ADVERTISEMENT

ಹಜ್ ಯಾತ್ರಿಗಳಿಗೆ ಗೋವಾದಿಂದ ಪ್ರಯಾಣ ಅವಕಾಶ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2012, 7:00 IST
Last Updated 1 ಮಾರ್ಚ್ 2012, 7:00 IST

ದಾಂಡೇಲಿ: ಹಳಿಯಾಳ- ದಾಂಡೇಲಿ- ಜೋಯಿಡಾದ ಹಜ್ ಯಾತ್ರಿಗಳಿಗೆ ಮಂಗಳೂರು ವಿಮಾನ ನಿಲ್ದಾಣದ ಬದಲಿಗೆ ಗೋವಾ ವಿಮಾನ ನಿಲ್ದಾಣದಿಂದ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡುವಂತೆ ಶಾಸಕರಾದ ಸುನೀಲ ಹೆಗಡೆಯವರು ಸರ್ಕಾರಕ್ಕೆ ಮಾಡಿಕೊಂಡ ಮನವಿಗೆ ಸ್ಪಂದಿಸಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಈ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿದ್ದಾರೆ.

ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆಯು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಹಜ್ ಕಮಿಟಿ ಆಫ್ ಇಂಡಿಯಾದ ಮುಖ್ಯ ಕಾರ್ಯನಿರ್ವಾಹಕರಿಗೆ ಪತ್ರ ಬರೆದು ತಿಳಿಸಿದ್ದು, ಪತ್ರದ ಪ್ರತಿಗಳನ್ನು ಕೇಂದ್ರಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಹಾಗೂ ಶಾಸಕ ಸುನೀಲ ಹೆಗಡೆಯವರಿಗೆ ರವಾನಿಸಿದ್ದಾರೆ.

 `ಮುಸ್ಲಿಮರ ಮನವಿಯಂತೆ ತಾನು ಮುಖ್ಯಮಂತ್ರಿ ಸದಾನಂದಗೌಡ ಅವರಲ್ಲಿ ಮನವಿ ಮಾಡಿಕೊಂಡಿದ್ದೆ. ಮುಖ್ಯಮಂತ್ರಿಗಳು ನಮ್ಮ ಮನವಿಗೆ ಸ್ಪಂದಿಸಿ ಕೇಂದ್ರಕ್ಕೆ ಶಿಫಾರಸ್ಸನ್ನು ಮಾಡಿರುವುದು ಸಂತಸದ ಸಂಗತಿಯಾಗಿದೆ~ ಎಂದು ಶಾಸಕರಾದ ಸುನೀಲ ಹೆಗಡೆ ಹೇಳಿದರು.

ಇನ್ನು ಮುಂದೆ ಹಳಿಯಾಳ- ದಾಂಡೇಲಿ- ಜೋಯಿಡಾದ ಮುಸ್ಲಿಮರಿಗೆ ಹಜ್‌ಗೆ ಹೋಗಿಬರಲು ಗೋವಾದಿಂದ ಅವಕಾಶವಾಗಲಿದೆ ಎಂದರು.

ಮುಸ್ಲಿಂ ಮುಖಂಡರ ಹರ್ಷ: ಹಳಿಯಾಳ- ಮುಖ್ಯಮಂತ್ರಿಗಳ ಕ್ರಮದ ಬಗ್ಗೆ ಮುಸ್ಲಿಂ ಪ್ರಮುಖರು ಹರ್ಷ ವ್ಯಕ್ತಪಡಿಸಿದ್ದಾರೆ.ಜೆ.ಡಿ.ಎಸ್.ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಮುಸ್ತಾಕ ಶೇಖ, ಅಂಜುಮನ್ ಅಧ್ಯಕ್ಷ ಮುನ್ನಾ ವಹಾಬ್, ಕಾರ್ಯದರ್ಶಿ ಅಮೀರ್ ಖಾನ್, ಹಿರಿಯರಾದ ಡಾ.ಎನ್. ಎ.ಖಾನ್, ಬಾಬಾ ಮುಲ್ಲಾ, ಸುಬಾನಿ ಹುಬ್ಬಳ್ಳಿ, ರಾಜು ಮುಲ್ಲಾ, ಆದಂ ದೇಸೂರ ಮುಂತಾದವರು ಸಂತಸ ಹಂಚಿಕೊಂಡಿದ್ದಾರೆ. ಕೇಂದ್ರ ಸರಕಾರ ಕೂಡ ಈಬಗ್ಗೆ ಆದಷ್ಟು ಬೇಗ ಸಮ್ಮತಿ ಸೂಚಿಸಿ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.