ADVERTISEMENT

‘ಅ. 2ರಿಂದ 9ರವರೆಗೆ ಸ್ವಚ್ಛತಾ ಸಪ್ತಾಹ’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 11:21 IST
Last Updated 26 ಸೆಪ್ಟೆಂಬರ್ 2013, 11:21 IST

ಕಾರವಾರ: ‘ಜಿಲ್ಲೆಯಾದ್ಯಂತ ಗಾಂಧಿ ಜಯಂತಿ ದಿನವಾದ ಅಕ್ಟೋಬರ್ 2 ರಿಂದ 9ರವರೆಗೆ ಸ್ವಚ್ಛತಾ ಸಪ್ತಾಹವನ್ನು ಆಚರಿಸಲಾಗುವುದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ. ದೇಶಪಾಂಡೆ ತಿಳಿಸಿದರು.

ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ದರು. ‘ಗ್ರಾಮ ಪಂಚಾಯ್ತಿ ಮಟ್ಟದಿಂದ ಹಿಡಿದು ಪಟ್ಟಣಗಳವರೆಗೆ ಸಂಪೂರ್ಣ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಲಾಗುವುದು. ಇದು ಕೇವಲ ಸರ್ಕಾರಿ ಕಾರ್ಯಕ್ರಮವಾಗದೇ ಜನರ ಕಾರ್ಯಕ್ರಮವಾಗಬೇಕು. ಈ ಅವಧಿಯಲ್ಲಿ ಎಲ್ಲ ಸಾರ್ವಜನಿಕ ಶೌಚಾಲಯಗಳು, ರಸ್ತೆಗಳು, ಸರ್ಕಾರಿ ಕಟ್ಟಡಗಳನ್ನು ಸ್ವಚ್ಛವಾಗಿಡಬೇಕು. ಸರ್ಕಾರಿ ಕಟ್ಟಡಗಳಿಗೆ ಕನಿಷ್ಠ ಸುಣ್ಣ ಬಣ್ಣಗಳನ್ನು ಬಳಿಯಬೇಕು’ ಎಂದು ಹೇಳಿದರು.

‘ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ ಕಲ್ಪನೆಗೆ ಪೂರಕವಾಗಿ ಸ್ವಚ್ಛತಾ ಸಪ್ತಾಹ ಆಚರಿಸಲಾಗುತ್ತಿದೆ. ಈ ಸಪ್ತಾಹದ ಮೇಲುಸ್ತುವಾರಿಗೆ ಪ್ರತಿಯೊಂದು ಗ್ರಾಮಮಟ್ಟದಲ್ಲಿ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಕ ಮಾಡಬೇಕು. ಪಟ್ಟಣಗಳಲ್ಲಿ ಮೂವರು ಅಧಿಕಾರಿಗಳು ಇದರ ಮೇಲುಸ್ತುವಾರಿ ನೋಡಿಕೊಳ್ಳಬೇಕು ಎಂದರು.

ಲಯನ್ಸ್, ರೋಟರಿ ಸೇರಿದಂತೆ ಎಲ್ಲ ಸರ್ಕಾರೇತರ ಸಂಘ, ಸಂಸ್ಥೆಗಳು, ಶಾಲಾ– ಕಾಲೇಜುಗಳು ಸಹ ಈ ಕಾರ್ಯದಲ್ಲಿ ಕೈಜೋಡಿಸಿ ಸಪ್ತಾಹವನ್ನು ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಅ. 21ರಿಂದ ಕಡತ ವಿಲೇವಾರಿ ಸಪ್ತಾಹ: ‘ಅಕ್ಟೋಬರ್ 21ರಿಂದ 26ರವರೆಗೆ ಕಡತ ವಿಲೇವಾರಿ ಸಪ್ತಾಹವನ್ನು ಆಚರಿಸಲು ನಿರ್ಧರಿಸ ಲಾಗಿದೆ. ಇದರ ಪೂರ್ವಭಾವಿಯಾಗಿ ಅಕ್ಟೋಬರ್ 10ರ ಒಳಗಾಗಿ ಎಲ್ಲ ಇಲಾಖೆಗಳಲ್ಲಿ ಬಾಕಿಯಿರುವ ಕಡತಗಳ ವಿವರಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ಸಕಾಲ ಯೋಜನೆ ಅಡಿ ಬಹುತೇಕ ಕಡತಗಳು ನಿಗದಿತ ಸಮಯದ ಒಳಗಾಗಿ  ವಿಲೇವಾರಿ ಮಾಡಲಾಗುತ್ತಿದೆ. ಇನ್ನುಳಿದ ಕಡತಗಳನ್ನು ಪಾರದರ್ಶಕ ರೀತಿಯಲ್ಲಿ, ಯಾರಿಗೂ ಅನ್ಯಾಯವಾಗದಂತೆ ತ್ವರಿತವಾಗಿ ವಿಲೇವಾರಿ ಮಾಡಲು ಸೂಚಿಸಲಾಗಿದೆ’ ಎಂದು ಹೇಳಿದರು.

‘ನವೆಂಬರ್‌ನಲ್ಲಿ ಕರಾವಳಿ ಉತ್ಸವ’
ಕಾರವಾರ:
‘ನವೆಂಬರ್ ತಿಂಗಳಲ್ಲಿ ಕರಾವಳಿ ಉತ್ಸವವನ್ನು ಅರ್ಥಪೂರ್ಣವಾಗಿ ಈ ಹಿಂದಿನಂತೆಯೇ ಆಚರಿಸಲಾಗುವುದು. ಇದಕ್ಕಾಗಿ ಪೂರ್ವಸಿದ್ಧತೆಗಳನ್ನು ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ. ದೇಶಪಾಂಡೆ ತಿಳಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಸಂಬಂಧ ಅಕ್ಟೋಬರ್‌ 1ರಂದು ಪೂರ್ವಭಾವಿ ಸಭೆ ಕರೆದು ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗುವುದು. ಅದೇ ರೀತಿ ಕದಂಬೋತ್ಸವವನ್ನು ಸಹ ಸರ್ಕಾರದ ನೆರವಿನೊಂದಿಗೆ ಆಚರಿಸಲಾಗುವುದು’ ಎಂದು ಹೇಳಿದರು.
ಉತ್ಸವದಲ್ಲಿ ಸ್ಥಳೀಯ ಕಲಾವಿದರಿಗೆ ಮೊದಲ ಆದ್ಯತೆ ನೀಡಲಾಗುವುದು. ಸ್ಥಳೀಯ ಕಲಾವಿದರ ಜೊತೆಗೆ ಬೇರೆ ಜಿಲ್ಲೆ ಕಲಾವಿದರಿಗೂ ಅವಕಾಶ ಮಾಡಿಕೊಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT