ADVERTISEMENT

‘ಚತುಷ್ಪಥ: ಬೈಪಾಸ್‌ ಬೇಡ, ಫ್ಲೈಓವರ್‌ ಇರಲಿ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 6:31 IST
Last Updated 11 ಡಿಸೆಂಬರ್ 2013, 6:31 IST

ಕಾರವಾರ: ‘ಉದ್ದೇಶಿತ ರಾಷ್ಟ್ರೀಯ ಹೆದ್ದಾರಿ–66ರ ವಿಸ್ತರಣೆ ಯೋಜನೆಯಲ್ಲಿ ಬೈಪಾಸ್‌ ಮಾಡುವುದು ಬೇಡ. ಸದ್ಯ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ನಗರದಲ್ಲಿ ಫ್ಲೈಓವರ್ ಮೂಲಕ ಚತುಷ್ಪಥ ಹಾದು ಹೋಗಬೇಕು’ ಎಂದು ಕಾರವಾರ ನಗರಸಭೆ, ಗ್ರಾಮ ಪಂಚಾಯ್ತಿ ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸಿವೆ.

ಮಂಗಳವಾರ ಕಾರವಾರ ನಗರಸಭೆ, ವಿವಿಧ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಕರುನಾಡ ರಕ್ಷಣಾ ವೇದಿಕೆ, ಜಯಕರ್ನಾಟಕ ಸಂಘಟನೆ, ಆಟೊ ಚಾಲಕರ ಸಂಘ, ಟ್ಯಾಕ್ಸಿ ಚಾಲಕರ ಸಂಘ, ಪಕ್ಷಾತೀತ ಜನಪರ ವೇದಿಕೆ ಹಾಗೂ ರಾಜಕೀಯ ಪಕ್ಷಗಳ ಮುಖಂಡರು ಜಂಟಿ ಸುದ್ದಿಗೋಷ್ಠಿ ನಡೆಸಿ ಬೈಪಾಸ್‌ ಅನ್ನು ವಿರೋಧಿಸಿದರು. ಈ ಬಗ್ಗೆ ಮುಂದಿನ ದಿನಗಳಲ್ಲಿ ಕಾನೂನು ಹೋರಾಟಕ್ಕೂ ಸಿದ್ಧ ಎಂದು ಎಚ್ಚರಿಸಿದರು.

ಕರುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಎನ್.ದತ್ತಾ ಮಾತನಾಡಿ, ‘ಕಾರವಾರ ನಗರಕ್ಕೆ ಯಾವುದೇ ಅಭಿವೃದ್ಧಿ ಪರ ಯೋಜನೆಗಳು ಬಂದರೆ ಹಿಂದಿನಿಂದಲೂ ಕೆಲವರು ವಿನಾಕಾರಣ ವಿರೋಧಿಸು ತ್ತಿದ್ದಾರೆ. ಸದ್ಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಟ್ಕಳದಿಂದ ಮಾಜಾಳಿಯವರೆಗೆ ಚತುಷ್ಪಥ ಯೋಜ ನೆಗೆ ಮುಂದಾಗಿದೆ. ಈ ಯೋಜನೆ ಉತ್ತಮವಾಗಿದೆ. ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ವಿರೋಧಿಸಿ ಕೆಲವರು ಚತುಷ್ಪಥ ನಗರದ ಹೊರವಲ ಯದಲ್ಲಿ ಆಗಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಆದರೆ, ಈ ರೀತಿ ಹೊರವಲಯದಲ್ಲಿ ಚತುಷ್ಪಥ ಹಾದುಹೋದರೆ ಮುಂದೆ ಪ್ರವಾಸೋದ್ಯಮಕ್ಕೆ ಹೆಚ್ಚಿನ ನಷ್ಟವಾಗಿ ಕಾರವಾರ ನಗರ ತನ್ನ ಮಹತ್ವ ಕಳೆದುಕೊಳ್ಳಲಿದೆ’ ಎಂದು ಹೇಳಿದರು.

ಪಕ್ಷಾತೀತ ಜನಪರ ವೇದಿಕೆ ಅಧ್ಯಕ್ಷ ಗಜೇಂದ್ರ ನಾಯ್ಕ, ‘ಬೈಪಾಸ್ ಮಾಡಿದ್ದೇ ಆದಲ್ಲಿ ಕಾರವಾರ ತಾಲ್ಲೂಕಿನ ಶಿರವಾಡ, ಕಡವಾಡ, ಸುಂಕೇರಿ, ಭಾಗದ ಸಾವಿರಾರು ಜನರು ನಿರಾಶ್ರಿತರಾಗುತ್ತಾರೆ. ಅಲ್ಲದೇ ಈ ಭಾಗದಲ್ಲಿರುವ ಕಾಂಡ್ಲಾ ಗಿಡಗಳು ಶೇ 60ರಷ್ಟು ನಾಶವಾಗಿ ಪರಿಸರ ನಾಶಗುತ್ತದೆ.

ಫ್ಲೈಓವರ್ ನಿರ್ಮಾಣವಾದಲ್ಲಿ ಕಡಲತೀರಕ್ಕೂ ಯಾವುದೇ ಹಾನಿ ಆಗದೇ ಮಯೂರ ವರ್ಮ ವೇದಿಕೆ, ಯುದ್ಧನೌಕೆ ವಸ್ತುಸಂಗ್ರಹಾಲಯಕ್ಕೂ ಯಾವುದೇ ಧಕ್ಕೆ ಉಂಟಾ ಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಬಿಲ್ಟ್‌ ಸರ್ಕಲ್ನಿಂದ ಮಾಜಾಳಿಯವರೆಗೆ ಫ್ಲೈಓವರ್ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.

ನಗರಸಭಾ ಉಪಾಧ್ಯಕ್ಷೆ ಛಾಯಾ ಜಾಂವಕರ ಮಾತನಾಡಿ, ‘ಈಗಾಗಲೇ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಫ್ಲೈಓವರ್ ಬಗ್ಗೆ ಠರಾವು ಸಿದ್ಧವಾಗಿದೆ.  ಫ್ಲೈಓವರ್ ಆಗುವುದರಿಂದ ಇಲ್ಲಿನ ಪ್ರವಾಸೋದ್ಯ ಮಕ್ಕೆ ಹೆಚ್ಚಿನ ಮಾನ್ಯತೆ ದೊರೆತು ಯುವಕರಿಗೆ ಉದ್ಯೋಗ ದೊರೆಯುವ ಸಾಧ್ಯತೆಗಳಿವೆ’ ಎಂದರು.

ಬಿಜೆಪಿ ತಾಲ್ಲೂಕು ಘಟಕದ ಕಾರ್ಯದರ್ಶಿ ರಾಜೇಶ್ ನಾಯ್ಕ, ಶಿರವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಲ್ಲಾಸ್ ಬಾಂದೇಕರ, ಜಿಲ್ಲಾ ಪಂಚಾಯ್ತಿ ಸದಸ್ಯ ಮಧುಕರ ನಾಯ್ಕ, ಸದಾನಂದ ನಾಯ್ಕ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT