ADVERTISEMENT

ರಸ್ತೆತಡೆ, ಪ್ರತಿಭಟನಾ ಮೆರವಣಿಗೆ

ಕಬ್ಬಿನ ಬಾಕಿ ಹಣ ಪಾವತಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2018, 12:44 IST
Last Updated 6 ಜೂನ್ 2018, 12:44 IST

ಹಳಿಯಾಳ: ಸ್ಥಳೀಯ ಇಐಡಿ ಪ್ಯಾರಿ ಸಕ್ಕರೆ ಕಾರ್ಖಾನೆಗೆ 2016-17ನೇ ಸಾಲಿನಲ್ಲಿ ಕಬ್ಬು ಪೂರೈಸಿದ ಬೆಳೆಗಾರರಿಗೆ ಬಾಕಿ ಪಾವತಿಗೆ ಆಗ್ರಹಿಸಿ ಮಾಜಿ ಶಾಸಕ ಸುನೀಲ ಹೆಗಡೆ ನೇತೃತ್ವದಲ್ಲಿ ಸೋಮವಾರ ಬಿಜೆಪಿ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ, ರಸ್ತೆತಡೆ ನಡೆಸಿದರು.

₹305 ಪ್ರತಿ ಟನ್‌ಗೆ ಬಾಕಿ ಬರಬೇಕಾಗಿದೆ. ಈವರೆಗೂ ಕಬ್ಬು ಬೆಳೆಗಾರರಿಗೆ ಪಾವತಿಸಿಲ್ಲ. ಕೂಡಲೇ ಬಾಕಿ ಹಣ ಪಾವತಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬೆಳಿಗ್ಗೆ ಗಣೇಶ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರು ಸೇರಿ ಅಲ್ಲಿಂದ ಮೆರವಣಿಗೆ ಮೂಲಕ ಶಿವಾಜಿ ಸರ್ಕಲ್‌ಗೆ ತೆರಳಿ ಕೆಲ ನಿಮಿಷ ಪ್ರತಿಭಟನೆ, ರಸ್ತೆತಡೆ ನಡೆಸಿದರು. ಬಳಿಕ ತಹಶೀಲ್ದಾರ್ ಎಂ.ಎನ್. ಮಠದ ಅವರಿಗೆ ಮನವಿ ಸಲ್ಲಿಸಿದರು.

ADVERTISEMENT

‘ಪ್ರಸಕ್ತ ಸಾಲಿನಲ್ಲಿ ಕಬ್ಬು ನುರಿಸುವ ಪೂರ್ವದಲ್ಲಿ ₹305 ಬಾಕಿ ನೀಡುತ್ತೇವೆ ಎಂದು ಹೇಳಿ ಕಾರ್ಖಾನೆಯವರು ಕಬ್ಬು ಪಡೆದು ಈವರೆಗೂ ಬಾಕಿ ಪಾವತಿಸಿಲ್ಲ. 10 ದಿನಗಳೊಳಗಾಗಿ ಬಾಕಿ ಪಾವತಿಸದಿದ್ದಲ್ಲಿ ಸಕ್ಕರೆ ಕಾರ್ಖಾನೆಗೆ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ಮಾಡಲಾಗುವುದು’ ಎಂದು ಸುನೀಲ ಹೆಗಡೆ ಎಚ್ಚರಿಸಿದರು.

‘ಕಾರ್ಖಾನೆಯಲ್ಲಿ ತೂಕದ ಬಗ್ಗೆಯೂ ವ್ಯತಾಸ ಕಂಡುಬರುತ್ತಿದೆ. ತಹಶೀಲ್ದಾರ್ ನೇತ್ರತ್ವದಲ್ಲಿ ಖುದ್ದು ಪರಿಶೀಲಿಸಿ ಕಬ್ಬು ಬೆಳೆಗಾರರ ಸಭೆ ಕರೆಯಬೇಕು. ಕಾರ್ಖಾನೆಗೆ ನೇಮಕಗೊಂಡ ನೌಕರರನ್ನು ಕಾರಣಕ್ಕೂ ಕಡಿತಗೊಳಿಸಬಾರದು. 10 ದಿನಗಳೊಳಗಾಗಿ ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಬೇಕು’ ಎಂದರು.

ವಿವಿಧ ಬೇಡಿಕೆಗಲ ಮನವಿಪತ್ರವನ್ನು ಸಲ್ಲಿಸಿದರು. ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಶಿವಾಜಿ ನರಸಾನಿ, ಮುಖಂಡರಾದ ವಿ.ಎಂ. ಪಾಟೀಲ ಮಂಗೇಶ ದೇಶಪಾಂಡೆ, ಸೋನಪ್ಪಾ ಸುಣಕಾರ, ರೂಪಾ ಗಿರಿ, ಲಕ್ಷ್ಮಿ ಭಜಂತ್ರಿ, ಬಸಣ್ಣಾ ಕುರುಬಕಟ್ಟಿ, ಅನಿಲ ಮುತ್ನಾಳ, ಜಯಲಕ್ಷ್ಮಿ ಚವಾಣ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.