ಶಿರಸಿ: ತಾಲ್ಲೂಕಿನ ಐತಿಹಾಸಿಕ ಕ್ಷೇತ್ರ ಬನವಾಸಿಯ ಮಧುಕೇಶ್ವರ ದೇವರ ರಥೋತ್ಸವ ಮಂಗಳವಾರ ಸಡಗರದಿಂದ ಜರುಗಿತು. ಸಹಸ್ರಾರು ಜನ ಪಾಲ್ಗೊಂಡು ದೇವರಿಗೆ ಪೂಜೆ ಸಲ್ಲಿಸಿದರು.
ಮಂಗಳವಾರ ಮಧ್ಯಾಹ್ನ ರಥಾರೂಢನಾದ ಮಧುಕೇಶ್ವರ ದೇವರಿಗೆ ಭಕ್ತರು ಸರದಿಯಲ್ಲಿ ನಿಂತು ಹಣ್ಣು-ಕಾಯಿ ಸಮರ್ಪಿಸಿದರು. ರಾತ್ರಿ 12.30ಗಂಟೆಗೆ ರಥ ಎಳೆಯುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ರಥ ಬೀದಿಯಲ್ಲಿ ಕಿಕ್ಕಿರಿದು ಸೇರಿದ್ದ ಭಕ್ತರು, ರಥಾರೂಢ ಮಧುಕೇಶ್ವರನಿಗೆ ಭಕ್ತಿಭಾವದಿಂದ ಕೈ ಮುಗಿದು ಕೃತಾರ್ಥರಾದರು.
ರಥ ಬೀದಿಯಲ್ಲಿ 650 ಮೀಟರ್ ಸಾಗಿದ ಬೃಹತ್ ರಥ ಬೆಳಿಗ್ಗೆ 7ಗಂಟೆ ಸುಮಾರಿಗೆ ಮೂಲ ನೆಲೆ ಬಂದು ತಲುಪಿತು. ರಥೋತ್ಸವದ ವೇಳೆ ಜಾನಪದ ತಂಡಗಳು ವಾಲಗ, ಡೊಳ್ಳು, ಹಲಗೆ ಬಡಿತದ ಮೂಲಕ ಸೇವೆ ಸಲ್ಲಿಸಿದವು. ಅನಿವಾಸಿ ಬನವಾಸಿ ಬಳಗದವರು ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಪ್ರಸಾದ ವ್ಯವಸ್ಥೆಗೊಳಿಸಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಮುಖರು, ಊರ ಹಿರಿಯರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.