ADVERTISEMENT

ರಾಜ್ಯದ ಬಿಜೆಪಿಗೆ ನಾಯಕತ್ವದ ಕೊರತೆ

ತಮ್ಮ ರಾಜ್ಯದಲ್ಲಿಯೇ ಜನರಿಗೆ ರಕ್ಷಣೆ ನೀಡಲಾಗದ ಯೋಗಿ: ಕುಮಾರಸ್ವಾಮಿ ಟೀಕೆ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 7:24 IST
Last Updated 16 ಮಾರ್ಚ್ 2018, 7:24 IST
ರಾಜ್ಯದ ಬಿಜೆಪಿಗೆ ನಾಯಕತ್ವದ ಕೊರತೆ
ರಾಜ್ಯದ ಬಿಜೆಪಿಗೆ ನಾಯಕತ್ವದ ಕೊರತೆ   

ಸಿದ್ದಾಪುರ: ‘ರಾಜ್ಯದ ಬಿಜೆಪಿಗೆ ನಾಯಕತ್ವದ ಕೊರತೆ ಉಂಟಾಗಿದೆ. ಆದ್ದರಿಂದ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಬರುತ್ತಿದ್ದಾರೆ’ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಟೀಕಿಸಿದರು.

ಪಟ್ಟಣದ ನೆಹರೂ ಮೈದಾನದಲ್ಲಿ ಬುಧವಾರ ರಾತ್ರಿ ಜೆಡಿಎಸ್ ಏರ್ಪಡಿಸಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

‘ಬಿಜೆಪಿಯವರು ಇತ್ತೀಚೆಗೆ ಆಯೋಜಿಸಿದ್ದ ಜನ ಸುರಕ್ಷಾ ಯಾತ್ರೆಯ ಸಂದೇಶ ನೀಡಲು ಯೋಗಿ ಆದಿತ್ಯನಾಥರನ್ನು ಕರೆ ತಂದಿದ್ದಾರೆ. ಗೋರಖಪುರ ಜಿಲ್ಲೆಯಲ್ಲಿ 150 ಮಕ್ಕಳು ಸರಿಯಾಗಿ ಚಿಕಿತ್ಸೆ ಸಿಗದೇ ಮೃತಪಟ್ಟಿದ್ದಾರೆ. ಆ ರಾಜ್ಯದಲ್ಲಿಯೇ ಜನರಿಗೆ ರಕ್ಷಣೆ ನೀಡಲಾಗದ ಮುಖ್ಯಮಂತ್ರಿ ಅವರು’ ಎಂದೂ ಟೀಕಾಪ್ರಹಾರ ಮಾಡಿದರು.

ADVERTISEMENT

‘ನಾನು ಸಮಾಜ ಒಡೆಯುವ ಕೆಲಸ ಮಾಡಲು ಇಲ್ಲಿಗೆ ಬಂದಿಲ್ಲ. ಸಮಸ್ಯೆಯನ್ನು ಪರಿಹರಿಸಲು ಬಂದಿದ್ದೇನೆ. ರೈತರ ಸಾಲಮನ್ನಾ ಮಾಡುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಬೇಕಾಗಿಲ್ಲ. ನನ್ನ ಪಕ್ಷ ಅಧಿಕಾರ ಬಂದ 24 ಗಂಟೆಯೊಳಗೆ ರೈತರ ಸಾಲಮನ್ನಾ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ಶಿರಸಿ ಸಿದ್ದಾಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಶಿಭೂಷಣ ಹೆಗಡೆ ಮಾತನಾಡಿ, ‘5 ವರ್ಷದಲ್ಲಿ ಈ ಕ್ಷೇತ್ರದ ಜನರ ಸಮಸ್ಯೆಗಳಿಗೆ ಜನಪ್ರತಿ
ನಿಧಿಗಳಿಗಿಂತ ಮೊದಲು ಹೋರಾಟ ಮಾಡಿದ್ದೇನೆ. ಈಗ ಜೆಡಿಎಸ್ ಬಲಾಢ್ಯವಾಗಿ ಬೆಳೆದಿದೆ. ನಾವು ಮನೆಮನೆಗೆ ತಲುಪಿದ್ದೇವೆ. ಶಾಸಕನಿಗೆ ವಿದ್ಯಾರ್ಹತೆ, ದೂರದರ್ಶಿತ್ವ, ಅಧ್ಯಯನ ಶೀಲತೆಬೇಕು. ನನಗೆ ಶಾಸಕನಾಗುವ ಅರ್ಹತೆ ಇಲ್ಲವೆ’ ಎಂದು ಪ್ರಶ್ನಿಸಿದರು.

ಜೆಡಿಎಸ್ ಪಕ್ಷದ ಪ್ರಮುಖರಾದ ಬಸವರಾಜ ಹೊರಟ್ಟಿ, ಮರಿತಿಬ್ಬೆ ಗೌಡ, ಮಧು ಬಂಗಾರಪ್ಪ, ಆನಂದ ಆಸ್ನೋಟಿಕರ್, ಬಿಎಸ್‌ಪಿಯ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ಜೋಗಳೇಕರ ಮಾತನಾಡಿದರು. ಇನಾಯಿತುಲ್ಲಾ ಶಾಬಂದ್ರಿ, ಸೈಯದ್ ಅಲ್ತಾಫ್, ಎಸ್.ಕೆ.ನಾಯ್ಕ, ಜುಬೇರ್, ರಾಘವೇಂದ್ರ ಕೋರೆಕರ್ ಇದ್ದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಆರ್.ನಾಯ್ಕ ಸ್ವಾಗತಿಸಿದರು. ಎನ್‌.ಟಿ.ನಾಯ್ಕ ಹಾಗೂ ಮಾನಸಾ ಹೆಗಡೆ ನಿರೂಪಿಸಿದರು.

‘ನಾನೂ ಬಯ್ಯಬಹುದು’
‘ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಅವರಿಗಿಂತ ನಾನೂ ಹೆಚ್ಚು ಬಯ್ಯಬಹುದು, ನಾನು ಗೌಡನ ಮಗ. ಕೆಟ್ಟ ಪದಗಳನ್ನು ಉಪಯೋಗಿಸಿ ಸುಮಾರು ಎರಡು ತಾಸು ಬಯ್ಯಬಲ್ಲೆ. ಆದರೆ ಹಾಗೆ ಮಾಡುವುದರಿಂದ ಸಮಸ್ಯೆಗೆ ಪರಿಹಾರ ದೊರೆಯುತ್ತದೆಯೇ’ ಎಂದು ಕುಮಾರಸ್ವಾಮಿ ಪ‍್ರಶ್ನಿಸಿದರು.

‘ಜಿಲ್ಲೆಯ ಸಮಸ್ಯೆಗಳು ಪರಿಹಾರವಾಗಲಿ ಎಂದು ಅನಂತಕುಮಾರ್ ಹೆಗಡೆ ಅವರಿಗೆ ನೀವು ಅಧಿಕಾರ ಕೊಟ್ಟಿದ್ದೀರಿ. ಅವರಿಗೆ ಭಗವಂತ (ಸಚಿವ ಸ್ಥಾನದ) ಅವಕಾಶ ನೀಡಿದ್ದಾನೆ. ಆದರೆ ಅವರು ಕೆಟ್ಟ ಭಾಷೆ ಉಪಯೋಗ ಮಾಡುತ್ತ ಓಡಾಡಿದರೆ, ಅವರಿಗೆ ಮುಂದೆ ಜನ ಮತ ಹಾಕುತ್ತಾರೆಯೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.