ADVERTISEMENT

ರಾಮನನ್ನು ನಂಬಿದವರಿಗೆ ಬೇರಾವುದರ ಅಗತ್ಯವಿಲ್ಲ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 6:50 IST
Last Updated 13 ಸೆಪ್ಟೆಂಬರ್ 2011, 6:50 IST

ಕಾರವಾರ: ನಾವು ನಮ್ಮ ಶರೀರ, ಬಳಗ, ನಮ್ಮ ಕುಟುಂಬ ಎಂಬ ಸೀಮಿತವಾದ ಬೇಲಿಯನ್ನು ಹಾಕಿಕೊಂಡು ಜೀವಿಸುತ್ತೇವೆ. ಆದರೆ, ಈ ಸೀಮೆಯನ್ನು ದಾಟಿ ಸಮಾಜದತ್ತ ಕಣ್ಣು ಹೊರಳಿಸಿದರೆ ಆಗುವ ಅನುಭೂತಿಯೇ ಬೇರೆ ಎಂದು ರಾಘವೇಶ್ವರ ಸ್ವಾಮೀಜಿ ಹೇಳಿದರು.

ಗೋಕರ್ಣದ ಅಶೋಕೆಯಲ್ಲಿ  ಹದಿನೆಂಟನೇ ಚಾತುರ್ಮಾಸ ವ್ರತದ ಸೀಮೋಲ್ಲಂಘನ ಮಾಡಿ ಬಳಿಕ ನಡೆದ ಧರ್ಮಸಭೆಯಲ್ಲಿ ಶಿಷ್ಯರಿಗೆ ಅನುಗ್ರಹ ಸಂದೇಶ ನೀಡಿದ ಅವರು, ಎಲ್ಲರೂ ನಮ್ಮವರೆಂದುಕೊಂಡು ವ್ಯವಹರಿಸಿದಾಗ ಆಗುವ ಸಂತೋಷ ಅನಿರ್ವಚನೀಯವಾದುದು ಎಂದರು.

ಇಷ್ಟು ದಿನಗಳಕಾಲ ಅಶೋಕೆಯಲ್ಲಿ ರಾಮಕಥಾ ಪ್ರವಚನ ನಡೆಯುತ್ತಿತ್ತು. ಇದು ಅಕ್ಷರಶಃ ಅಯೋಧ್ಯೆಯಾಗಿ ಪರಿವರ್ತಿತವಾಗಿತ್ತು. ಮಠದ ಆರಾಧ್ಯ ದೇವ ರಾಮಚಂದ್ರನು ಈ ಪ್ರದೇಶದಿಂದ ಆಕರ್ಷಿತನಾಗಿ ಆದಿಶಂಕರಾಚಾರ್ಯರ ಮೂಲಕ ದೂರದ ಅಯೋಧ್ಯೆಯಿಂದ ಇಲ್ಲಿಗೆ ಬಂದು ನೆಲೆಸಿದ. ಅಶೋಕೆ ಹಲವು ವಿಸ್ಮಯಗಳ ತಾಣ ಎಂದರು.

ನಮ್ಮ ಪರಂಪರೆಯವರೆಲ್ಲರೂ ರಾಮಚಂದ್ರನ ನೆರಳಿನಲ್ಲಿಯೇ ಬಾಳಿ ಬದುಕಿದವರು.  ರಾಮನನ್ನು ನಂಬಿ ಬದುಕುವವರಿಗೆ ಬೇರಾವುದರ ಅಗತ್ಯವೂ ಇಲ್ಲ ಎಂದು ಸ್ವಾಮೀಜಿ ನುಡಿದರು. ಶಿಷ್ಯರು ನದಿಗಳಾದರೆ ಗುರು ಸಮುದ್ರದಂತೆ. ವರ್ಷವಿಡೀ ಸಂಚರಿಸುತ್ತ ಸಮಾಜಕ್ಕೆ ಧರ್ಮಮಾರ್ಗವನ್ನು ಬೋಧಿಸುವ ಯತಿಗಳು ಚಾತುರ್ಮಾಸ ಕಾಲದಲ್ಲಿ ಒಂದೆಡೆ ನಿಂತು ಅಂತರ್ಮುಖಿಗಳಾಗುತ್ತಾರೆ.

ಇದು ಶಿಷ್ಯರೆಂಬ ನದಿಗಳು ಗುರು ರೂಪವಾದ ಸಮುದ್ರವನ್ನು ತನ್ನೊಳಗಿಟ್ಟುಕೊಳ್ಳುವ ಅದರಲ್ಲಿ ಸೇರಿಹೋಗುವ ಪರಿ ಎಂದು ಸ್ವಾಮೀಜಿ ಹೇಳಿದರು.ಕ್ಷೇತ್ರ ದೇವತೆ ಭದ್ರಕಾಳೀ, ದೇವರಭಾವಿಯ ಕೆಂಗಳಾ ಪರಮೇಶ್ವರೀ ದೇವಾಲಯಗಳಿಗೆ ಸ್ವಾಮೀಜಿ ಸಂದರ್ಶನ ನೀಡಿ ಸೀಮೋಲ್ಲಂಘನ ವಿಧಿಯನ್ನು ಪೂರೈಸಿದರು.

ಪ್ರತಿವರ್ಷ ಚಾತುರ್ಮಾಸ ಸೀಮೋಲ್ಲಂಘನದ ನಂತರ ನಡೆಯುವ ಧರ್ಮಸಭೆಯಲ್ಲಿ ನೀಡಲಾಗುವ ಪ್ರತಿಷ್ಠಿತ  ಚಾತುರ್ಮಾಸ ಪ್ರಶಸ್ತಿಯನ್ನು ರಾಣೆಬೆನ್ನೂರಿನ ಉದ್ಯಮಿ  ವಾಸುದೇವ ಹೆಬ್ಬಾರ್ ಅವರಿಗೆ ನೀಡಿ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.