ADVERTISEMENT

ಹಸಿರು ಮನೆಯಲ್ಲಿ ಅರಳಿದ ಸೇವಂತಿಗೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2017, 7:39 IST
Last Updated 2 ಅಕ್ಟೋಬರ್ 2017, 7:39 IST
ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಶೇಡ್‌ನಟ್‌ ಅಡಿಯಲ್ಲಿ ಬೆಳೆದಿರುವ ಮಾರಿಗೋಲ್ಡ್ ಸೇವಂತಿಗೆ
ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಶೇಡ್‌ನಟ್‌ ಅಡಿಯಲ್ಲಿ ಬೆಳೆದಿರುವ ಮಾರಿಗೋಲ್ಡ್ ಸೇವಂತಿಗೆ   

ಶಿರಸಿ: ಹಸಿರು ಮನೆಯಲ್ಲಿ ಹಳದಿ ಸೇವಂತಿಗೆ ಬೆಳೆದಿರುವ ಇಲ್ಲಿನ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳು ಕೈತುಂಬ ಆದಾಯ ಗಳಿಸುತ್ತಿದ್ದಾರೆ. ಒಂದೆರಡು ದಿನಗಳಿಗೆ ಪಕಳೆ ಉದುರಿಸುವ ಸ್ಥಳೀಯ ಜಾತಿಯ ಸೇವಂತಿಗೆಗಿಂತ ಭಿನ್ನವಾದ ಮಾರಿಗೋಲ್ಡ್ ಸೇವಂತಿಗೆ ಬೆಳೆದಿರುವ ಮಕ್ಕಳು ಪ್ರತಿದಿನ ಬೊಗಸೆ ತುಂಬು ಹೂ ಕೊಯ್ದು ಮಾರಾಟ ಮಾಡುತ್ತಾರೆ.

‘ತಮಿಳುನಾಡಿನ ರೈತರ ಹೊಲಕ್ಕೆ ಮೊದಲು ಪ್ರವೇಶಿಸಿದ ಈ ಸೇವಂತಿಗೆಗೆ ಮಲೇಷಿಯನ್ ಮಾರಿಗೋಲ್ಡ್ ಎಂಬ ಹೆಸರು ಪ್ರಚಲಿತದಲ್ಲಿದೆ. ಗಿಡದಿಂದ ಹೂವನ್ನು ಕೊಯ್ದ ಮೇಲೆ ಎಂಟು ದಿನ ಹಾಗೆಯೇ ಇಟ್ಟರೂ ತಾಜಾತನ ಉಳಿಸಿಕೊಳ್ಳುವುದೇ ಇದರ ವಿಶೇಷ. ಸ್ಥಳೀಯ ಜಾತಿಯ ಹೂಗಳು ಮಾಲೆ ಕಟ್ಟಿಟ್ಟರೆ 2–3 ದಿನ ದಿನಗಳಲ್ಲಿ ಬಾಡಿ ಬಡವಾಗುತ್ತವೆ. ಆದರೆ ಈ ರಬ್ಬರ್ ಸೇವಂತಿಗೆ ಹಾಗಲ್ಲ’ ಎನ್ನುತ್ತಾರೆ ಪುಷ್ಪ ಕೃಷಿ ಹಾಗೂ ಉದ್ಯಾನ ವಿನ್ಯಾಸ ವಿಭಾಗದ ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ್.

‘ಅರೆ ಬಯಲು ಸೀಮೆ ಹವಾಮಾನವಿರುವ ಬನವಾಸಿಯಲ್ಲಿ ಒಂದೆರಡು ರೈತರು, ಮುಂಡಗೋಡದಲ್ಲಿ ಕೆಲವರು ಈ ತಳಿ ಬೆಳೆಸಿದ್ದಾರೆ. ಮಲೆನಾಡಿನ ಭಾಗದಲ್ಲಿ ಈ ಕೃಷಿ ಮಾಡುವ ಪ್ರಯತ್ನ ಆಗಿಲ್ಲ. ಅದಕ್ಕಾಗಿ ನಮ್ಮ ಕಾಲೇಜಿನ ಬಿ.ಎಸ್ಸಿ ಅಂತಿಮ ವರ್ಷದ ವಿದ್ಯಾರ್ಥಿಗಳು ಕೌಶಲ ತರಬೇತಿ ಕಾರ್ಯಕ್ರಮದ ಅಡಿಯಲ್ಲಿ ಮೂರು ಮಾದರಿಗಳಲ್ಲಿ ಮಾರಿಗೋಲ್ಡ್ ಸೇವಂತಿಗೆ ಬೆಳೆಸುವ ಪ್ರಯೋಗ ಮಾಡುತ್ತಿದ್ದಾರೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ನಾಟಿಯ ವಿಧಾನ: ‘ಸಗಣಿ ಗೊಬ್ಬರ, ಯೂರಿಯಾ ಮಿಶ್ರಣದೊಂದಿಗೆ ಮಣ್ಣನ್ನು ಹದಗೊಳಿಸಿಕೊಂಡು ಅರಭಾವಿಯ ತೋಟಗಾರಿಕಾ ಕಾಲೇಜಿನಿಂದ ತಂದಿದ್ದ 1400 ಸಸಿಗಳನ್ನು 500 ಚದರ ಅಡಿ ಜಾಗದಲ್ಲಿ ನಾಟಿ ಮಾಡಿದ್ದೆವು. ಗಿಡಗಳು 30 ಸೆಂಟಿ ಮೀಟರ್ ಎತ್ತರ ಬೆಳೆದ ಮೇಲೆ ಕುಡಿ ಚಿವುಟಿದರೆ ಹೆಚ್ಚು ಟಿಸಿಲೊಡೆದು ಇಳುವರಿ ಅಧಿಕ ದೊರೆಯುತ್ತದೆ. ನಾಲ್ಕು ತಿಂಗಳಲ್ಲಿ ಹಸಿರು ಗಿಡಗಳು ಮೈತುಂಬ ಹೂ ಬಿಡಲಾರಂಭಿಸಿವೆ’ ಎನ್ನುತ್ತಾರೆ ವಿದ್ಯಾರ್ಥಿ ಪವನ್ ಗುಂಡು.

