ADVERTISEMENT

ಹೆದ್ದಾರಿಗೆ ಐದು ವರ್ಷಗಳಲ್ಲಿ 454 ಬಲಿ!

ರಾಷ್ಟ್ರೀಯ ಹೆದ್ದಾರಿ 66: ಜಿಲ್ಲೆಯ 130 ಕಿ.ಮೀ ವ್ಯಾಪ್ತಿಯಲ್ಲಿ ಪದೇಪದೇ ನಡೆಯುವ ಅಪಘಾತ

ಸದಾಶಿವ ಎಂ.ಎಸ್‌.
Published 27 ಮೇ 2018, 13:24 IST
Last Updated 27 ಮೇ 2018, 13:24 IST
ಹೆದ್ದಾರಿಗೆ ಐದು ವರ್ಷಗಳಲ್ಲಿ 454 ಬಲಿ!
ಹೆದ್ದಾರಿಗೆ ಐದು ವರ್ಷಗಳಲ್ಲಿ 454 ಬಲಿ!   

ಕಾರವಾರ: ಜಿಲ್ಲಾ ಕೇಂದ್ರದಿಂದ ಭಟ್ಕಳದವರೆಗೆ ಸಾಗುವ ರಾಷ್ಟ್ರೀಯ ಹೆದ್ದಾರಿ 66 ವಾಹನ ಚಾಲನೆಗೆ ಸವಾಲಾಗಿ ಪರಿಣಮಿಸಿದೆ. ಈ ವರ್ಷ ಜನವರಿಯಿಂದ ಏಪ್ರಿಲ್‌ವರೆಗೆ ಒಟ್ಟು 118 ಅಪಘಾತಗಳಾಗಿದ್ದು, 38 ಮಂದಿ ಮೃತಪಟ್ಟಿದ್ದಾರೆ. ಹೆದ್ದಾರಿಯ 130 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು ಐದೂವರೆ ವರ್ಷಗಳ ಅವಧಿಯಲ್ಲಿ ಮೃತಪಟ್ಟವರ ಸಂಖ್ಯೆ ಬರೋಬ್ಬರಿ 454!

ಚತುಷ್ಪಥ ಹೆದ್ದಾರಿ ಕಾಮಗಾರಿಯೇ ಇದಕ್ಕೆ ಮುಖ್ಯ ಕಾರಣ ಎನ್ನುವುದು ಹಲವರ ಆರೋಪ. ‘ಈ ಹೆದ್ದಾರಿಯ ಹಲವು ಕಡೆಗಳಲ್ಲಿ ಕಡಿದಾದ ತಿರುವುಗಳಿವೆ. ಇದರ ಅರಿವಿಲ್ಲದ ಚಾಲಕರು ವಾಹನದ ಮೇಲೆ ನಿಯಂತ್ರಣ ಸಿಗದೇ ಅಪಘಾತಕ್ಕೀಡು ಮಾಡುತ್ತಿದ್ದಾರೆ. ಹೆದ್ದಾರಿಯ ಎಷ್ಟೋ ಕಡೆಗಳಲ್ಲಿ ಸೂಚನಾ ಫಲಕಗಳಿಲ್ಲ. ಇದೂ ಕೂಡ ಅಪಘಾತಗಳ ಸಂಖ್ಯೆ ಹೆಚ್ಚಲು ಕಾರಣ. ಒಂದು ರೀತಿಯಲ್ಲಿ ಇದು ಸಾವಿನ ಹೆದ್ದಾರಿಯಂತಾಗಿದೆ’ ಎನ್ನುತ್ತಾರೆ ವಾಹನ ಚಾಲಕ ರಾಮಚಂದ್ರ.

ಸಂಚಾರ ನಿಯಮ ಪಾಲಿಸಿ: ‘ಹಲವು ಅಪಘಾತಗಳು ವಾಹನ ಚಾಲಕರ ಬೇಜವಾಬ್ದಾರಿಯಿಂದಲೇ ಆಗುತ್ತವೆ. ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿರುವುದು, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಮೊಬೈಲ್ ಬಳಕೆ ಮಾಡುವುದು ಮುಂತಾದ ಕಾರಣಗಳಿಂದ ಅವಘಡಗಳಾಗುತ್ತವೆ. ಸಂಚಾರ ನಿಯಮದ ಕಟ್ಟುನಿಟ್ಟಿನ ಪಾಲನೆಯಿಂದ ಮಾತ್ರ ಸಾವು–ನೋವು ಕಡಿಮೆಯಾಗಲು ಸಾಧ್ಯ’ ಎನ್ನುತ್ತಾರೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ.

ADVERTISEMENT

‘ಬಾಲಕರಿಗೆ ವಾಹನ ಚಲಾಯಿಸಲು ಕೊಡುವುದು, ದ್ವಿಚಕ್ರ ವಾಹನಗಳಲ್ಲಿ ಮೂವರು ಪ್ರಯಾಣಿಸುವುದು, ತಿರುವುಗಳಲ್ಲಿ ಓವರ್‌ಟೇಕ್‌ ಮಾಡುವುದರಿಂದ ಅಪಾಯವಾಗಬಹುದು. ರಸ್ತೆ ದುರಸ್ತಿಯೂ ಸೇರಿದಂತೆ ವಿವಿಧ ಕಾರಣಗಳಿಗಾಗಿ ಅಳವಡಿಸಿರುವ ಸೂಚನಾ ಫಲಕಗಳನ್ನು ಗಮನಿಸಿಕೊಂಡು ಜಾಗರೂಕರಾಗಿ ವಾಹನ ಚಲಾಯಿಸಬೇಕು. ಮಳೆಗಾಲದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

ದಾಖಲಾಗದ ಅಪಘಾತ ಎಷ್ಟೊ!

ಈ ವರ್ಷದ ಮೊದಲ ನಾಲ್ಕು ತಿಂಗಳ ಅವಧಿಯಲ್ಲಿ ಹೆದ್ದಾರಿಯ ವಿವಿಧೆಡೆ ನಡೆದ ಅಪಘಾತಗಳಲ್ಲಿ 31 ಮಂದಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. 87 ಜನರಿಗೆ ಗಂಭೀರವಲ್ಲದ ಹಾಗೂ 220 ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

‘ಸಣ್ಣಪುಟ್ಟ ಅಪಘಾತಗಳಾಗಿದ್ದು, ಪೊಲೀಸ್ ಠಾಣೆಗೆ ದೂರು ನೀಡದೇ ಹೋದ ಪ್ರಕರಣಗಳೂ ಸಾಕಷ್ಟಿವೆ. ಅಪಘಾತಗಳ ಸಂಖ್ಯೆ ಗಣನೀಯವಾಗಿ ಕಡಿಮೆ ಮಾಡಲು ಪೊಲೀಸ್ ಮತ್ತು ಸಾರ್ವಜನಿಕರ ಸಹಭಾಗಿತ್ವ ಅಗತ್ಯ’ ಎನ್ನುತ್ತಾರೆ ವಾಹನ ಚಾಲಕ ರಾಮಚಂದ್ರ.

**
ದೂರದೂರುಗಳಿಗೆ ಸಾಗುವ ಟ್ಯಾಂಕರ್‌, ಟ್ರಕ್‌, ಬಸ್‌ ಮುಂತಾದ ಭಾರಿ ವಾಹನಗಳಿಗೆ ಇಬ್ಬರು ಚಾಲಕರು ಇರುವುದು ಕಡ್ಡಾಯ. ನಿಯಮ ಪಾಲಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು
ಡಾ. ಗೋಪಾಲ ಬ್ಯಾಕೋಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.