ADVERTISEMENT

ಲೋಕಾಯುಕ್ತ ಬಲೆಗೆ ಶಿರಸಿ ಅಧಿಕಾರಿ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2012, 8:55 IST
Last Updated 4 ಡಿಸೆಂಬರ್ 2012, 8:55 IST

ಶಿರಸಿ: ಸರ್ಕಾರಿ ಇಲಾಖೆಯ ಅಧಿಕಾರಿಯೊಬ್ಬರು ಮೊಬೈಲ್ ಸೆಟ್‌ಅನ್ನು ಲಂಚವಾಗಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ ಸಿಕ್ಕು ಬಿದ್ದಿದ್ದಾರೆ.

ಸೋಮವಾರ ಸಂಜೆ ಇಲ್ಲಿನ ತೂಕ ಮತ್ತು ಅಳತೆ ಇಲಾಖೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಕೆ.ಸಿ. ಮೋಹನ ಅವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಕೆಲವು ದಿನಗಳ ಹಿಂದೆ ಯಲ್ಲಾಪುರದ ವಿಶ್ವ ಮೊಬೈಲ್ ಅಂಗಡಿಯ ಮೇಲೆ ದಾಳಿ ನಡೆಸಿ ಅಧಿಕಾರಿ ಮೋಹನ, ಮೊಬೈಲ್ ಖರೀದಿ ಮತ್ತು ಅಂಗಡಿಯ ದಾಖಲಾತಿಗಳು ಸರಿಯಿಲ್ಲವೆಂದು ಆಪಾದಿಸಿ ಅಂಗಡಿಯಲ್ಲಿದ್ದ ಆರು ಮೊಬೈಲ್ ಸೆಟ್‌ಗಳನ್ನು ವಶಪಡಿಸಿಕೊಂಡಿದ್ದರು.

ಇದಕ್ಕೆ ಪ್ರತಿಯಾಗಿ ದಂಡ ತುಂಬಬೇಕು ಜೊತೆಗೆ 10 ಸಾವಿರ ರೂಪಾಯಿ ಮೌಲ್ಯದ ಸ್ಯಾಮ್‌ಸಂಗ್ ಮೊಬೈಲ್ ಸೆಟ್ ನೀಡಬೇಕು ಎಂದು ಅಂಗಡಿ ಮಾಲಕರ ಬಳಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ.

ಅಂಗಡಿ ಮಾಲಕ ವಿಶ್ವನಾಥ ದೇಸಾಯಿ ನೀಡಿದ ದೂರಿನನ್ವಯ ಲೋಕಾಯುಕ್ತ ಪೊಲೀಸರು ಕೆ.ಸಿ. ಮೋಹನ ಮೊಬೈಲ್ ಸೆಟ್‌ಅನ್ನು ಲಂಚವಾಗಿ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದರು.

ಜಿಲ್ಲಾ ಲೋಕಾಯುಕ್ತ ಡಿಎಸ್‌ಪಿ ಯು.ಎಸ್. ಶಿವಳ್ಳಿ, ನಿರೀಕ್ಷಕ ಭೀಮನಗೌಡ ಬಿರಾದಾರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸದಾನಂದ, ಸುದರ್ಶನ, ಚಂದನ, ಪಟಗಾರ, ಸಂತೋಷ ಹಾಗೂ ಗಜಾನನ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.