ADVERTISEMENT

ಸಹಿಷ್ಣುತೆ: ಸ್ತ್ರೀ ಆಂತರ್ಯದ ಗೆಲುವು

ಮಹಿಳಾ ಸಮಾವೇಶದಲ್ಲಿ ರಾಜ್ಯ ಮಹಿಳಾ ವಿ.ವಿ ಕುಲಪತಿ ಸಬಿಹಾ ಭೂಮಿ ಗೌಡ ಅಭಿಮತ

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2016, 6:16 IST
Last Updated 18 ಅಕ್ಟೋಬರ್ 2016, 6:16 IST

ಶಿರಸಿ:  ಮಹಿಳೆಯರು ಹಾಗೂ ಸಮಾಜದ ಎಲ್ಲ ದಮನಿತರ ಸಹಿಷ್ಣುತೆ ಎಂದಿಗೂ ಅವರ ಅಸಹಾಯಕತೆ ಅಲ್ಲ. ಇದರೊಳಗೆ ಗೆಲುವಿನ ಆಶಾಕಿರಣವಿದೆ ಎಂದು ರಾಜ್ಯ ಮಹಿಳಾ ವಿಶ್ವವಿದ್ಯಾ ಲಯದ ಕುಲಪತಿ ಡಾ. ಸಬಿಹಾ ಭೂಮಿ ಗೌಡ ಸೋಮವಾರ ಇಲ್ಲಿ ಅಭಿಪ್ರಾಯಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ ಜಂಟಿಯಾಗಿ ಚಿಂತನ ಸಂಘಟನೆ ಸಹಯೋಗದಲ್ಲಿ ಇಲ್ಲಿ ಆಯೋಜಿಸಿದ್ದ, ಮಹಿಳಾ ಕರ್ನಾಟಕ ಸಮಾವೇಶದ ಸಮಾರೋಪ ಭಾಷಣ ಮಾಡಿದ ಅವರು, ಸಂಬಂಧಗಳು ಕೆಡುವಾಗ ಪ್ರತಿರೋಧ ಕ್ಕಿಂತ ಹೆಚ್ಚು ಹೊಂದಾಣಿಕೆಯಿಂದ ಒಗ್ಗೂಡಿಸುವ ಶಕ್ತಿ ಮಹಿಳೆಯದ್ದಾಗಿದೆ. ಸಹಿಷ್ಣುತೆಯ ಪರಮಾವಧಿ ಸ್ತ್ರೀ ಆಗಿದ್ದು, ಅದು ಆಕೆಯ ದೌರ್ಬಲ್ಯವಲ್ಲ; ಆಂತ ರ್ಯದ ಗೆಲುವು ಎಂದರು. ಸಹಿಷ್ಣುತೆ ಎಂಬುದು ದೌರ್ಬಲ್ಯವಲ್ಲ ಎನ್ನುವು ದಾದರೆ ಅದು ಸ್ತ್ರೀ, ಪುರುಷರಿಬ್ಬರಿಗೂ ಮೌಲ್ಯವಾಗಬೇಕು ಎಂದರು.

ಸ್ತ್ರೀವಾದ ಆತ್ಮವಿಮರ್ಶೆಯಿಂದ ಆತ್ಮರತಿಯ ಕಡೆಗೆ ಹೋಗದಂತೆ ಎಚ್ಚರವಿರಬೇಕು. ಬದುಕಿನ ಸತ್ಯದ ಎದುರು ಓದಿನ ಪರಿಕರ ತೆಳುವಾಗುತ್ತದೆ. ಹೀಗಾಗಿ ಬರಹಗಾರ್ತಿಯರನ್ನು ತಳಮಟ್ಟದ ಜನರೊಡನೆ ಮುಖಾಮುಖಿಯಾಗಿಸಬೇಕು. ಅನುಭವ ವ್ಯಾಪಕತೆ ಜೊತೆಗೆ ಭಿತ್ತಿ ಹಿಗ್ಗಿಸಿಕೊಳ್ಳಲು ಮಾತು ಮತ್ತು ಬದುಕು ಒಂದಾಗಬೇಕು. ಈ ದಿಕ್ಕಿನಲ್ಲಿ ಲೇಖಕಿಯರ ಬರಹ ಹೆಚ್ಚು ಸೂಕ್ಷ್ಮ ಹಾಗೂ ಮೊನಚಾಗಬೇಕು ಎಂದು ಹೇಳಿದರು.

