ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ‘ಗೆಳತಿ’ಯ ಸಹಾಯ

ಘಟಕ ಉದ್ಘಾಟಿಸಿದ ನ್ಯಾಯಾಧೀಶೆ ಸುನಿತಾ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 11:11 IST
Last Updated 27 ಮಾರ್ಚ್ 2018, 11:11 IST
ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗೆಳತಿ ಘಟಕ ಉದ್ಘಾಟಿಸಿದ ನ್ಯಾಯಾಧೀಶೆ ಸುನಿತಾ ಮಾತನಾಡಿದರು
ಶಿರಸಿಯ ಸರ್ಕಾರಿ ಆಸ್ಪತ್ರೆಯಲ್ಲಿ ಗೆಳತಿ ಘಟಕ ಉದ್ಘಾಟಿಸಿದ ನ್ಯಾಯಾಧೀಶೆ ಸುನಿತಾ ಮಾತನಾಡಿದರು   

ಶಿರಸಿ: ದೌರ್ಜನ್ಯಕ್ಕೊಳಗಾದ ಮಹಿಳೆ ಮತ್ತು ಮಕ್ಕಳಿಗೆ ಒಂದೇ ಸೂರಿನಡಿ ಹಲವು ಸೌಲಭ್ಯಗಳನ್ನು ಒದಗಿಸುವ 'ಗೆಳತಿ' ವಿಶೇಷ ಚಿಕಿತ್ಸಾ ಘಟಕ ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರಂಭಗೊಂಡಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಸಾಂತ್ವನ ಮಹಿಳಾ ವೇದಿಕೆ ಆಶ್ರಯದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಸಿವಿಲ್ ನ್ಯಾಯಾಧೀಶೆ ಸುನಿತಾ ಘಟಕವನ್ನು ಉದ್ಘಾಟಿಸಿದರು. ಇಂದು ಎಲ್ಲೆಡೆ ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹೀಗೆ ದೌರ್ಜನ್ಯಕ್ಕೆ ಒಳಗಾದವರಿಗೆ ಆಪ್ತವಾಗಿ ಸ್ಪಂದಿಸಲು ಗೆಳತಿ ಘಟಕ ನೆರವಾಗಲಿದೆ. ದೌರ್ಜನ್ಯದ ವಿರುದ್ಧ ಸಾಕಷ್ಟು ಕಾನೂನುಗಳು ಜಾರಿಯಲ್ಲಿವೆ. ಆದರೂ ದೌರ್ಜನ್ಯ ನಡೆಯುತ್ತಿದೆ. ಕೇವಲ ಕಾನೂನಿಂದ ಇಂತಹ ಸಮಸ್ಯೆ ನಿವಾರಿಸಲು ಸಾಧ್ಯವಿಲ್ಲ, ಸಮಾಜವೂ ಕೈಜೋಡಿಸಬೇಕು ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ವಿನಾಯಕ ಭಟ್ಟ ಮಾತನಾಡಿ, ಸಾಕಷ್ಟು ಸಂಖ್ಯೆಯಲ್ಲಿ ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದರೂ, ದಾಖಲಾಗುವ ಪ್ರಮಾಣ ತೀರಾ ಕಡಿಮೆ. ದೌರ್ಜನ್ಯಕ್ಕೊಳಗಾದವರು ಯಾವುದೇ ಹಿಂಜರಿಕೆ ಇಲ್ಲದೇ ಪ್ರಕರಣ ದಾಖಲಿಸಬೇಕು. ಹಾಗಾದಾಗ ಮಾತ್ರ ನ್ಯಾಯ ನೀಡಲು ಸಾಧ್ಯ ಎಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಹೇಮಲತಾ ಮಾತನಾಡಿ, ಮಹಿಳೆಯರು, ಮಕ್ಕಳ ಮೇಲೆ ದೌರ್ಜನ್ಯ ನಡೆದರೆ, ಅದಕ್ಕೆ ಪರಿಹಾರ ಕಲ್ಪಿಸಲು ಗೆಳತಿ ಘಟಕ ಶ್ರಮಿಸಲಿದೆ ಎಂದರು.

ADVERTISEMENT

ಸಾಂತ್ವನದ ಅಧ್ಯಕ್ಷೆ ಸಂಧ್ಯಾ ಕುರ್ಡೇಕರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ವಿಜಯನಳಿನಿ ರಮೇಶ ಪ್ರಾಸ್ತಾವಿಕವಾಗಿ ಮಾತನಾಡಿದರು.  ಜ್ಯೋತಿ ಭಟ್ಟ ನಿರೂಪಿಸಿದರು.

**

ಪ್ರಕರಣ ದಾಖಲಿಸಲು ಅವಕಾಶ

ದೌರ್ಜನ್ಯಕ್ಕೊಳಗಾದ ಮಕ್ಕಳು ಹಾಗೂ ಮಹಿಳೆಯರಿಗೆ ಕಾನೂನು ನೆರವು, ವೈದ್ಯಕೀಯ ಚಿಕಿತ್ಸೆ, ತಾತ್ಕಾಲಿಕ ಆಶ್ರಯ, ಪೊಲೀಸ್ ನೆರವು, ಆಪ್ತ ಸಮಾಲೋನೆಯಂಥ ಸೌಲಭ್ಯಗಳು ಗೆಳತಿ ಘಟಕದಲ್ಲಿ ಲಭ್ಯ ಇರುತ್ತವೆ. ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನಡೆದರೆ ಗೆಳತಿ ಘಟಕದಲ್ಲಿ ಪ್ರಕರಣ ದಾಖಲಿಸಲು ಅವಕಾಶ ಕಲ್ಪಿಸಲಾಗಿದೆ. ಆಸ್ಪತ್ರೆ ಸಹಾಯವಾಣಿ ಪಕ್ಕದ ಕೊಠಡಿಯಲ್ಲಿರುವ ಈ ಘಟಕ ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಕಾರ್ಯನಿರ್ವಹಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.