ADVERTISEMENT

‘ವಾಣಿಜ್ಯಶಾಸ್ತ್ರದಿಂದ ಅರ್ಥ ವ್ಯವಸ್ಥೆಗೆ ಶಕ್ತಿ’

ಪದವಿಪೂರ್ವ ವಾಣಿಜ್ಯಶಾಸ್ತ್ರ ಉಪನ್ಯಾಸಕರ ತರಬೇತಿ ಶಿಬಿರದಲ್ಲಿ ಡಿಡಿಪಿಐ ಕೆ.ಟಿ.ಭಟ್ಟ

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 13:41 IST
Last Updated 19 ಜೂನ್ 2018, 13:41 IST
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಟಿ.ಭಟ್ಟ ಮಾತನಾಡಿದರು
ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಕೆ.ಟಿ.ಭಟ್ಟ ಮಾತನಾಡಿದರು   

ಕುಮಟಾ: ‘ದೇಶದ ಆರ್ಥಿಕ ವ್ಯವಸ್ಥೆಗೆ ಆಧಾರವಾಗಿರುವ ವಾಣಿಜ್ಯಶಾಸ್ತ್ರ ಜೀವನ ಪಾಠ ಹಾಗೂ ಜೀವನೋಪಾಯ ಎರಡನ್ನೂ ಕಲಿಸುತ್ತದೆ’ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಕೆ.ಟಿ.ಭಟ್ಟ ಹೇಳಿದರು.

ಬೆಳಗಾವಿ ವಿಭಾಗದ ಪದವಿಪೂರ್ವ ಕಾಲೇಜಿನ ಲೆಕ್ಕಶಾಸ್ತ್ರ ಹಾಗೂ ವ್ಯವಹಾರ ಅಧ್ಯಯನ ಉಪನ್ಯಾಸಕರಿಗೆ ಇಲ್ಲಿಯ ಹನುಮಂತ ಬೆಣ್ಣೆ ನೆಲ್ಲಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಏಳು ದಿನಗಳ ತರಬೇತಿ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಆರ್ಥಿಕತೆಗೆ ಶಕ್ತಿ ತುಂಬಲು ಹೊಸ ಹೊಸ ವಾಣಿಜ್ಯ ಸಂಗತಿಗಳ ಅಧ್ಯಯನ ಅಗತ್ಯ. ಈ ಸಂಗತಿಗಳನ್ನು ವಿದ್ಯಾರ್ಥಿಗಳು ಕಲಿಯಬೇಕಾದರೆ ಉಪನ್ಯಾಸಕರು ತಮ್ಮ ಕೌಶಲ ಹಾಗೂ ಜ್ಞಾನ ಹೆಚ್ಚಿಸಿಕೊಳ್ಳುವ ಅಗತ್ಯವಿದೆ’ ಎಂದರು.

ADVERTISEMENT

ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ಭಟ್ಟ ಮಾತನಾಡಿ, ‘ಪ್ರೌಢಶಾಲೆ ಮಟ್ಟದಲ್ಲಿ ವಾಣಿಜ್ಯ ವಿಷಯ ಶಿಕ್ಷಕರೇ ಇರುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಕಲಿಸಲು ಹಿಂದೆ ಬಿ.ಇಡಿ ತರಗತಿಯಲ್ಲಿ ಅವಕಾಶವಿರಲಿಲ್ಲ. ಇದು ಹೊಸ ಶಿಕ್ಷಣ ನೀತಿಯ ಲೋಪವಾಗಿದೆ. ಇಂದು ವಾಣಿಜ್ಯಶಾಸ್ತ್ರದ ಜಾತ್ರೆಯೇ ನಡೆಯುತ್ತಿದ್ದು, ಸದ್ಯದ ಅಗತ್ಯಕ್ಕೆ ತಕ್ಕಂತೆ ಎನ್‌ಸಿಇಆರ್‌ಟಿ ಮಾದರಿಯಲ್ಲಿ ವಿದ್ಯಾರ್ಥಿಗಳು ಅಧ್ಯಯನ ಮಾಡಬೇಕಾಗಿದೆ’ ಎಂದು ಹೇಳಿದರು

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಸತೀಶ ನಾಯ್ಕ, ‘ವಾಣಿಜ್ಯಶಾಸ್ತ್ರವನ್ನು ಅತ್ಯಂತ ಸಂಸ್ಕಾರಯುತವಾಗಿ ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿದೆ. ಅದಕ್ಕಾಗಿ ತರಬೇತಿಗಳು ಅನಿವಾರ್ಯ’ ಎಂದು ಅಭಿಪ್ರಾಯಪಟ್ಟರು.

ಡಾ.ಎ.ವಿ.ಬಾಳಿಗಾ ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಜಯರಾಂ ಭಟ್ಟ, ವಾಣಿಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಕಾರ್ಯದರ್ಶಿ ಪ್ರಕಾಶ ರಾಣೆ ಮಾತನಾಡಿದರು. ಹಿರಿಯ ಉಪನ್ಯಾಸಕ ಮೋಹನ ನಾಯಕ, ತರಬೇತುದಾರ ಡಾ.ಜಿ.ಎಸ್.ಭಟ್ಟ ಉಪಸ್ಥಿತರಿದ್ದರು. ತರಬೇತಿ ಕಾರ್ಯಕ್ರಮದ ಸಹ ಸಂಯೋಜಕ ಆರ್.ಎಚ್.ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.