ADVERTISEMENT

‘ಕಾಡಿನ ಜ್ಞಾನ ಮರೆಸುವ ಏಕಜಾತಿ ನೆಡುತೋಪು’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 8:39 IST
Last Updated 4 ಡಿಸೆಂಬರ್ 2013, 8:39 IST

ಶಿರಸಿ: ‘ಕಾಡಿನ ಭಾಷೆ ಅರಿಯುವ ಪ್ರಜ್ಞೆ ಕ್ಷೀಣಿಸುತ್ತ ಸಾಗಿದ್ದು, ಹಳೆಯ ತಲೆಮಾರುಗಳು ಕಾಡನ್ನು ನೋಡುವ ಪರಿಜ್ಞಾನ ಹಾಗೂ ಇಂದಿನ ಜನರ ದೃಷ್ಟಿಕೋನದಲ್ಲಿ ಸಾಕಷ್ಟು ವ್ಯತ್ಯಾಸ ವಿದೆ’ ಎಂದು ಪರಿಸರ ಬರಹಗಾರ ಶಿವಾನಂದ ಕಳವೆ ಹೇಳಿದರು.

ಇತ್ತೀಚೆಗೆ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಶ್ರವ ಶರ್ಮ ರಚಿತ ‘ಯಥಾದರ್ಶನ’ ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

‘ಹಿಂದಿನ ತಲೆಮಾರಿನ ಜನರಿಗೆ ಕಾಡಿನ ಪ್ರತಿ ಮರ, ಮಗ್ಗುಲಿನ ಪರಿಚಯವಿತ್ತು. ಅರಣ್ಯಕ್ಕೆ ಧಕ್ಕೆಯಾಗದಂತೆ ಬಳಸುವ ಕಲೆಯ ಅರಿವಿತ್ತು. ಇಂದು ಕಾಡಿನ ಜ್ಞಾನ ಏಕಜಾತೀಯ ನೆಡುತೋಪಿಗೆ ಮಾತ್ರ ಸೀಮಿತವಾಗಿದೆ. ಇದೇ ವ್ಯವಸ್ಥೆ ಮುಂದುವರಿದಲ್ಲಿ ಕಾಲಾಂತರದಲ್ಲಿ ಕಾಡಿನ ಕುರಿತ ಬಹುದೊಡ್ಡ ಜ್ಞಾನ ಭಂಡಾರ ಕ್ಷೀಣಿಸಲಿದೆ’ ಎಂದರು. 

ಕೃತಿಕರ್ತ ವೇದಶ್ರಮ ಶರ್ಮ ಮಾತನಾಡಿ, ‘ವಿನಾಶದ ಮಾರ್ಗದಲ್ಲಿ ಅಭಿವೃದ್ಧಿಯ ಪಥ ಸಾಗುತ್ತಿದ್ದು, ಆತಂಕ ಮೂಡಿಸುವಂತಿದೆ. ಹಸಿರಿನ ನೆರಳಿನಲ್ಲಿ ಅಭಿವೃದ್ಧಿ ನಡೆದರೆ ಮನುಷ್ಯ ಬದುಕು ಹಸಿರಾಗುತ್ತದೆ’ ಎಂದರು.

ಪತ್ರಕರ್ತೆ ಶೈಲಜಾ ಗೋರ್ನಮನೆ ಪುಸ್ತಕ ಪರಿಚಯಿಸಿದರು. ನಿವೃತ್ತ ಶಿಕ್ಷಕ ಜಿ.ಎಸ್.ಹೆಗಡೆ ಮಾತನಾಡಿದರು. ವಿ.ಪಿ.ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಜಿಜ್ಞಾಸು ಕೂಟ ಹಾಗೂ ಪರಿಸರ ಸಂರಕ್ಷಣಾ ಕೇಂದ್ರ ಜಂಟಿಯಾಗಿ ಕಾರ್ಯಕ್ರಮ ಆಯೋಜಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.