ADVERTISEMENT

ಹೋಳಿ ಹಬ್ಬದಲ್ಲಿ ಮಕ್ಕಳ ಕೋಲಾಟ..

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 9:39 IST
Last Updated 17 ಮಾರ್ಚ್ 2014, 9:39 IST

ಕುಮಟಾ: ಅವಸರದ ಜೀವನದ ನಡುವೆ  ಮರೆಯಾಗುತ್ತಿರುವ ಕಲೆ, ಹಬ್ಬಗಳನ್ನು  ವಿದ್ಯಾರ್ಥಿಗಳ ಮೂಲಕ ಜೀವಂತವಾಗಿಡುವ ಪ್ರಯತ್ನ ತಾಲ್ಲೂಕಿನ ತೀರಾ ಗ್ರಾಮೀಣ ಪ್ರದೇಶವಾದ ಬೊಗರಿಬೈಲ ಶಾಲೆಯ ಶಿಕ್ಷಕರ ನೇತೃತ್ವದಲ್ಲಿ ನಡೆಯುತ್ತಿರುವುದು ವಿಶೆಷವಾಗಿದೆ.

ಹೋಳಿ ಹಬ್ಬದಂದು ಗ್ರಾಮದಲ್ಲಿ ಯವಕರು, ಹಿರಿಯರು ಒಂದೆಡೆ ಸೇರಿ ಮುಖಕ್ಕೆ ಬಣ್ಣ ಬಳಿದುಕೊಂಡು ಕಾಮದೇವರ ಮನೆಯಲ್ಲಿ ಕೋಲಾಟ ಆಡುತ್ತಾರೆ. ಕಾಮ ದಹನ ಮಾಡಿ ನದಿಯಲ್ಲಿ ಸ್ನಾನ ಮುಗಿಸಿ ಪೂಜೆ ನೆರವೇರಿಸುತ್ತಾರೆ. ವರ್ಷದಲ್ಲಿ  ಹೋಳಿ ಹಬ್ಬದ ದಿನ ಮಾತ್ರ  ಹಾಡು ಹಾಡುತ್ತಾ ಕೋಲಾಟ ಆಡುವಾಗ ಹಾಡು, ಕೋಲಾಟದ ಹೆಜ್ಜೆ ತಪ್ಪಿಹೋಗಿ ಅಭಾಸವಾಗುತ್ತಿತ್ತು.

ಯುವಕರು ಕೋಲಾಟದ ಕಲೆಯನ್ನು ಕಲಿಯುವಲ್ಲಿ ಆಸಕ್ತಿ ತೋರದ ಬಗ್ಗೆ ಹಿರಿಯರು ಆಕ್ಷೇಪಿಸುತ್ತಿದ್ದರು. ಇದನ್ನು ಅರಿತ ಊರಿನ ಶಾಲೆಯ ಶಿಕ್ಷಕ ಪುರಂದರ ನಾಯ್ಕ ಅವರು ಹಲವು ವರ್ಷಗಳಿಂದ ಹೋಳಿ ಹಬ್ಬಕ್ಕಿಂತ ವಾರ ಮೊದಲೇ ಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಕೋಲಾಟ, ಅದಕ್ಕೆ ತಕ್ಕ ಹಾಡು ಕಲಿಸಿ ಅವರನ್ನು ತರಬೇತುಗೊಳಿಸುತ್ತಿದ್ದಾರೆ.

ಹೋಳಿ ಹಬ್ಬದ ದಿನ ಮಕ್ಕಳು ಸಂಭ್ರಮದಿಂದ ಶಿಕ್ಷಕರ ಮಾರ್ಗದರ್ಶನದಲ್ಲಿ ಮುಖಕ್ಕೆ ಬಣ್ಣ ಹಚ್ಚಿಕೊಂಡು, ಸೊಂಟಕ್ಕೆ ಬಣ್ಣದ ಬಟ್ಟೆ ಬಿಗಿದು ಕೈಯಲ್ಲಿ ಕೋಲು ಹಿಡಿದ ಮನೆ ಮನೆಗೆ ಹೋಗಿ ಹಾಡು ಹೇಳುತ್ತಾ ಆಕರ್ಷಕ ಕೋಲಾಟ ಪ್ರದರ್ಶಿಸುತ್ತಾರೆ.  ಹಿಂದೆಲ್ಲ ಶಿಕ್ಷಕರಿಂದ ತರಬೇತಿ ಪಡೆದ ಹಿರಿಯ ವಿದ್ಯಾರ್ಥಿಗಳು ಈಗ ಕಾಮ ದೇವರ ಮನೆಯಲ್ಲಿ ಹಿರಿಯರೊಟ್ಟಿಗೆ ಕೋಲಾಟ ಆಡುವಷ್ಟು ಪರಿಣಿತಿ ಪಡೆದಿದ್ದಾರೆ. 

ಶಿಕ್ಷಕರ ಪ್ರಯತ್ನದಿಂದಾಗಿ ‘ನವುಲಾ ಬಂತು ನವುಲಾ ನಮ್ಮ ಸೋಗೆ ಬಣ್ಣದ ನವುಲಾ...,’ ‘ ಕಾರಿಯ ಕೋಲ ನಾವು ಕಡೆದವಲ್ಲೋ ಜಾಣ...’, ‘ ಸತ್ತೂಗಿ ನೆರಳಲ್ಲಿ ಸುತ್ತಲಾರೆ ದಮ್ಮಯ್ಯ...’ ಮುಂತಾದ ಕೋಲಾಟದ ಅರ್ಥಪೂರ್ಣ ಹಾಡುಗಳು ಮಕ್ಕಳ ಬಾಯಲ್ಲಿ ಜೀವಂತವಾಗಿರುವುದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.