ಇತ್ತೀಚಿನ ವರ್ಷಗಳಲ್ಲಿ ಎಡಪಂಥೀಯರು ಎಲ್ಲೆಗಳನ್ನು ದಾಟಿ ಹೊಸ ಗುಂಪುಗಳನ್ನು ಒಳಗೊಳ್ಳುತ್ತ, ಹೊಸ ತಲೆಮಾರು ತಲುಪುವ ಕೆಲಸ ಮಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಾಗಿದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್‌, ‘ಕನ್ನಡ ಸಾಹಿತ್ಯ ಪರಿಷತ್ತಿನ ಜೊತೆಗೂಡಿ ಯುವ ಸಾಹಿತ್ಯ ಸಮ್ಮೇಳನ ಸಂಘಟನೆಗೆ ಯೋಚಿಸಲಾಗಿದೆ. ಮಹಿಳಾ ಸಮ್ಮೇಳನ, ದಲಿತ, ಬುಡಕಟ್ಟು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಸಮ್ಮೇಳನಗಳು ನಡೆಯಬೇಕು. ಏಕತ್ರಗೊಳಿಸುವು ದಕ್ಕಿಂತ ವೈವಿಧ್ಯವನ್ನು ಬೆಂಬಲಿಸಬೇಕು’ ಎಂದರು.

***
‘ನವ ಮನುವಾದಿಗಳು’

‘ನವ ಮನುಗಳು ನಮ್ಮ ಮುಂದೆ ಹುಟ್ಟಿಕೊಳ್ಳುತ್ತಿದ್ದಾರೆ. ಮದುವೆಯಾಗಿ ಪತಿಯ ಮನೆಗೆ ಹೋದ ಮಹಿಳೆ ಗಂಡನನ್ನು ಬೇರೆ ಮಾಡಲು ಹೇಳಿದರೆ ವಿವಾಹ ವಿಚ್ಛೇದನ ನೀಡಬಹುದು ಎಂದು ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿಗಳು ನೀಡಿರುವ ತೀರ್ಪು ಮೂರು ದಶಕಗಳ ಮಹಿಳಾ ಚಳವಳಿಯನ್ನು ಹಿಂದಕ್ಕೆ ಕರೆದು ಕೊಂಡು ಹೋಗುವ ಪ್ರಯತ್ನ ವಾಗಿದೆ. ಇವರಿಗಿಂತ ದೊಡ್ಡ ಮನುಗಳು ಮತ್ತಾರೂ ಇರಲಿಕ್ಕಿಲ್ಲ’ ಎಂದು ಬರಹಗಾರ್ತಿ ಎನ್. ಗಾಯತ್ರಿ ಹೇಳಿದರು.

***
ತ್ರೀ ಫೋರ್ತ್, ಟೀ ಶರ್ಟ್ ನೀಡಲಿ

‘ಇತ್ತೀಚಿನ ವರ್ಷಗಳಲ್ಲಿ ಸಮಾನತೆಯ ಮಾತು ಸುರಕ್ಷತೆಗೆ ಬಂದು ನಿಂತಿದೆ. ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರು ಪ್ರೌಢಶಾಲಾ ಹೆಣ್ಣು ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬರುವ ಶೈಕ್ಷಣಿಕ ವರ್ಷದಿಂದ ಚೂಡಿದಾರ್ ಅನ್ನು ಸಮವಸ್ತ್ರ ಮಾಡುವುದಾಗಿ ಹೇಳಿದ್ದಾರೆ. ಹೆಣ್ಣುಮಕ್ಕಳ ಸುರಕ್ಷತೆ ಬಟ್ಟೆಯಲ್ಲಿ ಇಲ್ಲ. ಸೈಕಲ್ ಹೊಡೆಯಲು ಅನುಕೂಲವಾಗಬೇಕು ಎಂದಿದ್ದರೆ ತ್ರೀ ಫೋರ್ತ್, ಟೀ ಷರ್ಟ್ ನೀಡಲಿ’ ಎಂದು ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್. ವಿಮಲಾ ಹೇಳಿದರು.

***
ಬೇಟೆಯನ್ನು ಸಂಭ್ರಮಿಸುವ ಯಾವ ಸಮಾಜವೂ ಸುರಕ್ಷಿತವಲ್ಲ.  ಬೇಟೆಯಾಡಿದ್ದನ್ನು ಕಂಡರೆ ಅಂಥ ವರನ್ನು ಮಾನವ ಸಮಾಜದಿಂದ ಹೊರಹಾಕಬೇಕು
ಡಾ. ಬಂಜಗೆರೆ ಜಯಪ್ರಕಾಶ್‌, ಅಧ್ಯಕ್ಷ, ಕನ್ನಡ ಪುಸ್ತಕ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT