ಶಿರಸಿ: ‘ಪ್ರತಿಯೊಬ್ಬರೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ದೇವರ ನಾಮ ಸಂಕೀರ್ತನೆ, ಪೂಜೆ, ಧ್ಯಾನ ಮೊದಲಾದ ಕೈಂಕರ್ಯಗಳಲ್ಲಿ ತೊಡಗಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಬಹುದು’ ಎಂದು ಸ್ವರ್ಣವಲ್ಲಿ ಮಠಾಧೀಶ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ನುಡಿದರು.
ಚಾತುರ್ಮಾಸ್ಯದ ಅಂಗವಾಗಿ ಭಾನುವಾರ ಮೈಸೂರು, ಶಿವಮೊಗ್ಗ, ಬೆಂಗಳೂರು ಹವ್ಯಕ ಮಹಾಸಭಾದ ಶಿಷ್ಯರು ಸಲ್ಲಿಸಿದ ಭಿಕ್ಷೆ, ಪಾದಪೂಜೆ ಸ್ವೀಕರಿಸಿ ಅವರು ಮಾತನಾಡಿದರು. ‘ತಡವಾಗಿ ಮಲಗಿ ತಡವಾಗಿ ಏಳುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಬೇಗ ಮಲಗಿ ಬೇಗ ಏಳುವಂತಾಗಬೇಕು. ಬೆಳಿಗ್ಗೆ 4ರಿಂದ 5 ಗಂಟೆಯೊಳಗೆ ಸಂಧಿಸುವ ಬ್ರಾಹ್ಮೀ ವೇಳೆ ಅತ್ಯಂತ ಉತ್ತಮ ವೇಳೆಯಾಗಿದೆ. ಆ ಹೊತ್ತಿಗೆ ಎದ್ದು ಶೌಚ-, ಸ್ನಾನಾದಿಗಳನ್ನು ಮುಗಿಸಿ ದೇವರ ಉಪಾಸನೆ ಮಾಡಬೇಕು’ ಎಂದರು.
‘ಪ್ರಾಣಾಯಾಮ-, ಯೋಗಗಳನ್ನು ಅನುಷ್ಠಾನ ಮಾಡಬೇಕು. ಬ್ರಾಹ್ಮಿ ಮುಹೂರ್ತದಲ್ಲಿ ಮನಸ್ಸು ಏಕ್ರಾಗತೆ ಸಾಧಿಸುತ್ತದೆ. ಶರೀರದ ನಾಡಿಗಳು ಸ್ಪಂದಿಸುತ್ತವೆ, ಉತ್ಸಾಹ ಸಹಜವಾಗಿಯೇ ಇರುತ್ತದೆ. ಇದರಿಂದ ದೇಹದಲ್ಲಿ ಆರೋಗ್ಯ ಹೆಚ್ಚುತ್ತದೆ’ ಎಂದರು.
ಬೆಂಗಳೂರು ಹವ್ಯಕ ಮಹಾಸಭಾದವರು ನಿರ್ವಹಿಸುತ್ತಿರುವ ಸಾಮಾಜಿಕ ಚಟುವಟಿಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಇದಕ್ಕೂ ಹೆಚ್ಚಿನ ಕಾರ್ಯಗಳು ನಡೆಯಲೆಂದು ಆಶಿಸಿದರು. ಬೆಳಗಿನಿಂದ ಆಗಮಿಸಿದ ಶಿಷ್ಯ-ಭಕ್ತರು ಲೋಕಕಲ್ಯಾಣಾರ್ಥವಾಗಿ ಗಾಯತ್ರಿ ಜಪ ಹಾಗು ಕಂಕುಮಾರ್ಚನೆ ನೆರವೇರಿದರು. ಆರ್. ಎಸ್. ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಭೆಯಲ್ಲಿ ಮಾತೆಯರು ಶಾಂಕರ ಸ್ತೋತ್ರ ಪಠನ ಹಾಗೂ ಭಗವದ್ಗೀತಾ ಪಠನ ಗೈದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.