ADVERTISEMENT

ಶಿಥಿಲಾವಸ್ಥೆಯಲ್ಲಿ ಕಾರವಾರ ಮೀನು ಮಾರುಕಟ್ಟೆ

ನಾಗೇಂದ್ರ ಖಾರ್ವಿ
Published 26 ಸೆಪ್ಟೆಂಬರ್ 2011, 7:05 IST
Last Updated 26 ಸೆಪ್ಟೆಂಬರ್ 2011, 7:05 IST

ಕಾರವಾರ: ಶಿಥಿಲಾವಸ್ಥೆಯಲ್ಲಿರುವ ಕಟ್ಟಡ, ಇಕ್ಕಟ್ಟಾಗಿರುವ ಸ್ಥಳ. ಮೈಮೈ ತಾಗಿಸಿಕೊಂಡೇ ಅಡ್ಡಾಡುವ ಪರಿಸ್ಥಿತಿ. ಒಂದೇಕಡೆ ಸಂಗ್ರಹವಾಗಿರುವ ಮೀನು, ಮಾಂಸ ತೊಳೆದ ನೀರು. ಮೂಗು ಮುಚ್ಚಿಕೊಂಡೇ ಓಡಾಡುವ ಸ್ಥಿತಿ. ಇದು ನಗರದ ಮೀನು ಮಾರುಕಟ್ಟೆಯ ಸದ್ಯದ ಸ್ಥಿತಿ.

ನಗರಸಭೆಗೆ ಸೇರಿದ ಮೀನು ಮಾರುಕಟ್ಟೆ ನಗರದ ಹೃದಯಭಾಗದಲ್ಲಿದ್ದರೂ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಮಾಂಸದ ಮಾರಾಟದ ಅಂಗಡಿಗಳೂ ಇರುವುದರಿಂದ ಸಮಸ್ಯೆ ದುಪ್ಪಟ್ಟಾಗಿದೆ. ಈ ಅವ್ಯವಸ್ಥೆಯ ಮಧ್ಯೆಯೇ ವ್ಯಾಪಾರಸ್ಥರು ಕಾಲ ಕಳೆಯಬೇಕಾಗಿದೆ.

ನಗರಸಭೆಯೇ ಮಾರುಕಟ್ಟೆಯ ನಿರ್ವಹಣೆಯ ಜವಾಬ್ದಾರಿ ಹೊಂದಿದ್ದು ಬೆಳಿಗ್ಗೆ ಪೌರಕಾರ್ಮಿಕರು ಬಂದು ತ್ಯಾಜ್ಯಗಳನ್ನು ಸಂಗ್ರಹಿಸಿಕೊಂಡು ಹೋಗುವುದು ಬಿಟ್ಟರೆ ಸ್ವಚ್ಛತೆ ಎನ್ನುವುದು ದೂರದ ಮಾತಾಗಿದೆ. ಶಿಥಿಲಾವಸ್ಥೆಯಲ್ಲಿರುವ ಈ ಮೀನು ಮಾರುಕಟ್ಟೆ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯ ಅನೇಕ ವರ್ಷಗಳಿಂದ ಕೇಳಿ ಬರುತ್ತಿದ್ದರೂ ಅದಕ್ಕೆ ಕಾಲಕೂಡಿ ಬಂದಿಲ್ಲ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಮೀನು ಮಾರುಕಟ್ಟೆ ನಿರ್ಮಿಸುವ ಕುರಿತು ನಗರಸಭೆಗೆ ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಕಳೆದ ಮೇ 5ರಂದು ನಗರಸಭೆ ವಿಶೇಷ ಸಾಮಾನ್ಯ ಸಭೆ ನಡೆಸಿ ಚರ್ಚೆ ನಡೆಸಿ ಮಾರುಕಟ್ಟೆ ನಿರ್ಮಾಣಕ್ಕೆ ಒಮ್ಮತದ ನಿರ್ಣಯ ಕೈಗೊಂಡಿತು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರವು ರೂ. 1.88 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣ ಮಾಡಲು ಯೋಜನಾ ವರದಿ ಸಿದ್ಧಪಡಿಸಿ ಮೀನುಗಾರಿಕೆ ಇಲಾಖೆಯ ಮೂಲಕ ಎನ್‌ಎಫ್‌ಡಿಬಿ (ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ)ಗೆ ಸಲ್ಲಿಸಿತ್ತು.

ಯೋಜನಾ ವರದಿ ಪರಿಶೀಲಿಸಿದ ಎನ್‌ಎಫ್‌ಡಿಬಿ ಅಂದಾಜು ವೆಚ್ಚದ ಶೇ 90ರಷ್ಟು ಅಂದರೆ ರೂ. 1.69 ಕೋಟಿ ಅನುದಾನ ನೀಡಲು ಒಪ್ಪಿಗೆ ಸೂಚಿಸಿದೆ. ಉಳಿದ ಹಣವನ್ನು ಮೀನುಗಾರಿಕಾ ಇಲಾಖೆ (ರೂ. 10 ಲಕ್ಷ) ಮತ್ತು ನಗರಸಭೆ (ರೂ. 8.85 ಲಕ್ಷ) ಭರಿಸಲಿದೆ. ಎನ್‌ಎಫ್‌ಡಿಬಿ ಈಗಾಗಲೇ ಶೇ 50ರಷ್ಟು ಅನುದಾನ ಬಿಡುಗಡೆ ಮಾಡಿದೆ.

ಮೀನು ಮಾರುಕಟ್ಟೆ ನೆಲಸಮಗೊಳಿಸಿದ ನಂತರ ಪರ್ಯಾಯ ವ್ಯವಸ್ಥೆಯ ಕಲ್ಪಿಸುವ ಕುರಿತು ನಗರಸಭೆ ಕಾರ್ಯಪ್ರವೃತ್ತವಾಗಿಲ್ಲ. ಹೀಗೆ ಅನುದಾನ ಬಿಡುಗಡೆ ಆಗಿದ್ದರೂ ಮಾರುಕಟ್ಟೆ ನಿರ್ಮಾಣ ಮಾಡುವ ಪ್ರಕ್ರಿಯೆಗಳು ನಿಧಾನಗತಿಯಲ್ಲಿ ಸಾಗಿದೆ.

`ಮೀನು ಮಾರುಕಟ್ಟೆ ನೆಲಸಮಗೊಳಿಸಲು ಅಂಗಡಿಗಳನ್ನು ತೆರವುಗೊಳಿಸಲು ಅಂಗಡಿಕಾರರಿಗೆ ನೋಟಿಸ್ ನೀಡಲಾಗಿದೆ. ಅಕ್ಟೋಬರ್ ಅಥವಾ ನವೆಂಬರ್ ನಂತರ ಕಾಮಗಾರಿಗೆ ಚಾಲನೆ ದೊರಕುವ ಸಾಧ್ಯತೆಯಿದೆ~ ಎನ್ನುತ್ತಾರೆ ನಗರಸಭೆ ಆಯುಕ್ತ ಎ.ಡಿ.ರೇವಣಕರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.