ADVERTISEMENT

ಸಂಭ್ರಮದ ನರಸಿಂಹ ದೇವರ ಜಾತ್ರೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 9:30 IST
Last Updated 10 ಜನವರಿ 2012, 9:30 IST
ಸಂಭ್ರಮದ ನರಸಿಂಹ ದೇವರ ಜಾತ್ರೆ
ಸಂಭ್ರಮದ ನರಸಿಂಹ ದೇವರ ಜಾತ್ರೆ   

ಕಾರವಾರ: ಅರಬ್ಬಿ ಸಮುದ್ರದಲ್ಲಿರುವ ಕೂರ್ಮಗಡ ದ್ವೀಪದಲ್ಲಿ ನರಸಿಂಹ ದೇವರ ಜಾತ್ರೆ ಸಾವಿರಾರು ಭಕ್ತರ ಮಧ್ಯೆ ಸೋಮವಾರ ಸಂಭ್ರಮದಿಂದ ನೆರವೇರಿತು. ಮಾವಿನ ತೋರಣ, ಬಣ್ಣದಿಂದ ಅಲಂಕರಿಸಿದ ದೋಣಿಯಲ್ಲಿ ತಾಲ್ಲೂಕಿನ ಕಡವಾಡದಿಂದ ನರಸಿಂಹ ದೇವರ ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದ ನಂತರ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಂಡವು.

ಇದು ದ್ವೀಪದಲ್ಲಿ ನಡೆಯುವ ಜಾತ್ರೆ ಆಗಿರುವುದರಿಂದ ಭಕ್ತರು ನಗರದ ಕೋಡಿಭಾಗ, ದೇವಭಾಗ, ಮಾಜಾಳಿ, ಬೈತಖೋಲ, ಅಲಿಗದ್ದಾ ಕಡಲತೀರಗಳಿಂದ ಮೀನುಗಾರಿಕೆ ದೋಣಿಯಲ್ಲಿ ಬಂದು ಪೂಜೆ ಸಲ್ಲಿಸಿ ಕೃತಾರ್ಥರಾದರು. ಜಾತ್ರೆಗಾಗಿ ದೋಣಿಗಳನ್ನು ಬಣ್ಣ, ಹೂವಿನಿಂದ ಅಲಂಕರಿಸಲಾಗಿತ್ತು. ಕಾರವಾರ ಸೇರಿದಂತೆ ಗೋವಾ, ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧೆಡೆಯಿಂದಲೂ ಭಕ್ತರು ಜಾತ್ರೆಗೆ ಬಂದು ಹರಕ್ಕೆ ಸಲ್ಲಿಸಿದರು.

ಕೂರ್ಮಗಡ ದ್ವೀಪದಲ್ಲಿರುವ ನರಸಿಂಹ ದೇವಸ್ಥಾನ ಸಮುದ್ರ ಮಟ್ಟದಿಂದ ಅಂದಾಜು ಸುಮಾರು 300 ಮೀಟರ್ ಎತ್ತರದಲ್ಲಿದ್ದು ಜಾತ್ರೆಗೆ ಬಂದ ವೃದ್ಧರು ಪ್ರಯಾಸಪಟ್ಟು ದೇವಸ್ಥಾನ ತಲುಪಿದರೆ. ಅಂಗವಿಕಲರು ಮತ್ತೊಬ್ಬರ ನೆರವು ಪಡೆದು ಗುಡ್ಡಹತ್ತಿ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರು.

ಇದೊಂದು ಪ್ರವಾಸಿ ಸ್ಥಳವೂ ಆಗಿರುವುದರಿಂದ ಜಾತ್ರೆಗೆ ಕುಟುಂಬ ಸಮೇತರಾಗಿ ಬಂದ ಭಕ್ತರು ಮನೆಯಿಂದ ಅಡುಗೆಯನ್ನು ಸಿದ್ಧಪಡಿಸಿಕೊಂಡು ತಂದಿದ್ದರು. ದೇವರಿಗೆ ಪೂಜೆ ಸಲ್ಲಿಸಿ ಬಳಿಕ ಅಲ್ಲಿಯೇ ಊಟ ಮಾಡಿ ಸಂಜೆ ಹೊತ್ತಿಗೆ ಮನೆಗೆ ವಾಪಸಾದರು.

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಗೋಪಾಲಕೃಷ್ಣ ಗೌಡ, ಜಿಲ್ಲಾಧಿಕಾರಿ ಬಿ.ಎನ್.ಕೃಷ್ಣಯ್ಯ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿ.ಶ್ರೀಶಾನಂದ, ಒಂದನೇ ತ್ವರಿತ ನ್ಯಾಯಾಲಯದ ನ್ಯಾಯಾಧೀಶ ಪಿ.ಎಸ್.ಬಾಳಿಕಾಯಿ, ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ನಾರಾಯಣಪ್ಪ ಜಾತ್ರೆಗೆ ಬಂದು ದೇವರ ದರ್ಶನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.