ADVERTISEMENT

ರೂ. 43 ಲಕ್ಷ ನಿವ್ವಳ ಲಾಭ

​ಪ್ರಜಾವಾಣಿ ವಾರ್ತೆ
Published 3 ಮೇ 2011, 10:45 IST
Last Updated 3 ಮೇ 2011, 10:45 IST

ಭಟ್ಕಳ: ಕೇವಲ ಗ್ರಾಮಕ್ಕಷ್ಟೇ ಸೀಮಿತವಾಗಿ ಅತ್ಯಲ್ಪ ರೂ. 1 ಸಾವಿರ ಶೇರು ಬಂಡವಾಳದೊಂದಿಗೆ 1966ರಲ್ಲಿ ಡಿ.ಬಿ.ನಾಯ್ಕ,ಲಚ್ಮಯ್ಯ ಸಂಕಯ್ಯ ಮೊಗೇರ ಸೇರಿದಂತೆ ಹಲವು ಸಮಾನ ಸಹಕಾರಿ ಮನಸ್ಕರ ಕನಸಿನ ಕೂಸಾಗಿ ಜನ್ಮತಳೆದ ತಾಲ್ಲೂಕಿನ ಜಾಲಿಯ ಗ್ರಾಮೀಣ ಸಹಕಾರಿ ಬ್ಯಾಂಕ್ 45 ವಸಂತಗಳನ್ನು ಪೂರೈಸಿ ಇಂದು 45 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸುವ ಮೂಲಕ ತಾಲ್ಲೂಕಿನ ಪ್ರತಿಷ್ಠಿತ ಸಹಕಾರಿ ಬ್ಯಾಂಕ್ ಎಂಬ ಖ್ಯಾತಿಯೊಂದಿಗೆ ಪ್ರಗತಿಯ ಹಾದಿಯಲ್ಲಿ ಸಾಗುತ್ತಿದೆ.

ಅರಬ್ಬಿ  ಸಮುದ್ರದ ತಟದಲ್ಲಿರುವ ಕಾರಣಕ್ಕೆ ಈ ಬ್ಯಾಂಕ್‌ನಲ್ಲಿ, ಸಾಗುವಳಿಗೆ ಯೋಗ್ಯವಾದ ಕೃಷಿ ಜಮೀನು ತೀರ ಕಡಿಮೆ ಇದ್ದುದರಿಂದ ಕೃಷಿ ಸಾಲ ನೀಡಿಕೆಗೆ ಮಿತವಾದ ಅವಕಾಶವಿತ್ತು.  ಆರಂಭದಲ್ಲಿ ನಾಲ್ಕು ನ್ಯಾಯಬೆಲೆ ಅಂಗಡಿಗಳನ್ನು ತೆರೆದು ನಿಯಂತ್ರಿತ ವಸ್ತುಗಳ ವಿತರಣೆಯನ್ನು ಅಂದಿನಿಂದ ಇಂದಿನವರೆಗೆ ಸಮರ್ಪಕವಾಗಿ ಪೂರೈಸುತ್ತಿರುವ ಹೆಗ್ಗಳಿಗೆ ಈ ಬ್ಯಾಂಕಿನದ್ದಾಗಿದೆ.1980ರಲ್ಲಿ ಕೇವಲ ರೂ. 1.80ಲಕ್ಷ ದಷ್ಟಿದ್ದ ಕೃಷಿಸಾಲದ ವ್ಯವಹಾರ ಇಂದು 40ಲಕ್ಷಕ್ಕೆ ಏರಿದೆ. ಪಟ್ಟಣದ ಪುರಸಭೆ ವ್ಯಾಪ್ತಿಯ 2 ಮತ್ತು 3ನೇ ವಾರ್ಡಗಳನ್ನು ಬ್ಯಾಂಕಿನ ಕಾರ್ಯವ್ಯಾಪ್ತಿಗೆ ಸೇರಿಸಿಕೊಳ್ಳುವ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡು ಪಟ್ಟಣದ ರಂಗೀಕಟ್ಟೆಯಲ್ಲಿ ಶಾಖೆಯನ್ನು ತೆರದು ಬ್ಯಾಂಕಿಂಗ್ ಸಂಸ್ಥೆಗಳ ಮಾದರಿಯಲ್ಲಿ ವ್ಯವಹಾರ ನಡೆಸುತ್ತಿದೆ.

2001ನೇ ಸಾಲಿನಲ್ಲಿ 11ಲಕ್ಷ ವೆಚ್ಚದಲ್ಲಿ ಜಾಲಿಯಲ್ಲಿ ಸುಸುಜ್ಜಿತ ಪ್ರಧಾನ ಕಚೇರಿಯ ಕಟ್ಟಡ. ರಂಗೀಕಟ್ಟೆಯಲ್ಲಿ 16ಲಕ್ಷದಲ್ಲಿ 5.8ಗುಂಟೆ ಜಮೀನು ಖರೀದಿಸಿ 35.25 ಲಕ್ಷ ವೆಚ್ಚದಲ್ಲಿ ಸಹಕಾರಿ ಸೌಧವನ್ನು ನಿರ್ಮಿಸಿದ್ದಲ್ಲದೇ, ಈಗ ಪ್ರಧಾನ ಕಚೇರಿಗೆ ಸುಮಾರು 35ಲಕ್ಷ ವೆಚ್ಚದಲ್ಲಿ ಮೇಲಂತಸ್ತನ್ನು ನಿರ್ಮಿಸಲಾಗಿದ್ದು ಅದರ ಉದ್ಘಾಟನೆ ಮೇ 6ರಂದು ಶಾಸಕ ಜೆ.ಡಿ.ನಾಯ್ಕ ನೆರವೇರಿಸಲಿದ್ದಾರೆ. ಪ್ರೊ.ವೈದ್ಯನಾಥನ್ ಸಮಿತಿಯ ಶಿಫಾರಸ್ಸಿನಂತೆ ಬ್ಯಾಂಕ್ ತನ್ನ ಕಾರ್ಯಕ್ಷೇತ್ರವನ್ನು ಹೊನ್ನಾವರ ತಾಲ್ಲೂಕಿಗೂ ವಿಸ್ತರಿಸಿ ಇತ್ತೀಚೆಗಷ್ಟೆ ಹಳದೀಪುರದಲ್ಲಿ ತನ್ನ ನಾಲ್ಕನೇ ಶಾಖೆಯನ್ನು ಆರಂಭಿಸಿದೆ.

