ಕುಮಟಾ: ‘ಪರಿಸರಕ್ಕೆ ಪೂರಕವಾದ ಹಾಗೂ ಉದ್ಯೋಗ ಸೃಷ್ಟಿ ಮಾಡುವ ಪ್ರವಾಸೋದ್ಯಮ ಬೆಳೆದರೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿ ಯಾಗುತ್ತದೆ’ ಎಂದು ಪ್ರವಾಸೋದ್ಯಮ ಸಚಿವ ಆರ್.ವಿ.ದೇಶಪಾಂಡೆ ಹೇಳಿದರು.
ಪಟ್ಟಣದಲ್ಲಿ ಭಾನುವಾರ ವಿವಿಧ ಇಲಾಖೆಗಳ ₨ 31.95 ಕೋಟಿ ವೆಚ್ಚದ 95 ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೆರಿಸಿ ಅವರು ಮಾತನಾಡಿದರು. ‘ಕುಮಟಾ ತಾಲ್ಲೂಕಿಗೆ ₨ 8.56 ಕೋಟಿಗಳಷ್ಟು ಆಶ್ರಯ ಯೋಜನೆಯ ಮನೆ ಸಾಲ, ಕೊಳಚೆ ನಿರ್ಮೂಲನಾ ಮಂಡಳಿ ಮೂಲಕ ಹುಡ್ಕೋ ಸಂಸ್ಥೆಯಿಂದ 42 ಮನೆಗಳಿಗೆ ನೀಡಿದ್ದ ಸುಮಾರು ₨12.85 ಲಕ್ಷ ಸಾಲ ಮನ್ನಾ ಮಾಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯಿಂದ ಹೆದ್ದಾರಿ ಬದಿಯ ಜನರಿಗೆ ಉಂಟಾಗುವ ತೊಂದರೆಯ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಬರೆಯಲಾಗಿದೆ. ಚಿಕ್ಕ ನೀರಾವರಿ ಇಲಾಖೆ ಅಧಿಕಾರಿಗಳು ಕುಮಟಾದಲ್ಲಿ ಏತ ನೀರಾವರಿ ಸಾಧ್ಯತೆಗಳ ಬಗ್ಗೆ ಪ್ರಸ್ತಾವ ತಯಾರಿಸಬೇಕು. ಕುಮಟಾದ ಜಿಲ್ಲಾ ಶಿಕ್ಷಣ ಹಾಗೂ ತರಬೇತಿ ಸಂಸ್ಥೆ ತನ್ನ 25 ಎಕರೆ ಜಾಗದ ಪೈಕಿ 5 ಎಕರೆ ಜಾಗವನ್ನು ಕಟ್ಟಡ ಇಲ್ಲದ ಸರ್ಕಾರಿ ಪದವಿ ಕಾಲೇಜಿಗೆ ನೀಡಲು ಒಪ್ಪಿದೆ’ ಎಂದರು.
ಶಾಸಕಿ ಶಾರದಾ ಶೆಟ್ಟಿ ಮಾತನಾಡಿ, ‘ಕುಮಟಾ ತಾಲ್ಲೂಕಿನ ಪ್ರಸಿದ್ಧ ಯಾತ್ರಾ ಹಾಗೂ ಪ್ರವಾಸಿ ತಾಣವಾದ ಭೈರವೇಶ್ವರ ಶೀಖರಕ್ಕೆ ಹೋಗುವ ಮೆಟ್ಟಿಲು ನಿರ್ಮಾಣ, ಐಗಳಕುರ್ವೆ ಜನರಿಗೆ ಅನುಕೂಲವಾಗುವಂತೆ ಅಘನಾಶಿನಿ ನದಿಗೆ ಸೇತುವೆ ಕಾಮಗಾರಿ ಪ್ರವಾಸೋದ್ಯಮ ಇಲಾಖೆಯಿಂದ ಆಗಬೇಕಾಗಿದೆ. ಗೋಕರ್ಣ ನೀರು ಸರಬರಾಜು ಯೋಜನೆ ಕಾಮಗಾರಿ ನಿರೀಕ್ಷೆಗೆ ಮಿರಿ ವಿಳಂಬವಾಗುತ್ತಿದೆ’ ಎಂದರು.
ಇದೇ ಸಂದರ್ಭದಲ್ಲಿ ಹೆಸ್ಕಾಂ ನ 24X7 ದಿವಸಗಳ ಗ್ರಾಹಕರ ಸೇವಾ ವಾಹನಕ್ಕೂ ಚಾಲನೆ ನೀಡಲಾಯಿತು. ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ಲಲಿತಾ ಪಟಗಾರ, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭಾರತಿ ದೇವತೆ, ಪುರಸಭೆ ಅಧ್ಯಕ್ಷೆ ದಾಕ್ಷಾಯಿಣಿ ಅರಿಗ, ಜಿಲ್ಲಾ ಪಂಚಾಯ್ತಿ ಸದಸ್ಯರಾದ ವೀಣಾ ನಾಯ್ಕ, ಮಹಾದೇವಿ ಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯರಾದ ಫ್ರಾನ್ಸಿಸ್ ಫರ್ನಾಂಡಿಸ್, ರತ್ನಾಕರ ನಾಯ್ಕ, ಪುರಸಭೆ ಸದಸ್ಯೆ ಭಾರತಿ ಗೊಂಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೊನ್ನಪ್ಪ ನಾಯಕ, ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಕಾರ್ಯದರ್ಶಿ ರವಿಕುಮಾರ ಶೆಟ್ಟಿ ಇದ್ದರು.
ಲೋಕೋಪಯೋಗಿ ಇಲಾಖೆ ಸಹಾಯಕ ನಿರ್ವಾಹಕ ಎಂಜಿನಿಯರ್ ಅಶೋಕ ನೇಸರಿ ಸ್ವಾಗತಿಸಿದರು. ರವೀಂದ್ರ ಭಟ್ಟ ಸೂರಿ ನಿರೂಪಿಸಿದರು. ಅಶ್ವಿನಿ ಮುಕ್ರಿ ಪ್ರಾರ್ಥನೆ ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.