಿಂತನ ರಂಗ ಅಧ್ಯಯನ ಕೇಂದ್ರದ ಕಿರಣ್ ಭಟ್, ‘ಮರಾಠಿ ರಂಗ ಚಳವಳಿ ಶುರುವಾಗಿದ್ದೇ ಉತ್ತರ ಕನ್ನಡ ಜಿಲ್ಲೆಯ ಕರ್ಕಿ ಮೇಳದ ಯಕ್ಷಗಾನದ ಪ್ರಭಾವದಿಂದ ಎಂದರೆ ತಪ್ಪಿಲ್ಲ. ಮಹಾರಾಷ್ಟ್ರದ ಸಾಂಗ್ಲಿಗೆ ತೆರಳಿದ್ದ ಕರ್ಕಿ ಹಾಸ್ಯಗಾರರ ಮೇಳ ಯಕ್ಷಗಾನ ಪ್ರದರ್ಶನ ಕೊಟ್ಟಿತ್ತು. ಅದನ್ನು ನೋಡಿದ ಅಲ್ಲಿಯ ಪೇಶ್ವೆ, ಇಂತಹ ನಾಟಕ ಮಾಡಬೇಕು ಎಂದು ಅಲ್ಲಿಯ ಕಲಾವಿದರಿಗೆ ತಾಕೀತು ಮಾಡಿದರು. ಇದರ ಪ್ರಭಾವದಿಂದ ಮರಾಠಿ ನಾಟಕ ಬೆಳೆಯಿತು’ ಎಂದು ಮೆಲುಕು ಹಾಕಿದರು.

‘ಕನ್ನಡದ ಮೊದಲ ಸ್ವತಂತ್ರ ಸಾಮಾಜಿಕ ನಾಟಕ ಎನ್ನಲಾಗಿರುವ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ವು ಸುಮಾರು 115 ವರ್ಷಗಳ ಹಿಂದೆ ಶಿರಸಿಯಲ್ಲಿ ಪ್ರದರ್ಶನವಾಯಿತು. ಅದನ್ನು ಸೂರಿ ವೆಂಕಟ್ರಮಣ ಶಾಸ್ತ್ರಿ ಬರೆದಿದ್ದರು. ಆ ಕಾಲದಲ್ಲಿ ಅದೊಂದು ಚಳವಳಿಯನ್ನೇ ಹುಟ್ಟುಹಾಕಿದ ನಾಟಕ’ ಎಂದು ಸ್ಮರಿಸಿದರು.

‘ಜಯಕರ್ನಾಟಕ ನಾಟಕ ಸಂಘ, ಹುಲಿಮನೆ ಸೀತಾರಾಮ ಶಾಸ್ತ್ರಿ ಕೂಡ ಹಲವಾರು ರಂಗಪ್ರಯೋಗಗಳನ್ನು ಮಾಡಿದ್ದರು. ಅಂದಿನ ದಿನಗಳಲ್ಲೇ ಶಿರಸಿಯಲ್ಲಿ ಮಹಿಳಾ ನಾಟಕ ಮಂಡಳಿಯಿತ್ತಂತೆ. 80ರ ದಶಕದಲ್ಲಿ ಮಂಚಿಕೇರಿಯ ರಾಜರಾಜೇಶ್ವರಿ ನಾಟ್ಯಸಂಘದವರು ಹೆಗ್ಗೋಡಿನಿಂದ ನಿರ್ದೇಶಕರನ್ನು ಕರೆಸಿ ನಾಟಕಗಳನ್ನು ಮಾಡಿಸುತ್ತಿದ್ದರು. ಆ ಸಂದರ್ಭದಲ್ಲಿ ಶಿರಸಿಯಲ್ಲಿ ಆರಂಭವಾದ ಗೆಳೆಯರ ಬಳಗ ತಂಡವು ಹೊಸ ಮಾದರಿಯ ಪ್ರಯೋಗಗಳನ್ನು ಮಾಡಿತ್ತು’ ಎಂದು ವಿವರಿಸಿದರು.

ಈಗ ಸಿದ್ದಾಪುರ ಭಾಗದಲ್ಲಿ ಹೆಚ್ಚು ರಂಗ ಚಟುವಟಿಕೆಗಳು ನಡೆಯುತ್ತಿವೆ. ಹುಲಿಮನೆ ಗಣಪತಿ, ಹಿತ್ಲಕೈ ಗಣಪತಿ ಅವರ ಎರಡು ತಂಡಗಳು ಸೇರಿದಂತೆ ಕೆಲವರು ಉತ್ತಮ ಕೆಲಸ ಮಾಡುತ್ತಿವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ನಾಟಕ ತರಬೇತಿ ಕೇಂದ್ರಗಳಿಲ್ಲ’

‘ಜಿಲ್ಲೆಯಲ್ಲಿ ಅಧಿಕೃತ ನಾಟಕ ತರಬೇತಿ ಕೇಂದ್ರಗಳಿಲ್ಲ. ಹಲವು ಜಿಲ್ಲೆಗಳಲ್ಲಿ ಎರಡು ಮೂರು ರಂಗಶಾಲೆಗಳಿವೆ. ಇಲ್ಲಿ ಸಂಪನ್ಮೂಲ ವ್ಯಕ್ತಿಗಳಿದ್ದಾರೆ. ಆದರೆ, ಅವರ ಬಳಕೆಯಾಗುತ್ತಿಲ್ಲ. ಸಂಘಟನಾತ್ಮಕಾಗಿ ತುಂಬ ಹಿಂದುಳಿದಿದ್ದೇವೆ’ ಎಂದು ಶ್ರೀಪಾದ ಭಟ್ ವಿಷಾದಿಸುತ್ತಾರೆ.

‘ರಂಗಪ್ರಿಯರ ಮನವಿಯ ಮೇರೆಗೆ ಪ್ರತಿಷ್ಠಿತ ರಂಗ ಸಂಘಟನೆಗಳು ನಾಟಕ ಪ್ರದರ್ಶನ ಮಾಡಲು ಮುಂದೆ ಬರುತ್ತವೆ. ಆದರೆ, ಸೂಕ್ತ ವೇದಿಕೆಯಿಲ್ಲದೇ ಕಲ್ಯಾಣಮಂಟಪಗಳಲ್ಲಿ ಆಯೋಜಿಸಬೇಕಾಗುತ್ತದೆ. ಅವುಗಳಿಗೆ ದುಬಾರಿ ಬಾಡಿಗೆ ಕೊಡಬೇಕು. ಇದರ ಪರಿಣಾಮವಾಗಿ ಜಿಲ್ಲೆಯ ರಂಗಾಸಕ್ತರಿಂದ ಪ್ರಸಿದ್ಧ ಕಲಾವಿದರು, ನಾಟಕಗಳು ದೂರವೇ ಇರುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.