ADVERTISEMENT

‘ಎಂಡೋಸಲ್ಫಾನ್ ಪೀಡಿತರ ಸಮೀಕ್ಷೆ’

​ಪ್ರಜಾವಾಣಿ ವಾರ್ತೆ
Published 7 ಜನವರಿ 2014, 8:13 IST
Last Updated 7 ಜನವರಿ 2014, 8:13 IST

ಸಿದ್ದಾಪುರ: ‘ಎಂಡೋಸಲ್ಫಾನ್ ಪೀಡಿತರ ಬಗ್ಗೆ ತಾಲ್ಲೂಕಿನಲ್ಲಿ ಸಮೀಕ್ಷೆ ನಡೆಸಲಾಗುತ್ತಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲಕ್ಷ್ಮೀಕಾಂತ ನಾಯ್ಕ ತಿಳಿಸಿದರು.

ಸ್ಥಳೀಯ ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತಾಲ್ಲೂಕು ಪಂಚಾಯ್ತಿ ಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಅವರು ಮಾತನಾಡಿದರು.

‘ಈ ಸಮೀಕ್ಷೆ  ಹೈಕೋರ್ಟ್‌ ನಿರ್ದೇಶನದ ಪ್ರಕಾರ ನಡೆಯುತ್ತಿದೆ. ಈ ಸಮೀಕ್ಷೆಯ ವರದಿ ಹೈಕೋರ್ಟ್‌ಗೆ ಸಲ್ಲಿಕೆಯಾಗುತ್ತದೆ. ಎಂಡೋಸಲ್ಫಾನ್ ದುಷ್ಪರಿಣಾಮದ ಬಗ್ಗೆ ಸಮೀಕ್ಷೆ ಮಾಡುವುದರೊಂದಿಗೆ ಇದರಿಂದ ಪೀಡಿತರಾದವರಿಗೆ ಸೇವೆ  ಕೂಡ ನೀಡಲು ಸೂಚನೆ ನೀಡಲಾಗಿದೆ. ಎಂಡೋಸಲ್ಫಾನ್ ಪ್ರಮಾಣ ವ್ಯಕ್ತಿಯೊಬ್ಬನ ರಕ್ತದಲ್ಲಿ ಎಷ್ಟಿದೆ ಎಂಬ ಅಂಶವನ್ನು ಪರಿಶೀಲಿಸಲಾಗುತ್ತದೆ’  ಎಂದರು.

‘ವಾಜಪೇಯಿ ಆರೋಗ್ಯ ಶ್ರೀ ಕಾರ್ಯಕ್ರಮ ಈ ಹಿಂದೆ ಪ್ರತಿ ತಿಂಗಳೂ ಇಲ್ಲಿಯೇ ನಡೆಯುತ್ತಿತ್ತು. ಆದರೆ ಈಗ ವಿಭಾಗೀಯ ಮಟ್ಟದಲ್ಲಿ ನಡೆಯುತ್ತಿದ್ದು, ತಾಲ್ಲೂಕು ಮಟ್ಟದಲ್ಲಿ ನಾಲ್ಕೈದು ತಿಂಗಳಿಗೊಮ್ಮೆ ನಡೆಯುತ್ತಿದೆ. ಪ್ರಸ್ತುತ  ಬಡತನ ರೇಖೆಗಿಂತ ಕೆಳಗಿರುವವರಿಗೆ(ಬಿಪಿಎಲ್‌ ಚೀಟಿ ಹೊಂದಿರುವವರು) ಈ ಯೋಜನೆಯಡಿ ಸೌಲಭ್ಯ  ದೊರೆಯುತ್ತಿದೆ. ಇದನ್ನು ಬಡತನರೇಖೆಗಿಂತ ಮೇಲಿರುವವರಿಗೂ(ಎಪಿಎಲ್‌ ಚೀಟಿ ಹೊಂದಿರುವವರು) ವಿಸ್ತರಣೆ ಮಾಡಲಾಗುತ್ತಿದೆ’ ಎಂದರು.

ಕೊಳೆ ರೋಗದ ಪರಿಹಾರ: ಅಡಿಕೆಯ ಕೊಳೆ ರೋಗದ ಪರಿಹಾರ ಬಯಸಿ ಅರ್ಜಿ ನೀಡಿದವರೆಲ್ಲರಿಗೂ ಈ ಪರಿಹಾರ ದೊರೆಯಬೇಕು. ತಾಲ್ಲೂಕಿನ ಸೋವಿನಕೊಪ್ಪ ಗ್ರಾಮ ಪಂಚಾಯ್ತಿಯಲ್ಲಿ  ರೈತರು ನೀಡಿದ ಕೆಲವು ಅರ್ಜಿಗಳು  ಇಲ್ಲವಾಗಿವೆ. ಇವರಿಗೂ ಪರಿಹಾರ ನೀಡಬೇಕು ಎಂದು ತಾಲ್ಲೂಕು ಪಂಚಾಯ್ತಿ ಸದಸ್ಯ ಪ್ರಸನ್ನ ಹೆಗಡೆ  ಆಗ್ರಹಿಸಿದರು.

ಇದಕ್ಕೆ ಉತ್ತರ ನೀಡಿದ ಕಂದಾಯ ಇಲಾಖೆಯ ಅಧಿಕಾರಿ, ‘ತಾಲ್ಲೂಕಿನಲ್ಲಿ ಕೊಳೆ ರೋಗದ ಪರಿಹಾರಕ್ಕೆ ₨2.54 ಕೋಟಿ ಅನುದಾನ ಬಂದಿದೆ.  ಇದುವರೆಗೆ  ಒಟ್ಟು 6459 ಕುಟುಂಬಗಳಿಗೆ ಪರಿಹಾರ ಮಂಜೂರಿಯಾಗಿದ್ದು, ಗ್ರಾಮ ಲೆಕ್ಕಾಧಿಕಾರಿಗಳಿಗೆ ವಿತರಣೆಗೆ ಕಳುಹಿಸಲಾಗಿದೆ’ ಎಂದರು.

ಕೊಳೆ ರೋಗದ ಪರಿಹಾರ ಬೇಡಿ ಅರ್ಜಿ ನೀಡಿದವರೆಲ್ಲರಿಗೂ ಪರಿಹಾರ ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಭಟ್‌ ಸೂಚನೆ ನೀಡಿದರು.

ನಿಷೇಧ ಕೈಬಿಡಿ: ಕೇಂದ್ರ ಸರ್ಕಾರ ಅಡಿಕೆ ನಿಷೇಧದ ಪ್ರಸ್ತಾವವನ್ನು ಕೈಬಿಡಬೇಕು ಎಂದು ಸಭೆ ಆಗ್ರಹಿಸಿತಲ್ಲದೆ, ಈ ಬಗ್ಗೆ ನಿರ್ಣಯ ಕೈಗೊಂಡಿತು.

ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಮಾದೇವಿ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ನೀಲಕಂಠ ಗೌಡರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಶೀರ್ ಸಾಬ್, ಕಾರ್ಯನಿರ್ವಹಣಾಧಿಕಾರಿ ಶ್ರೀಧರ ಭಟ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.