ADVERTISEMENT

`ರೂ 60 ಕೋಟಿ ಸಾಲ ಪಡೆಯಲು ಒಪ್ಪಿಗೆ'

ಟಿಎಸ್‌ಎಸ್ ಸರ್ವಸಾಧಾರಣ ಸಭೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2013, 7:09 IST
Last Updated 5 ಸೆಪ್ಟೆಂಬರ್ 2013, 7:09 IST

ಶಿರಸಿ: ರೈತ ಸದಸ್ಯರ ಬೆಳೆಸಾಲ ಭರಣ ಮಾಡುವ ಹಿನ್ನೆಲೆಯಲ್ಲಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯು ರೂ 60 ಕೋಟಿ ಸಾಲ ಪಡೆಯಲು ಸರ್ವ ಸದಸ್ಯರ ಸಭೆ ಅನುಮೋದನೆ ನೀಡಿತು.

ಬುಧವಾರ ಸೇಲ್‌ಯಾರ್ಡ್‌ನಲ್ಲಿ ನಡೆದ ಟಿಎಸ್‌ಎಸ್ ಸದಸ್ಯರ ಸರ್ವಸಾಧಾರಣ ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಶಾಂತಾರಾಮ ಹೆಗಡೆ ರೂ 60 ಕೋಟಿ ಸಾಲ ಪಡೆಯಲು ಸದಸ್ಯರ ಅನುಮತಿ ಕೇಳಿದಾಗ ಸದಸ್ಯರು ಚಪ್ಪಾಳೆ ಮೂಲಕ ಸಮ್ಮತಿ ಸೂಚಿಸಿದರು.

`ಗುಟ್ಕಾ ನಿಷೇಧದಿಂದ ಅಡಿಕೆ ಮಾರುಕಟ್ಟೆಯ ಮೇಲೆ ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ. ಹೀಗಾಗಿ ಬೆಳೆಗಾರರು ಆತಂಕಗೊಳ್ಳುವ ಅಗತ್ಯವಿಲ್ಲ. ಟಿಎಸ್‌ಎಸ್ ಸಿಹಿ ಅಡಿಕೆ ಪುಡಿ (ಸ್ವೀಟ್ ಸುಪಾರಿ) ಉತ್ಪಾದನೆಯಲ್ಲಿ ರೂ 26 ಕೋಟಿ ವ್ಯವಹಾರ ನಡೆಸಿದೆ. ಸ್ವೀಟ್ ಸುಪಾರಿಗೆ ಸಂಬಂಧಿಸಿ ರೂ 1.90 ಕೋಟಿ ತೆರಿಗೆ ನೀಡಲಾಗಿದೆ. ಸ್ವೀಟ್ ಸುಪಾರಿ ಮೇಲೆ ವ್ಯಾಟ್ ಸೇರಿದಂತೆ ಶೇ 20ರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಈ ತೆರಿಗೆ ಮೊತ್ತ ಕಡಿಮೆ ಮಾಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು. ಸ್ವೀಟ್ ಸುಪಾರಿ ಘಟಕದಿಂದ ರೂ 70.80 ಲಕ್ಷ ಲಾಭಗಳಿಸಲಾಗಿದೆ' ಎಂದು ಶಾಂತಾರಾಮ ಹೆಗಡೆ ಹೇಳಿದರು.

`ಪ್ರಸ್ತುತ ಅಡಿಕೆ ದರ ಉತ್ತಮವಾಗಿದ್ದರೂ ಬೆಳೆಗಾರರು ಅಡಿಕೆ ಬಂದಿರುವ ಕೊಳೆರೋಗದಿಂದ ತತ್ತರಿಸಿದ್ದಾರೆ. ಭವಿಷ್ಯ ಅಡಿಕೆ ದರ ಅನಿಶ್ಚಿತವಾಗಿದೆ. ತೊಂದರೆಯಲ್ಲಿರುವ ಬೆಳೆಗಾರರಿಗೆ ಪೋಟನಿಯಮ, ಸರ್ಕಾರಿ ಆದೇಶದ ಹೊರತಾಗಿಯೂ ಸಾಲ ನೀಡಲಾಗಿದೆ. ಈ ಬಗ್ಗೆ ಕೆಲವರು ಸಂಬಂಧಿತ ಇಲಾಖೆಗೆ ದೂರು ಅರ್ಜಿ ಬರೆದಿದ್ದು, ವಿಚಾರಣೆ ನಡೆಯುತ್ತಿದೆ. ರೈತರು ಬಂದಿರುವ ಬೆಳೆಯಲ್ಲಿ ಸಾಲ ಭರಣ ಮಾಡಲು ಪ್ರಯತ್ನಿಬೇಕು' ಎಂದರು.

`2012-13ನೇ ಸಾಲಿನಲ್ಲಿ ಟಿಎಸ್‌ಎಸರೂ್ 1.90ಕೋಟಿ ಲಾಭಗಳಿಸಿದೆ.

2940 ಸದಸ್ಯರನ್ನು ಹೊಂದಿದ್ದು, ರೂ 18.18 ಲಕ್ಷ ಶೇರು ಮೊತ್ತ, ರೂ 16.88 ಕೋಟಿ ಕಾಯ್ದಿಟ್ಟ ನಿಧಿ ಹೊಂದಿದೆ. ವರ್ಷದ ಅಂತ್ಯಕ್ಕೆ ಸದಸ್ಯರಿಂದ ಆಸಾಮಿ ಖಾತೆ ಬಾಕಿ ರೂ 77.18 ಕೋಟಿ, ಶಿಕ್ಷಣ ಸಾಲ ರೂ 1.23 ಕೋಟಿ ಬರಬೇಕಾಗಿದೆ' ಎಂದರು.

ಪ್ರಸಕ್ತ ವರ್ಷ ಸಂಸ್ಥೆಯ ಚುನಾವಣೆ ನಡೆಯಲಿದ್ದು, ಸಂಸ್ಥೆಯ ಏಳಿಗೆ ಬಯಸುವವರನ್ನು ಮಾತ್ರ ಆಯ್ಕೆ ಮಾಡಿದರೆ ಸಂಸ್ಥೆಗೆ ಹಾಗೂ ರೈತರಿಗೆ ಅನುಕೂಲವಾಗುತ್ತದೆ. ಅಕ್ಟೋಬರ್ 15ರಂದು ಚುನಾವಣೆ ನಡೆಯಲಿದೆ ಎಂದು ಶಾಂತಾರಾಮ ಹೆಗಡೆ ಹೇಳಿದರು.

ಆಡಳಿತ ಸಮಿತಿ ಸದಸ್ಯರಾದ ಡಿ.ಡಿ.ವಿಶ್ವಾಮಿತ್ರ, ಸೀತಾರಾಮ ಹೆಗಡೆ ನೀರ್ನಳ್ಳಿ, ವಿ.ವಿ.ಹೆಗಡೆ, ಸೀತಾರಾಮ ಹೆಗಡೆ ಹೀಪನಳ್ಳಿ, ಎಂ.ಎಸ್.ಹೆಗಡೆ, ಜಿ.ವಿ.ಜೋಶಿ, ಆರ್.ಆರ್.ಹೆಗಡೆ, ಎಸ್.ಎಂ.ಹೆಗಡೆ, ಆರ್.ಎಸ್.ಹೆಗಡೆ, ಸಿ.ಎನ್.ಹೆಗಡೆ, ಎನ್.ಎಸ್.ಹೆಗಡೆ, ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ, ಲೆಕ್ಕಪರಿಶೋಧಕ ಅನಿಲಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.