ADVERTISEMENT

ಹಳೆ ತಹಶೀಲ್ದಾರ ಕಚೇರಿ ತೆರವಿಗೆ ಅನುಮತಿ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 7:19 IST
Last Updated 25 ಡಿಸೆಂಬರ್ 2012, 7:19 IST

ಕಾರವಾರ: ನಗರದ ನೂತನ ಬಸ್ ನಿಲ್ದಾಣ ಕಟ್ಟಡ ಕಾಮಗಾರಿಗೆ ಅಡಚಣೆಯಾಗಿದ್ದ ಹಳೆ ತಹಶೀಲ್ದಾರ ಕಚೇರಿ ಕಟ್ಟಡ ತೆರವುಗೊಳಿಸಲು 55 ಲಕ್ಷ ರೂಪಾಯಿಗಳನ್ನು ಕಂದಾಯ ಇಲಾಖೆಗೆ ಪಾವತಿಸಿ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲು ಸರ್ಕಾರ ಜಿಲ್ಲಾಡಳಿತಕ್ಕೆ ಆದೇಶ ನೀಡಿದೆ.

ತಹಸೀಲ್ದಾರ ಕಚೇರಿಯ ಕಟ್ಟಡ ತೆರವುಗೊಳಿಸುವ ಸಂಬಂಧ ಜಿಲ್ಲಾಡಳಿತ ಅಂದಾಜು ರೂ 90 ಲಕ್ಷದ ಪ್ರಸ್ತಾವ ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿತ್ತು. ಇದಕ್ಕೆ ಪೂರಕವಾಗಿ ಮೀನುಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಆನಂದ ಅಸ್ನೋಟಿಕರ್ ಅವರು ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರನ್ನು ಭೇಟಿ ಮಾಡಿ ತಹಸೀಲ್ದಾರ ಕಚೇರಿಯನ್ನು ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಮನವಿ ಮಾಡಿದ್ದರು.

ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ, ಕಳೆದನ. 28ರಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಸಭೆ ನಡೆಸಿ ನಿವೇಶನವನ್ನು ಹಸ್ತಾಂತರಿಸಲು ಕ್ರಮಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದ್ದರು.

ಸಕ್ಷಮ ಪ್ರಾಧಿಕಾರ ಕಾರ್ಯನಿರ್ವಾಹಕ ಎಂಜಿನಿಯರ್ ಮತ್ತು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರು ತಹಸೀಲ್ದಾರ ಕಚೇರಿ ಕಟ್ಟಡದ ಮೌಲ್ಯಮಾಪನ ನಡೆಸಿದ್ದರು. ಕಟ್ಟಡದ ಮೌಲ್ಯವನ್ನು ರೂ 7.94 ಲಕ್ಷಕ್ಕೆ ನಿಗದಿಪಡಿಸಿದ್ದರು.  ರೂ 7.94 ಲಕ್ಷ ಹಾಗೂ ರೂ. 7.05 ಲಕ್ಷ ಪಾರಂಪರಿಕ ಶುಲ್ಕ ಸೇರಿದಂತೆ ಒಟ್ಟು ರೂ 15 ಲಕ್ಷ ಹಾಗೂ ಜಮೀನಿನ ಮೌಲ್ಯ ರೂ 40 ಲಕ್ಷ ನಿಗದಿಪಡಿಸಿ ವರದಿ ನೀಡಿದ್ದರು.

ಬಸ್ ನಿಲ್ದಾಣ ನಿರ್ಮಾಣಕ್ಕೆ ಇದ್ದ ಅಡೆತಡೆಗಳು ಪೂರ್ಣಗೊಂಡಿದ್ದು ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಬೇಕು ಎಂದು ಸಚಿವ ಆನಂದ ಅಸ್ನೋಟಿಕರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.