ADVERTISEMENT

ರೂ 9.64 ಕೋಟಿ ಲಾಭಾಂಶ

`ಪಾಲಿಸಿದರೆ ಪಾಲು' ಯೋಜನೆಯಲ್ಲಿ 88 ಸಮಿತಿಗಳಿಗೆ ಪಾಲು...

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:35 IST
Last Updated 15 ಡಿಸೆಂಬರ್ 2012, 8:35 IST

ಶಿರಸಿ: ಅರಣ್ಯ ಇಲಾಖೆಯ ಶಿರಸಿ ಅರಣ್ಯ ವಿಭಾಗ ವ್ಯಾಪ್ತಿಯಲ್ಲಿರುವ 149 ಗ್ರಾಮ ಅರಣ್ಯ ಸಮಿತಿಗಳಲ್ಲಿ 88 ಸಮಿತಿಗಳು ಪಾಲಿಸಿದರೆ ಪಾಲು ಯೋಜನೆ ಅಡಿಯಲ್ಲಿ ಒಟ್ಟು ರೂ 9.64 ಕೋಟಿ ಮೊತ್ತದ ಲಾಭಾಂಶ ಪಡೆದಿವೆ.

ಲಾಭಾಂಶದಲ್ಲಿ ರೂ 4.82 ಕೋಟಿ ಗ್ರಾಮ ಅರಣ್ಯ ಅಭಿವೃದ್ಧಿ ನಿಧಿ ಒಳಗೊಂಡಿದ್ದು, ಈ ನಿಧಿಯನ್ನು ಸ್ಥಳೀಯ ಅರಣ್ಯ ಪೂರಕ ಚಟುವಟಿಕೆಗಳಿಗೆ ಸದ್ವಿನಿಯೋಗ ಮಾಡಿಕೊಳ್ಳುವ ಕುರಿತಂತೆ ಕೆನರಾ ವೃತ್ತ ಅರಣ್ಯದ ಗ್ರಾಮ ಅರಣ್ಯ ಸಮಿತಿ ಪ್ರಮುಖರಿಗೆ ಅರಣ್ಯ ಇಲಾಖೆ ಮಾಹಿತಿ ನೀಡುತ್ತಿದೆ.

ಇಂತಹ ಮಾಹಿತಿ ಕಾರ್ಯಾಗಾರ ಇಲ್ಲಿನ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಶಿರಸಿ, ಯಲ್ಲಾಪುರ, ಹಳಿಯಾಳ, ಕಾರವಾರ, ಹೊನ್ನವಾರ ವಿಭಾಗ ವ್ಯಾಪ್ತಿಯ ಅರಣ್ಯ ಸಮಿತಿಗಳ 150ಕ್ಕೂ ಹೆಚ್ಚು ಪ್ರಮುಖರು ಪಾಲ್ಗೊಂಡಿದ್ದರು. ನಿಯಮಿತ ಉರುವಲು ಬಳಕೆ, ಬದಲಿ ಉರುವಲಿಗೆ ಪ್ರಾಮುಖ್ಯತೆ, ನೀರು ಮತ್ತು ಮಣ್ಣು ಸಂರಕ್ಷಣೆ ಚಟುವಟಿಕೆ ನಡೆಸುವ ಮೂಲಕ ಅರಣ್ಯದ ಮೇಲಿನ ಒತ್ತಡ ಕಡಿಮೆಗೊಳಿಸಬೇಕು ಎಂದು ಕಾರ್ಯಾಗಾರದಲ್ಲಿ ಪಾಲ್ಗೊಂಡ ಸಂಪನ್ಮೂಲ ವ್ಯಕ್ತಿಗಳು ಸಲಹೆ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾರ್ಯಾಗಾರ ಉದ್ಘಾಟಿಸಿದರು.

`ಕೃಷಿ ಬೆಳೆಗಳಿಗೆ ಕಾಡುಪ್ರಾಣಿಗಳ ಹಾವಳಿ ಹೆಚ್ಚುತ್ತಿದ್ದು, ಗ್ರಾಮ ಅರಣ್ಯ ಸಮಿತಿಗಳು ವನೀಕರಣ ಯೋಜನೆ ಹಮ್ಮಿಕೊಳ್ಳುವ ಮೂಲಕ ಕಾಡುಪ್ರಾಣಿ ಹಾವಳಿ ತಡೆಗಟ್ಟಬೇಕು. ಅರಣ್ಯ ಸಂರಕ್ಷಣೆ, ಅರಣ್ಯೀಕರಣಕ್ಕೆ ಆದ್ಯತೆ ನೀಡಬೇಕು' ಎಂದು ಅವರು ಹೇಳಿದರು. ಇಲಾಖೆ ದಿನಗೂಲಿ ನೌಕರರ ಖಾಯಂಮಾತಿಗೆ ಸರ್ಕಾರ ಕ್ರಮ ಕೈಕೊಳ್ಳುತ್ತಿದೆ ಎಂದರು.

ವಿಸ್ತರಣೆ: `ಪ್ರಾಯೋಗಿಕವಾಗಿ ಎರಡು ಜಿಲ್ಲೆಗಳಲ್ಲಿ ಯಶ ಕಂಡ ಹಸಿರು ಆರೋಗ್ಯ ಶಿಬಿರವನ್ನು ಇನ್ನಿತರ ಜಿಲ್ಲೆಗಳಿಗೆ ವಿಸ್ತರಿಸಲು ಪಶ್ಚಿಮಘಟ್ಟ ಕಾರ್ಯಪಡೆ ಯೋಚಿಸಿದೆ.  ಪರಿಸರ ಸಂರಕ್ಷಣೆಗೆ ಗುಂಡ್ಯಾ, ಅಂಬಾರಗುಡ್ಡ, ಬೀಸಗೋಡ ಹೋರಾಟಗಳು ಮಾದರಿಯಾಗಬೇಕು. ಅರಣ್ಯ, ಔಷಧಿ ಸಸ್ಯ ಸಂರಕ್ಷಣೆ ಕುರಿತಂತೆ ಕಾನೂನಿನಲ್ಲಿ ಬದಲಾವಣೆ ಆಗಬೇಕಾಗಿದೆ. ಏಕಜಾತಿ ನೆಡುತೋಪು ನಿಷೇಧಿಸುವ ಜವಾಬ್ದಾರಿ ಅರಣ್ಯ ಇಲಾಖೆಯದಾಗಿದ್ದು, ಅಕೇಶಿಯಾ ಬೆಳೆಸಲು ಜನಸಾಮಾನ್ಯರ ಮೇಲೆ ಒತ್ತಡ ಹೇರುವ ಕಾರ್ಯ ಆಗಬಾರದು' ಎಂದು ಕಾರ್ಯಪಡೆ ಅಧ್ಯಕ್ಷ ಅನಂತ ಅಶೀಸರ ಹೇಳಿದರು. ಈ ಸಂದರ್ಭದಲ್ಲಿ ಕೆಲ ಅರಣ್ಯ ಸಮಿತಿಗಳಿಗೆ ಲಾಭಾಂಶದ ಪಾಲು ವಿತರಿಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾದ ಶಿವಾನಂದ ಕಳವೆ, ಭಾಸ್ಕರ ಹೆಗಡೆ ಕಾಗೇರಿ, ರಾಘವೇಂದ್ರ, ರಮೇಶ ಹೆಗಡೆ ವಿವಿಧ ಗೋಷ್ಠಿಗಳಲ್ಲಿ ಪಾಲ್ಗೊಂಡು ಮಾಹಿತಿ ನೀಡಿದರು. ವೇದಿಕೆಯಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬಿ.ಶಿವನಗೌಡ, ಕೆನರಾ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎನ್.ಎಲ್. ಶಾಂತಕುಮಾರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಯತೀಶಕುಮಾರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.