ADVERTISEMENT

ಹೂವಿನಲ್ಲಿ ಅರಳುವ ಬದುಕು

ಸಂಧ್ಯಾ ಹೆಗಡೆ
Published 23 ಜೂನ್ 2013, 5:37 IST
Last Updated 23 ಜೂನ್ 2013, 5:37 IST

ಸೂರ್ಯನ ರಶ್ಮಿಗೆ ಮುಖವೊಡ್ಡಿ ಮೈದಳೆಯುವ ಹತ್ತಾರು ಬಗೆಯ ಹೂಗಳು ರಸ್ತೆಯಲ್ಲಿ ಹಾದು ಹೋಗುವ ಜನರನ್ನು ಕೈಬೀಸಿ ಕರೆಯುತ್ತವೆ. ಹೂಗಳೊಂದಿಗೆ ಅವುಗಳ ಮಾಲೀಕರ `ಆಯಿಯೇ ಭಯ್ಯಾ, ಆಯಿಯೇ ಬೆಹನ್..'ಎನ್ನುವ ಕರೆಗೆ ಕಾರು, ಜೀಪು, ಬೈಕ್‌ಗಳ ಮೇಲೆ ಹೋಗುವವರು ಒಮ್ಮೆ ನಿಂತು ಹೂವಿನ ಸೌಂದರ್ಯಕ್ಕೆ ಮನಸೋತು ಒಂದೆರಡು ಗಿಡ ಖರೀದಿಸಿ ಹೋಗುತ್ತಾರೆ.

ಇಲ್ಲಿನ ಮರಾಠಿಕೊಪ್ಪ ತಿರುವಿನ ಬಳಿ ಬಗೆ ಬಗೆಯ ಹೂವಿನ ಸಸಿಗಳನ್ನು ಮಾರಾಟಕ್ಕೆ ತಂದಿರುವ ಕಲ್ಕತ್ತಾದ ತಂಡವೊಂದು ಬೀಡುಬಿಟ್ಟಿದೆ. ಹೂ ಗಿಡಗಳ ವ್ಯಾಪಾರವೇ ನಿತ್ಯದ ಕಾಯಕವಾಗಿರುವ ಇವರ ಬದುಕು ಅರಳುವುದು ಹೂವಿನಲ್ಲೇ. ಗುಲಾಬಿ, ಸೇವಂತಿ, ದಾಸವಾಳ, ಮಲ್ಲಿಗೆ, ಕಾರ್ನೇಶನ್, ಸಂಪಿಗೆ, ಅಲಂಕಾರಿಕ ಗಿಡಗಳು ಸೇರಿದಂತೆ 40ಕ್ಕೂ ಹೆಚ್ಚು ವಿಧದ ಸಸಿಗಳು ರಸ್ತೆಯ ಬದಿಯ ಜಾಗವನ್ನು ಶೃಂಗರಿಸಿವೆ. ಹಳದಿ, ಕೆಂಪು, ಅಚ್ಚಕೆಂಪು, ಗುಲಾಬಿ, ತಿಳಿ ಗುಲಾಬಿ, ಶುಭ್ರ ಬಿಳಿ ವರ್ಣದ ಹೂ ಅರಳಿಸಿರುವ ದಾಸವಾಳ, ಗುಲಾಬಿ ಗಿಡಗಳಿಗೆ ಮನಸೋತು ಮಹಿಳೆಯರು ಅಷ್ಟಿಷ್ಟು ಚೌಕಾಸಿ ಮಾಡಿ ಗಾಡಿ ತುಂಬ ಗಿಡ ತುಂಬಿಕೊಂಡು ಹೋಗುತ್ತಾರೆ. ಗುಲಾಬಿ, ದಾಸವಾಳ, ಹೂವಿನಡಿ ಎಲೆ ಅಡಗಿಸಿಕೊಳ್ಳುವ ಕಾರ್ನೇಶನ್ ಅತಿ ಹೆಚ್ಚು ಬೇಡಿಕೆಯ ಗಿಡಗಳು.