ಬ್ಯಾಂಕ್ ಕೃಷಿಯೊಂದಿಗೆ ಎಲ್ಲ  ರೀತಿಯ ಸಾಲ ಯೋಜನೆಗಳನ್ನು ಗ್ರಾಹಕರಿಗೆ ನೀಡುತ್ತಿದೆ. 125.31ಲಕ್ಷ ಶೇರು ಬಡವಾಳ ಹೊಂದಿರುವ ಬ್ಯಾಂಕ್ 1083.98ಲಕ್ಷ ಠೇವಣಿ ಹೊಂದಿದೆ. 23 ಸಿಬ್ಬಂದಿಯೊಂದಿಗೆ ಕಳೆದ 28 ವರ್ಷಗಳಿಂದ ಬ್ಯಾಂಕಿನ ಅಭಿವೃದ್ಧಿಯಲ್ಲಿ ಹಗಲಿರುಳೂ ಶ್ರಮಿಸುತ್ತಿರುವ ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಶಾಂತಾರಾಮ ನಾಯ್ಕ, ಬ್ಯಾಂಕಿನ ಸಂಸ್ಥಾಪಕ ಸದಸ್ಯ ಹಾಗೂ ಹಲವು ಬಾರಿ ಅಧ್ಯಕ್ಷರಾಗಿ, ಹಾಲಿ ಅಧ್ಯಕ್ಷರೂ ಆಗಿರುವ ಡಿ.ಬಿ.ನಾಯ್ಕ ಮತ್ತು ಬ್ಯಾಂಕಿನ ಎಲ್ಲಾ ಅವಧಿಯ ನಿರ್ದೇಶಕರ ಸಹಕಾರದಿಂದ ಬ್ಯಾಂಕ್ ಪ್ರಗತಿ ಹೊಂದಲು ಸಾಧ್ಯವಾಗಿದೆ ಎಂದು ಅಧ್ಯಕ್ಷ ಡಿ.ಬಿ. ನಾಯ್ಕ, ಉಪಾಧ್ಯಕ್ಷ ರತ್ನಾಕರ ಖಾರ್ವಿ ವಿನಮ್ರವಾಗಿ ನುಡಿಯುತ್ತಾರೆ.

ಬ್ಯಾಂಕ್ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಯೋಜನೆಗಳನ್ನೂ ಅಳವಡಿಸಿಕೊಂಡು ಜನರಿಗೆ ತಲುಪಿಸುವ ಕಾರ್ಯವನ್ನೂ ಮಾಡುತ್ತಿದೆ. ರಾಜ್ಯ ಸರ್ಕಾರದ ಬಡ್ಡಿಮನ್ನಾ ಯೋಜನೆ,ಬಡ್ಡಿ ರಿಯಾಯಿತಿ ಯೋಜನೆ, ಕೇಂದ್ರ ಸರ್ಕಾರದ ಸಾಲ ಪರಿಹಾರ ಯೋಜನೆ, ಸ್ವಸಹಾಯ ಸಂಘಗಳ ರಚನೆ, ಅವುಗಳಿಗೆ ಸಾಲ ವಿತರಣೆ ಯೋಜನೆ, ಯಶಸ್ವಿನಿ ಯೋಜನೆ, ಮರಣೋತ್ತರ ನಿಧಿ ಸೇರಿದಂತೆ ತನ್ನ ಕಾರ್ಯವ್ಯಾಪ್ತಿಯಲ್ಲಿರುವ ಪ್ರಾಥಮಿಕ,ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಅತಿವೃಷ್ಟಿ, ಅನಾವೃಷ್ಟಿ, ಕಾರ್ಗಿಲ್ ನಿಧಿ, ಭೂಕಂಪ ಸೇರಿದಂತೆ ಮುಂತಾದ ಅವಘಡಗಳಿಗೆ ಈವರೆಗೆ 7ಲಕ್ಷ 93 ಸಾವಿರ ರೂಪಾಯಿ ವಿತರಿಸುವ ಮೂಲಕ ಗ್ರಾಮೀಣ ಜನರ ಆರ್ಥಿಕ ಸಮಸ್ಯೆಗಳಿಗೆ ಸ್ಪಂದಿಸುವುದರ ಜತೆಯಲ್ಲೇ ಬ್ಯಾಂಕ್ ಸಹ ಪ್ರಗತಿ ಪಥದಲ್ಲಿ ಸಾಗುತ್ತ 50ನೇ ವರ್ಷದ ಸ್ವರ್ಣ ಮಹೋತ್ಸವ ಆಚರಿಸಿಕೊಳ್ಳುವತ್ತ ಸಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.