
ಶಿರಸಿ: ‘ಕಾಂಗ್ರೆಸ್ ಪಕ್ಷದ ಕುತಂತ್ರದಿಂದ ಭಾರತದಲ್ಲಿ ಮುಸ್ಲಿಮರು ದಲಿತರಿಗಿಂತ ಕೆಳಮಟ್ಟದಲ್ಲಿ ಬದುಕು ನಡೆಸುತ್ತಿದ್ದಾರೆ. ವೋಟ್ ಬ್ಯಾಂಕ್ ಆಗಿ ಬಳಸಿಕೊಂಡ ಮುಸ್ಲಿಮರನ್ನು ಕಾಂಗ್ರೆಸ್ ತನ್ನ ಮುಷ್ಟಿಯಲ್ಲಿಟ್ಟು ಕೊಂಡಿದೆ’ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ನಾಯಿದಾ ಶೇಖ್ ಆರೋಪಿಸಿದರು.
ಮಂಗಳವಾರ ಇಲ್ಲಿ ಆಯೋಜಿಸಿದ್ದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು. ‘ದೇಶಕ್ಕೆ ಸ್ವಾತಂತ್ರ್ಯ ದೊರೆತು ಆರು ದಶಕ ಕಳೆದರೂ ಮುಸ್ಲಿಮರ ಆರ್ಥಿಕ, ಶೈಕ್ಷಣಿಕ ಸ್ಥಿತಿ ಬದಲಾಗಿಲ್ಲ. ಕಾಂಗ್ರೆಸ್ ಪಕ್ಷ ಮುಸ್ಲಿಮರು ಆರ್ಥಿಕವಾಗಿ ಮೇಲೇಳದಂತೆ ವ್ಯವಸ್ಥಿತ ತಂತ್ರ ರೂಪಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ಮುಸ್ಲಿಮ್ ಸಮುದಾಯವನ್ನು ತನ್ನ ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿದೆ’ ಎಂದರು.
‘ಮುಸ್ಲಿಮರು ಬಿಜೆಪಿಗೆ ಹೋದರೆ ಪ್ರಶ್ನಿಸುವ ಕಾಲವೊಂದಿತ್ತು. ಆದರೆ ಈಗ ಬದಲಾವಣೆಯ ಬೆಳಕು ಹರಿದಿದೆ. ಮುಸ್ಲಿಮರಿಗೆ ಕಾಂಗ್ರೆಸ್‌ನ ಒಡೆದು ಆಳುವ ನೀತಿಯ ಅರಿವಾಗಿದೆ. ಗೋಧ್ರಾ ಹತ್ಯಾಕಾಂಡ ಘಟನೆಯನ್ನು ಅತಿಯಾಗಿ ಬಿಂಬಿಸುವ ಮೂಲಕ ಕಾಂಗ್ರೆಸ್ ಪಕ್ಷ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಮುಸ್ಲಿಮರಲ್ಲಿ ಕೆಟ್ಟ ಅಭಿಪ್ರಾಯ ರೂಪಿಸುತ್ತಿದೆ. ಆದರೆ ವಾಸ್ತವಿಕವಾಗಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ 3500ಕ್ಕೂ ಹೆಚ್ಚು ದಂಗೆಗಳು ನಡೆದಿವೆ. ಕಾಂಗ್ರೆಸ್ ದಳ್ಳುರಿಯ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಯಾವುದೇ ಧರ್ಮ ದಂಗೆಯನ್ನು ಪ್ರಚೋದಿಸುವುದಿಲ್ಲ’ ಎಂದರು.
‘ದೇಶವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಒಯ್ಯುವ ಸಾಮರ್ಥ್ಯ ನರೇಂದ್ರ ಮೋದಿ ಅವರಿಗೆ ಮಾತ್ರ ಇದೆ’ ಎಂದರು.
ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎನ್.ಎಫ್. ಮೊಹ್ಸಿನ್ ಮಾತನಾಡಿ, ‘ಮುಜಾಫರ್ ನಗರದಲ್ಲಿ ಮತೀಯ ಗಲಭೆ ಏಳಲು ಮುಸ್ಲಿಮ್ ಯುವಕರು ಪಾಕಿಸ್ತಾನದ ಐಎಸ್‌ಐ ಏಜೆಂಟರ ಜೊತೆ ಸೇರಿರುವುದೇ ಕಾರಣ ಎಂದು ಕಾಂಗ್ರೆಸ್‌ನ ರಾಹುಲ್ ಗಾಂಧಿ ಹೇಳಿದ್ದು, ಈ ಪಕ್ಷಕ್ಕೆ ಮುಸ್ಲಿಮರ ಬಗ್ಗೆ ಇರುವ ಭಾವನೆ ತೋರಿಸುತ್ತದೆ’ ಎಂದರು.
‘ವಕ್ಫ್ ಮಂಡಳಿ ಆಸ್ತಿಯಲ್ಲಿ ನಡೆದಿರುವ ಅವ್ಯವಹಾರದ ವರದಿ ಸರ್ಕಾರದ ಕೈಯಲ್ಲಿದ್ದರೂ ಯಾಕೆ ಇನ್ನೂ ಕ್ರಮವಾಗಿಲ್ಲ. ವಕ್ಫ್ ಆಸ್ತಿಯೆಂದರೆ ಅಲ್ಲಾಹನ ಆಸ್ತಿಯಾಗಿದ್ದು, ಅಲ್ಲಾಹನ ಆಸ್ತಿಯಲ್ಲಿ ಕಾಂಗ್ರೆಸ್ ಅವ್ಯವಹಾರ ನಡೆಸಿದೆ’ ಎಂದು ಆರೋಪಿಸಿದರು.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಡೋನಿ ಡಿಸೋಜಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುಕ್ತಿಯಾರ್ ಪಠಾಣ್, ಶಿರಸಿ ನಗರ ಘಟಕದ ಅಧ್ಯಕ್ಷ ಗನಿ ಖಾನ್, ನಗರ ಪ್ರಧಾನ ಕಾರ್ಯದರ್ಶಿ ಅನಿಸ್ ಅಹಮ್ಮದ್ ಗೌಸ್, ಮಹಿಳಾ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷೆ ವೀಣಾ ಶೆಟ್ಟಿ, ನಗರ ಘಟಕದ ಅಧ್ಯಕ್ಷ ನಂದನ ಸಾಗರ್, ನಗರಸಭೆ ಸದಸ್ಯ ರವಿ ಚಂದಾವರ ಉಪಸ್ಥಿತರಿದ್ದರು. ರಫೀಕ್ ಪಠಾಣ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.