ADVERTISEMENT

ಶರಾವತಿಯಲ್ಲಿ ನೆರೆ: ಗಂಜಿ ಕೇಂದ್ರ ಸ್ಥಾಪನೆ

ಮುಳುಗಿದ ಸೇತುವೆಗಳು * ಶಾಲಾ-ಕಾಲೇಜಿಗೆ ರಜೆ* ಗುಂಡಬಾಳ, ಭಾಸ್ಕೇರಿ ಹೊಳೆಯಲ್ಲಿ ಪ್ರವಾಹ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2013, 10:04 IST
Last Updated 2 ಆಗಸ್ಟ್ 2013, 10:04 IST
ಮುಂಡಗೋಡ ತಾಲ್ಲೂಕಿನ ಕ್ಯಾಸನಕೇರಿ-ಚವಡಳ್ಳಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಬೈಕ್ ಸವಾರರೊಬ್ಬರು ದೂಡಿಕೊಂಡು ಬರುತ್ತಿರುವುದು.
ಮುಂಡಗೋಡ ತಾಲ್ಲೂಕಿನ ಕ್ಯಾಸನಕೇರಿ-ಚವಡಳ್ಳಿ ರಸ್ತೆ ಮೇಲೆ ನೀರು ಹರಿದ ಪರಿಣಾಮ ಬೈಕ್ ಸವಾರರೊಬ್ಬರು ದೂಡಿಕೊಂಡು ಬರುತ್ತಿರುವುದು.   

ಕಾರವಾರ: ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಪ್ರದೇಶದಲ್ಲಿ ಗುರವಾರ ಮಳೆ ಬಿರುಸುಗೊಂಡಿದ್ದು, ಹಲವೆಡೆ ಮನೆಗಳಿಗೆ ಹಾನಿ ಉಂಟಾಗಿದೆ. ಹಲವು ಮರಗಳು ನೆಲಕ್ಕುರುಳಿವೆ. 

ಮುನ್ನೆಚ್ಚರಿಕೆ: ಶರಾವತಿ  ಯೋಜನೆಯ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಸತತವಾಗಿ ಮಳೆ ಬೀಳುತ್ತಿದ್ದು ಜಲಾಶಯಕ್ಕೆ ಹೇರಳವಾಗಿ ನೀರು ಹರಿದು ಬರುತ್ತಿದೆ.  ಆಣೆಕಟ್ಟಿನಿಂದ 27 ಸಾವಿರ ಕ್ಯೂಸೆಕ್ ನೀರು ಹೊರ ಬಿಡಲಾಗಿದೆ. ಇದರಿಂದ ಶರಾವತಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಜನರಿಗೆ ಸುರಕ್ಷಿತ ಜಾಗಕ್ಕೆ ಸ್ಥಳಾಂತರವಾಗುವಂತೆ ಲಿಂಗನಮಕ್ಕಿ ಅಣೆಕಟ್ಟು ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಜಿ.ಎನ್. ದಯಾನಂದ ತಿಳಿಸಿದ್ದಾರೆ.

ನೆರೆ ಭೀತಿ: ಆತಂಕ ಪರಿಸ್ಥಿತಿ
ಹೊನ್ನಾವರ:
ಕಳೆದೆರಡು ದಿನ ಸ್ವಲ್ಪ ವಿರಾಮ ಪ್ರದರ್ಶಿಸಿದ್ದ ಮಳೆ ಗುರುವಾರ ಬೆಳಿಗ್ಗೆಯಿಂದ ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಮಳೆಯ ರಭಸಕ್ಕೆ ತಾಲ್ಲೂಕಿನ ಗುಂಡಬಾಳ ಹಾಗೂ ಭಾಸ್ಕೇರಿ ನದಿಪಾತ್ರಗಳಲ್ಲಿ ನೆರೆ ನೀರು ನುಗ್ಗಿದೆ.

ಗುಂಡಬಾಳಾ ನದಿ ದಂಡೆಯ ಚಿಕ್ಕನಕೋಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗುಂಡಿಬೈಲ್ ಮಜರೆಯ 35 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದ್ದು ಈ ಭಾಗದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ.