‘ಸಸಿಗಳ ಬೆಲೆ, ಗೊಬ್ಬರ, ರಾಸಾಯನಿಕ ಸೇರಿ ಸುಮಾರು ₨ 20ಸಾವಿರ ವೆಚ್ಚವಾಗಿದೆ. ಆದರೆ ಹೂ ಬಿಡುವ 8–10 ತಿಂಗಳುಗಳಲ್ಲಿ ₹75ಸಾವಿರ ಆದಾಯ ಬರುವ ನಿರೀಕ್ಷೆಯಿದೆ. ಒಂದು ಹೆಕ್ಟೇರ್‌ನಲ್ಲಿ ರಬ್ಬರ್ ಸೇವಂತಿಗೆ ನಾಟಿ ಮಾಡಿದರೆ 10–15 ಟನ್ ಹೂ ಪಡೆಯಬಹುದು. ಪ್ರತಿ ಕೆ.ಜಿ ಹೂವಿಗೆ ಸರಾಸರಿ ₹80ರಿಂದ ₹100 ದರವಿದೆ. ಹಂಗಾಮಿನಲ್ಲಿ ಕೆ.ಜಿ.ಯೊಂದಕ್ಕೆ ₹200ವರೆಗೂ ಗಳಿಸಬಹುದು’ ಎಂದು ವಿದ್ಯಾರ್ಥಿನಿ ಸೌಮ್ಯಾ ಹೇಳಿದರು.

‘ಹಸಿರು ಮನೆಯಲ್ಲಿ ಬೆಳೆಸಿದರೆ ಹುಳುಗಳು ದಾಳಿಯಿಡುವ ಸಂದರ್ಭವಿರುತ್ತದೆ. ಶೇಡ್‌ನೆಟ್ ಅಡಿಯಲ್ಲಿ ಹಾಗೂ ತೆರೆದ ಗದ್ದೆಗಳಲ್ಲಿ ಬೆಳೆಸುವ ಪ್ರಯೋಗ ಮಾಡುತ್ತಿದ್ದೇವೆ. ಮಳೆಗಾಲದಲ್ಲಿ ಕೊಳೆರೋಗ ಬಾಧಿಸುವುದರಿಂದ ಆಗಸ್ಟ್ ನಂತರ ಗದ್ದೆಗಳಲ್ಲಿ ನಾಟಿ ಮಾಡುವುದು ಉತ್ತಮ’ ಎಂಬುದು ಪ್ರೊ. ಹರ್ಷವರ್ಧನ್ ನೀಡುವ ಸಲಹೆ.

‘ಹನಿ ನೀರಾವರಿ ವ್ಯವಸ್ಥೆಯಿಂದ ಶೇ 60ರಷ್ಟು ನೀರು ಉಳಿತಾಯ ಮಾಡಬಹುದು. ಸೇವಂತಿಗೆಯಲ್ಲಿ ರೈತರು ಲಾಭದಾಯಕ ಕೃಷಿ ಮಾಡಬಹುದು. ಗೋಳಿಯಲ್ಲಿ ನಡೆಸುವ ಕ್ಷೇತ್ರ ಭೇಟಿ ಸಂದರ್ಭದಲ್ಲಿ ನಾವು ರೈತರಿಗೆ ಇದನ್ನು ತಿಳಿಸುತ್ತೇವೆ’ ಎಂದು ವಿದ್ಯಾರ್ಥಿಗಳಾದ ಶಿವದತ್ತ, ಶಿಲ್ಪಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.