ADVERTISEMENT

ವಿದ್ಯುತ್ ವ್ಯತ್ಯಯ: ಕಾಂಗ್ರೆಸ್ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2011, 7:50 IST
Last Updated 18 ಅಕ್ಟೋಬರ್ 2011, 7:50 IST

ಅಂಕೋಲಾ: ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ವಾಗುತ್ತಿದ್ದು, ಅಧಿಕಾರ ದಲ್ಲಿರುವವರ ನಿರ್ಲಕ್ಷ್ಯತನದಿಂದ ರೈತರು, ವಿದ್ಯಾರ್ಥಿಗಳು ಮತ್ತು ಜನಸಾಮಾನ್ಯರು ಪರಿತಪಿಸು ವಂತಾಗಿದೆ ಎಂದು ಜಿ.ಪಂ. ಉಪಾಧ್ಯಕ್ಷ ಉದಯ ಡಿ. ನಾಯ್ಕ ಆರೋಪಿಸಿದರು.

ವಿದ್ಯುತ್ ಪೂರೈಕೆ ವ್ಯತ್ಯಯ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಗೆ ಚಾಲನೆ ನೀಡಿ ಅವರು ಮಾತನಾಡಿದರು. ರಾಜ್ಯ ಸರ್ಕಾರದ ವೈಫಲ್ಯತೆ ಮತ್ತು ಸಚಿವರ ಭ್ರಷ್ಟಾಚಾರ ಹಗರಣಗಳಿಂದ ರಾಜ್ಯದ ಜನರು ತಲೆ ತಗ್ಗಿಸುವಂತಾಗಿದೆ ಎಂದು ಕಟಕಿಯಾಡಿದ ಅವರು, ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಜಿ.ಪಂ. ಮಾಜಿ ಅಧ್ಯಕ್ಷ ರಮಾನಂದ ನಾಯಕ ಮಾತನಾಡಿ, ಅಭಿವೃದ್ಧಿ ಮಂತ್ರ ಪಠಿಸಿ ಅಧಿಕಾರ ಹಿಡಿದವರು ಭ್ರಷ್ಟಾಚಾರವೆಸಗಿ ಕಂಬಿ ಎಣಿಸುವಂತಾಗಿದೆ. ಉತ್ತಮ ಆಡಳಿತ ನೀಡಲಾಗದವರು ಅಧಿಕಾರದಲ್ಲಿರುವ ನೈತಿಕತೆಯನ್ನು ಕಳೆದುಕೊಳ್ಳುತ್ತಾರೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ಕಾಂಗ್ರೆಸ್ ಹಿಂದುಳಿದ ವರ್ಗಗಳ ಜಿಲ್ಲಾ ಘಟಕದ ಅಧ್ಯಕ್ಷ ರಾಜೇಂದ್ರ ನಾಯ್ಕ, ಜಿ.ಪಂ. ಸದಸ್ಯರಾದ ಸರಸ್ವತಿ ಗೌಡ, ವಿನೋದ ಬಿ. ನಾಯಕ, ತಾ.ಪಂ. ಅಧ್ಯಕ್ಷ ಜಗನ್ನಾಥ ಗೌಡ, ಉಪಾಧ್ಯಕ್ಷೆ ದೀಪಾ ಆಗೇರ, ಪ್ರಮುಖರಾದ ಡಿ.ಎನ್. ನಾಯಕ, ವಕೀಲ ಬಿ.ಡಿ. ನಾಯ್ಕ, ಬೆಳಂಬಾರ ಗ್ರಾ.ಪಂ. ಸದಸ್ಯೆ ಲೀಲಾವತಿ ನಾಯ್ಕ ಮುಂತಾದವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ನಂತರ ತಹಶೀಲ್ದಾರ ಡಾ. ಉದಯಕುಮಾರ ಶೆಟ್ಟಿಯವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಪೂರ್ವಭಾವಿ ಸಭೆ: ಪಕ್ಷದ ಮುಖಂಡರಾದ ಲಾಲ್‌ಕೃಷ್ಣ ಆಡ್ವಾಣಿ ಯವರು ನಡೆಸುತ್ತಿರುವ ಜನಚೇತನ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆಯುತ್ತಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಹೇಳಿದರು.

ಭಾನುವಾರ ನಗರದ ನಾಡವರ ಸಭಾಭವನದಲ್ಲಿ ಆಡ್ವಾಣಿ ಅವರನ್ನು ಸ್ವಾಗತಿಸುವ ಪೂರ್ವಭಾಭಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಸಚಿವ ಆನಂದ ಅಸ್ನೋಟಿಕರ, ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿ ಸಂತೋಷ ಜಿ., ಜನಚೇತನ ಯಾತ್ರೆಯ ರಾಜ್ಯ ಸಂಯೋಜಕ ನವೀನಕುಮಾರ ಕಟೀಲು, ಸಂಸದ ಅನಂತಕುಮಾರ ಹೆಗಡೆ,  ಪ್ರಮುಖರಾದ ಗಿರೀಶ ಪಟೇಲ, ಗಣೇಶ ರಾವ್, ಜಿಲ್ಲಾ ಅಧ್ಯಕ್ಷ ಪ್ರಸಾದ ಕಾರವಾರಕರ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.