ಬೆಳಿಗ್ಗೆಯಿಂದ ಹೂ ಗಿಡಗಳ ವ್ಯಾಪಾರ ಮಾಡುವ ಕಲ್ಕತ್ತಾದ ಕಾಂತು ಪಾಲ್, ಸಂತು ಪಾಲ್, ಅಪೂರ್ಬೋ ಸಂಜೆ ಕತ್ತಲಾವರಿಸುವ ಹೊತ್ತಿಗೆ ಗಿಡಗಳ ಸುತ್ತ ಪ್ಲಾಸ್ಟಿಕ್ ಹೊದಿಕೆಯ ರಕ್ಷಣಾ ಬೇಲಿ ಕಟ್ಟುತ್ತಾರೆ. ದೂರದಲ್ಲಿರುವ ಬೀದಿದೀಪದ ಮಬ್ಬು ಛಾಯೆಯ ಜೊತೆ ಮೊಂಬತ್ತಿ ಹೊತ್ತಿಸಿಕೊಂಡು ರಸ್ತೆ ಬದಿ ಶೆಡ್‌ನಲ್ಲಿ ಅಡುಗೆ ಮಾಡಿ ಊಟ ಮಾಡಿ, ರಾತ್ರಿ ಗಿಡಗಳ ಕಾವಲು ಕಾಯುತ್ತಾರೆ. ವರ್ಷಪೂರ್ತಿ ಅವರದು ಇದೇ ರೀತಿಯ ಜೀವನ. ಶಿರಸಿ, ಸಾಗರ, ಬೆಳಗಾವಿ ಹೀಗೆ ಊರೂರು ಸುತ್ತುತ್ತ ರಸ್ತೆ ಬದಿ ಹೂವಿನ ಗಿಡ ರಾಶಿ ಹಾಕಿಕೊಂಡು ವ್ಯಾಪಾರ ಮಾಡುತ್ತಾರೆ, ಗಿಡ ಖಾಲಿಯಾದರೆ ಪೂನಾಕ್ಕೆ ಹೋಗಿ ಮತ್ತೆ ಗಿಡ ಸಂಗ್ರಹಿಸಿ ತರುತ್ತಾರೆ. ಇವರಿಗೆ ಕನ್ನಡದ ಮಾತು ಗೊತ್ತಾಗುವುದಿಲ್ಲ, ಖರೀದಿಸುವ ಇಲ್ಲಿನ ಹೆಂಗಸರಿಗೆ ಹಿಂದಿ ಬರುವುದಿಲ್ಲ. ಆದರೂ ಅಂತಿಮವಾಗಿ ದರ ಹೊಂದಾಣಿಕೆಯಲ್ಲಿ ಗಿಡಗಳ ಖರೀದಿ ನಡೆಯುತ್ತದೆ.

`ಶಿರಸಿಯಲ್ಲಿ ಒಳ್ಳೆಯ ಮಾರುಕಟ್ಟೆಯ ಇದೆ. ಬಹಳಷ್ಟು ಜನ ಹೂವಿನ ಗಿಡಗಳನ್ನು ಒಯ್ಯುತ್ತಾರೆ. ದಿನಕ್ಕೆ 100ರಷ್ಟು ಗಿಡಗಳು ಮಾರಾಟವಾಗುತ್ತವೆ' ಎನ್ನುತ್ತಾರೆ ಕಾಂತು ಪಾಲ್.

`ನಮ್ಮ ಬಳಿ 40ರಿಂದ 300ರೂಪಾಯಿ ವರೆಗಿನ ಗಿಡಗಳೂ ಇವೆ. ಒಮ್ಮೆಗೆ 1500ರಷ್ಟು ಗಿಡಗಳನ್ನು ತರುತ್ತೇವೆ. ಮಳೆಗಾಲದ ಹೊತ್ತಿಗೆ ವ್ಯಾಪಾರಕ್ಕೆ ಬಂದರೆ ಗಿಡ ಖರೀದಿಸುವವರು ಹೆಚ್ಚು. ಆದರೆ ಇಲ್ಲಿನ ಮಳೆಗಾಲ ಅಂದರೆ ತುಸು ಭಯ. ಒಂದೇ ಸಮನೆ ಮಳೆ ಸುರಿಯಹತ್ತಿದರೆ ಗಿಡಗಳು ಹಾಳಾಗಿ ಹೋಗುತ್ತವೆ. ಅದರ ನಷ್ಟವನ್ನೂ ಭರಿಸಿಕೊಳ್ಳಬೇಕು. ತುತ್ತಿನ ಚೀಲಕ್ಕಾಗಿ ಅಷ್ಟಿಷ್ಟು ಲಾಭಗಳಿಸಿ ಹೂವಿನ ಸಾಂಗತ್ಯದಲ್ಲಿ ಖುಷಿ ಕಾಣುತ್ತೇವೆ.

ಖರೀದಿಸಿದವರ ಮನೆ ಅಂಗಳದಲ್ಲಿ ಹೂಗಳು ನಗುತ್ತಿದ್ದರೆ ಅದೇ ನಮಗೆ ಸಂತಸ' ಎಂದು ಅವರು ಹೇಳುವಾಗ ಬದುಕಿನ ನೋವನ್ನು ಮರೆತು ಹೂವಿನ ಜೊತೆ ಅರಳುವವರು ಇವರು ಅನ್ನಿಸಿದ್ದು ಸುಳ್ಳಲ್ಲ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.