ಯಲ್ಲಾಪುರ: ‘ಸಾಹಿತ್ಯ ಎನ್ನುವುದು ಸ್ಥಳೀಯವಾದ ಪ್ರತಿಭೆಯನ್ನು, ಪರಂ ಪರೆಯನ್ನು ವಿಶಾಲ ಮನೋಭಾವ ದಿಂದ ಜಾಗತಿಕ ಮಟ್ಟದಲ್ಲಿ ಬೆಳಕಿಗೆ ತರುವ ಕನ್ನಡಿ ಇದ್ದಂತೆ. ಕನ್ನಡ ಯಾವಾಗಲೂ ಇತರ ಭಾಷೆಗಳೊಂದಿಗೆ ಸಾಮರಸ್ಯವನ್ನು ಕಾಯ್ದು ಕೊಂಡು ಬಂದಿದೆ’ ಎಂದು ಕಥೆಗಾರ ಡಾ. ಶ್ರೀಧರ ಬಳಗಾರ ಹೇಳಿದರು.
ತಾಲ್ಲೂಕು 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ನಾವು ಬಹು ಭಾಷಾ ವಲಯದ ಬೇಸಾಯದಲ್ಲಿದ್ದೇವೆ. ಕನ್ನಡಿಗರು ಕನಿಷ್ಠ ಎರೆಡು ಭಾಷೆಗಳನ್ನು ಆಡುವ ಸಮ್ಮಿಶ್ರ ಸಂಸ್ಕೃತಿ ಹೊಂದಿದ್ದೇವೆ. ಕನ್ನಡ ಮಾಧ್ಯಮದಲ್ಲಿ ಕಲಿಯಿರಿ, ಇಂಗ್ಲಿಷನ್ನು ಭಾಷೆಯಾಗಿ ಚೆನ್ನಾಗಿ ಕಲಿಯಿರಿ’ ಎಂದರು.
‘ಇಂದು ಎಲ್ಲವನ್ನೂ ಸರ್ಕಾರ ನೀಡಬೇಕೆನ್ನುವ ಅಸಹಾಯಕ ಸ್ಥಿತಿಯಲ್ಲಿ ರೈತನಿದ್ದಾನೆ. ಅನ್ನ ಬೆಳೆಯ ಬೇಕಾದ ಭೂಮಿಯಲ್ಲಿ ವಾಣಿಜ್ಯ ಬೆಳೆ ಬೆಳೆಯುವ ಮೂಲಕ ಮಣ್ಣಿನ, ಜೀವ ಜಗತ್ತಿನ ಜೊತೆಗೆ ಹಬ್ಬ ಹರಿದಿನದ ಬಾಂಧವ್ಯವನ್ನು ಕಡಿದುಕೊಂಡು ಹಣದ ಹಿಂದೆ ಬೆನ್ನತ್ತಿ ಹೋಗುತ್ತಿ ದ್ದೇವೆ. ಇದು ಮಾನಸಿಕ ಕ್ಷೋಭೆಗೆ ಕಾರಣವಾಗುತ್ತಿದೆ’ ಎಂದರು.
‘ಹೆಣ್ಣು ಕೃಷಿ, ಸಮುದಾಯದ ಅಭಿವೃದ್ಧಿಯಲ್ಲಿ ಆಸಕ್ತಿ ಕಳೆದುಕೊಳ್ಳುತ್ತಿ ದ್ದಾಳೆ. ಕೃಷಿಕರಿಗೆ ಹೆಣ್ಣು ಸಿಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಇಂದು ಕೃಷಿ ಪಾಳು ಬಿದ್ದಿದೆ. ನಗರದೆಡೆಗೆ ಒಲವು ಹೆಚ್ಚಾಗಿದ್ದು ವಲಸೆ ಹೆಚ್ಚಾಗಿದೆ. ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿವೆ.
ಮನೆಯಲ್ಲಿ ದೀಪ ಹಚ್ಚುವವರಿಲ್ಲ. ಪರಂಪರೆಯ ವಾರಸುದಾರಿಕೆಗೆ ಒಡೆಯರಾರು ಎಂಬ ಪ್ರಶ್ನೆ ಉದ್ಭವವಾಗುತ್ತಿದ್ದು ಕೃಷಿಯ ಬಗ್ಗೆ ನಂಬಿಕೆ ಆತ್ಮ ವಿಶ್ವಾಸ ಹೊರಟು ಹೋಗಿದೆ’ ಎಂದರು.
‘ನೆಮ್ಮದಿ ಎಂಬ ನದಿಯನ್ನು ಅಂತರಂಗದಲ್ಲಿ ನಾವು ಕಳೆದುಕೊಂಡಿದ್ದೇವೆ. ಅಭಿವೃದ್ಧಿ ಮತ್ತು ಪರಿಸರ ಇವೆರಡೂ ಹೋರಾಟದ ಮಜಲುಗಳಾಗಿರುವುದು ವಿಷಾದ ನೀಯ. ಜಿಲ್ಲೆಯ ಪರಿಸರವನ್ನು ಸಂರಕ್ಷಣೆ ಮಾಡುವ ವಿಧಾನದಲ್ಲಿಯೇ ಅಭಿವೃದ್ಧಿ ಇದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.