ಗುರುವಾರ ಬೆಳಿಗ್ಗೆ 2-3 ತಾಸುಗಳ ವರೆಗೆ ಭಾರಿ ಮಳೆಯಾಗಿದ್ದರಿಂದ ಒಮ್ಮೆಲೆ ಪ್ರವಾಹ ಕಾಣಿಸಿಕೊಂಡಿತು. ಆ ನಂತರದಲ್ಲಿ ಮಳೆಯ ಪ್ರಮಾಣ ತಗ್ಗಿದ್ದರಿಂದ ಈ ನದಿ ಪಾತ್ರಗಳಲ್ಲಿ ಪ್ರವಾಹ ಇಳಿಮುಖವಾಯಿತಾದರೂ ಆತಂಕದ ಪರಿಸ್ಥಿತಿ ಮುಂದುವರಿದಿದೆ.

ಲಿಂಗನಮಕ್ಕಿ ಜಲಾಶಯದಿಂದ ಬೆಳಿಗ್ಗೆ 12 ಗಂಟೆ ಸುಮಾರಿಗೆ 27,500 ಕ್ಯೂಸೆಕ್‌ನೀರನ್ನು ಬಿಡಲಾಯಿತು. ಈ ಜಲಾಶಯದ ಕೆಳಭಾಗದಲ್ಲಿರುವ ಶರಾವತಿ ಟೇಲರೇಸ್‌ನಿಂದ 10 ಸಾವಿರ ಕ್ಯೂಸೆಕ್ ನೀರನ್ನು ಮಾತ್ರ ಶರಾವತಿ ನದಿಗೆ ಬಿಡಲಾಗಿದೆ.

ಬುಧವಾರ ಸಂಜೆ ವೇಳೆಗೆ ಲಿಂಗನಮಕ್ಕಿ ಜಲಾಶಯದಿಂದ 40 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ ಎಂದು ತಹಶೀಲ್ದಾರ ಕಚೇರಿಯ ಮೂಲಗಳು ತಿಳಿಸಿವೆ.

`ಶರಾವತಿ ನದಿ ದಂಡೆಯ ಹೇರಂಗಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೈಗುಂದ ಹಾಗೂ ಕುರ್ವೆ ದ್ವೀಪ ಪ್ರದೇಶಗಳ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಅಲ್ಲಿಗೆ ದೋಣಿ ಕಳಿಸಲಾಗಿದೆ. ಪ್ರವಾಹ ಪರಿಸ್ಥಿತಿಯನ್ನು ಎದುರಿಸಲು ತಾಲ್ಲೂಕು ಆಡಳಿತ ಸಜ್ಜಾಗಿದೆ' ಎಂದು ತಹಶೀಲ್ದಾರ್ ಪ್ರಕಟಣೆ ತಿಳಿಸಿದೆ.

ಪ್ರವಾಹ ಪೀಡಿತ ಗುಂಡಬಾಳಾ ನದಿ ದಂಡೆಗಳ ಪ್ರದೇಶಗಳಿಗೆ ಶಾಸಕ ಮಾಂಕಾಳ  ವೈದ್ಯ, ತಹಶೀಲ್ದಾರ್ ಎಸ್.ಎಸ್.ಪೂಜಾರಿ ಭೇಟಿ ನೀಡಿ ಪರಿಶೀಲಿಸಿದರು.

ನೆಲಕ್ಕಪ್ಪಳಿಸಿದ ಮರಗಳು
ಅಂಕೋಲಾ:
ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಸುರಿದ ಭಾರಿ ಗಾಳಿ-ಮಳೆಗೆ ಗಿಡ ಮರಗಳು ನೆಲಕ್ಕೆ ಅಪ್ಪಳಿಸಿದ್ದು, ಕೆಲವು ಗ್ರಾಮಗಳಲ್ಲಿ ಮತ್ತು ಪಟ್ಟಣದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು.

ಪಟ್ಟಣದ ಡಾ. ದಿನಕರ ದೇಸಾಯಿ ರಸ್ತೆಯಲ್ಲಿ ಬೃಹತ್ ಮರವೊಂದು ಬಿದ್ದದ್ದರಿಂದ ಐದಾರು ಗಂಟೆಗಳ ಕಾಲ ವಾಹನಗಳು ಮತ್ತು ಪಾದಚಾರಿಗಳು ಬೇರೆ ಮಾರ್ಗದಿಂದ ಸಂಚರಿಸಬೇಕಾಯಿತು. ರಾಷ್ಟ್ರೀಯ ಹೆದ್ದಾರಿಯನ್ನು ಕೂಡಿಕೊಳ್ಳುವ ಬಸ್‌ಗಳು ಸುಂದರನಾರಾಯಣ ದೇವಸ್ಥಾನದ ಮುಂದಿನ ರಸ್ತೆಯಿಂದ ಹೋಗಬೇಕಾಯಿತು. ಹೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ವಿವಿಧ ಕಡೆಗೆ ಹರಿದುಬಿದ್ದಿದ್ದ ವಿದ್ಯುತ್ ತಂತಿಗಳನ್ನು ದುರಸ್ಥಿಪಡಿಸಲು ಹರಸಾಹಸಪಟ್ಟರು.

ತೆಂಕಣಕೇರಿಯ ಮನೆಯೊಂದರ ಮೇಲೆ ಮರಬಿದ್ದು ಹಾನಿ ಸಂಭವಿಸಿದ ಬಗ್ಗೆ ತಿಳಿದುಬಂದಿದೆ. ವಿದ್ಯುತ್ ವ್ಯತ್ಯಯದಿಂದ ಸ್ಮಾರ್ಟ್ ಕಾರ್ಡ್ ದಾಖಲಾತಿ ಕಾರ್ಯಕ್ಕೂ ಅಡಚಣೆಯುಂಟಾಗಿದ್ದು, ಸಂಬಂಧಿಸಿದವರು ಬ್ಯಾಟರಿ ಬಳಸಿಕೊಂಡು ಕಾರ್ಯನಿರ್ವಹಿಸುವಂತಾಯಿತು. ಕುಡಿಯುವ ನೀರಿನ ಪೂರೈಕೆ ಕೂಡ ವ್ಯತ್ಯಯಗೊಂಡಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಎರಡು ಮನೆಗೆ ಹಾನಿ
ಭಟ್ಕಳ:
ಮಳೆಯ ಅರ್ಭಟ ಕಡಿಮೆಯಾಗಿದ್ದರೂ ಆಗಾಗ ಬೀಸುವ ಗಾಳಿ, ಜಿಟಿಜಿಟಿ ಮಳೆಗೆ ತಾಲ್ಲೂಕಿನಲ್ಲಿ ಎರಡು ಮನೆಗಳಿಗೆ ಹಾನಿಯಾಗಿದೆ.

ತಾಲ್ಲೂಕಿನ ಜಾಲಿ ಗ್ರಾ.ಪಂ.ವ್ಯಾಪ್ತಿಯ ವೆಂಕಟಾಪುರದಲ್ಲಿ ರಾಮಕೃಷ್ಣ ದೇವಾಡಿಗ ಎಂಬವರ ಮನೆಯ ಹಂಚಿನ ಮಾಡು ಕುಸಿದುಬಿದ್ದು ಸಾವಿರಾರು ರೂಪಾಯಿ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.

ಪಟ್ಟಣದ ವಿ.ವಿ.ರಸ್ತೆಯಲ್ಲಿ ವೆಂಕಟೇಶ ಬಾಬು ಪೈ ಎಂಬವರಿಗೆ ಸೇರಿದ ಮನೆಯ ಮೇಲೆ ತೆಂಗಿನ ಮರ ಬಿದ್ದು ಮೇಲ್ಛಾವಣಿ ಹಾನಿಯಾಗಿದೆ. ಮರ ಬೀಳುವ ರಭಸದಲ್ಲಿ ವಿದ್ಯುತ್ ಕಂಬವೂ ವಾಲಿದ್ದು, ಯಾವುದೇ ಅಪಾಯವಾಗಿಲ್ಲ. ಹಾನಿಯಾದ ಸ್ಥಳಗಳಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಬೊಮ್ಮನಳ್ಳಿ ಜಲಾಶಯ ಭರ್ತಿ 
ದಾಂಡೇಲಿ:
ಇಲ್ಲಿಗೆ ಸಮೀಪದ ಅಂಬಿಕಾನಗರದ ಬಳಿಯಿರುವ ಬೊಮ್ಮನಳ್ಳಿ ಪಿಕಪ್ ಡ್ಯಾಮ್(ಡೈವರ್ಶನ್ ಡ್ಯಾಮ್) ಜಲಾಶಯವು ಭರ್ತಿಯಾಗಿದ್ದು, ಈ ಪ್ರದೇಶದ ಜನರು ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸರಿಸಬೇಕೆಂದು ಕೆಪಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಜಲಾಶಯದ ಗರಿಷ್ಠ ಮಟ್ಟ 438.38ಮೀಟರ್ ಆಗಿದ್ದು, ಗುರುವಾರ ಸಂಜೆ 4ಗಂಟೆ ಹೊತ್ತಿಗೆ ಜಲಾಶಯದಲ್ಲಿ ಒಟ್ಟು 437.4 ಮೀಟರ್ ನೀರು ಸಂಗ್ರಹವಾಗಿದೆ. ಇದುವರೆಗೆ ಒಟ್ಟು 2.4 ಟಿ.ಎಂ.ಸಿ.ನೀರು ಜಲಾಶಯಕ್ಕೆ ಹರಿದು ಬಂದಿದ್ದು, ಶೇ 81ರಷ್ಟು ಭರ್ತಿಯಾಗಿದೆ. ಗುರುವಾರ ಸಂಜೆಯ ವೇಳೆಗೆ ಕೇವಲ 24 ಗಂಟೆಗಳಲ್ಲಿ 45ಎಂ.ಎಂ. ಮಳೆ ಸುರಿದಿದೆ.

ಒಳ ಹರಿವಿನ ಪ್ರಮಾಣ 13ಸಾವಿರ ಕ್ಯೂಸೆಕ್, ಹೊರ ಹರಿವು 4,300 ಕ್ಯೂಸೆಕ್ ಆಗಿದೆ. ಇಲ್ಲಿಂದ ನೀರು ಸರಬರಾಜಾಗುವ ಅಂಬಿಕಾನಗರ ನಾಗಝರಿ ವಿದ್ಯುತ್ ಉತ್ಪಾದನಾ ಘಟಕದಲ್ಲಿ 150 ಮೆಗಾ ಯುನಿಟ್‌ಗಳ 6 ವಿದ್ಯುತ್ ಉತ್ಪಾದನಾ ಯಂತ್ರಗಳಿದ್ದು, ಒಂದು ಯಂತ್ರದ ನಿರ್ವಹಣಾ ಕಾರ್ಯ ನಡೆದಿರುವುದರಿಂದ ಉಳಿದ 5 ಯಂತ್ರಗಳು ಚಾಲ್ತಿಯಲ್ಲಿವೆ. 

ಮಳೆ ಮುಂದುವರಿದರೆ ಜಲಾಶಯದಿಂದ ಯಾವುದೇ ವೇಳೆ ನೀರು ಹೊರಬಿಡುವ ಸಾಧ್ಯತೆಗಳಿದ್ದು, ಅಣೆಕಟ್ಟಿನ ಕೆಳ ಪ್ರದೇಶ ಹಾಗೂ ಕಾಳಿ ನದಿಯ ಇಕ್ಕೆಲಗಳಲ್ಲಿ ವಾಸಿಸುವ ಜನರು ತಮ್ಮ ಆಸ್ತಿ, ಜಾನುವಾರುಗಳಿಗೆ ಹಾನಿಯಾಗದಂತೆ ಮುಂಜಾಗ್ರತೆ ವಹಿಸಿ ಸುರಕ್ಷಿತ ಪ್ರದೇಶಗಳಿಗೆ ತೆರಳುವುದು ಸೂಕ್ತ ಎಂದು  ತಿಳಿಸಲಾಗಿದೆ.

ಜಿಲ್ಲೆಯಲ್ಲಿ 62.2 ಮಿ.ಮೀ. ಮಳೆ: ಗುರುವಾರ ಬೆಳಿಗ್ಗೆ 8ಕ್ಕೆ ಅಂತ್ಯಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಸರಾಸರಿ 62.2 ಮಿ.ಮೀ ಮಳೆಯಾಗಿದೆ. ಅಂಕೋಲಾ 2.2 ಮಿ.ಮೀ, ಭಟ್ಕಳ 23, ಹಳಿಯಾಳ 37.8, ಹೊನ್ನಾವರ 58.8, ಕಾರವಾರ 17.4, ಕುಮಟಾ 43.2, ಮುಂಡಗೋಡ 73.2, ಸಿದ್ದಾಪುರ 112.4, ಶಿರಸಿ 35, ಜೋಯಿಡಾ 93.2 ಹಾಗೂ ಯಲ್ಲಾಪುರ 188.4 ಮಿ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.