ADVERTISEMENT

‘ಮಕ್ಕಳಿಗೆ ವೃತ್ತಿ ಶಿಕ್ಷಣದಲ್ಲಿ ಆಸಕ್ತಿ ಮೂಡಿಸಿ’

​ಪ್ರಜಾವಾಣಿ ವಾರ್ತೆ
Published 2 ಜನವರಿ 2014, 9:38 IST
Last Updated 2 ಜನವರಿ 2014, 9:38 IST

ಯಲ್ಲಾಪುರ : ‘ವೃತ್ತಿ ಶಿಕ್ಷಣ ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದ್ದು, ವಿದ್ಯಾರ್ಥಿಗಳಲ್ಲಿ ಈ ಕುರಿತು ಹೆಚ್ಚಿನ ಆಸಕ್ತಿ ಮೂಡಿಸುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾದುದು’ ಎಂದು ಡಿಡಿಪಿಐ ಎಂ.ಎಸ್.ಪ್ರಸನ್ನಕುಮಾರ ಹೇಳಿದರು. ವೈಟಿಎಸ್ಎಸ್ ಸಭಾಭವನದಲ್ಲಿ ನಡೆದ ಪ್ರೌಢ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ಶಿಕ್ಷಣ ವಂಚಿತ ಬಡ ಮಕ್ಕಳಿಗೆ ವೃತ್ತಿ ಶಿಕ್ಷಣದ ಅರಿವು ಮೂಡಿಸಿದರೆ ಅವರಿಗೆ ಬದುಕು ಕಟ್ಟಿಕೊಳ್ಳಲು ಸಹಾಯಕವಾಗುತ್ತದೆ’ ಎಂದರು.

ವೈ.ಟಿ.ಎಸ್.ಎಸ್.ಪ್ರಾಂಶುಪಾಲ ಬೀರಣ್ಣ ನಾಯಕ ಮೊಗಟಾ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ.ನಾಯಕ, ವೈ.ಟಿ.ಎಸ್.ಎಸ್.ಉಪ ಪ್ರಾಂಶುಪಾಲೆ ಸಾವಿತ್ರಿ ಕುಲಕರ್ಣಿ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಆರ್.ಎನ್.ಬೇವಿನಕಟ್ಟಿ, ಶಿಕ್ಷಣ ಸಂಯೋಜಕ ನಾಗರಾಜ ನಾಯಕ ಉಪಸ್ಥಿತರಿದ್ದರು. ವೃತ್ತಿ ಶಿಕ್ಷಣದ ಜಿಲ್ಲಾ ಪರಿವೀಕ್ಷಕಿ ಮಂಗಲಾ ಬಗಲಿ ಸ್ವಾಗತಿಸಿದರು. ಶಿಕ್ಷಕ ಜಿ.ಎಸ್.ಗಾಂವ್ಕರ ನಿರೂಪಿಸಿದರು.

ಪ್ರದರ್ಶನದಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆಯ 29 ಶಾಲೆಗಳು ಭಾಗವಹಿಸಿದ್ದವು. ಹೊಲಿಗೆ ಹಾಗೂ ಎಸ್.ಯು.ಪಿ.ಡಬ್ಲ್ಯು ದಲ್ಲಿ ಸಿದ್ದಾಪುರ ತಾಲ್ಲೂಕಿನ ಕಾನಗೋಡ ಪ್ರೌಢ ಶಾಲೆ ಪ್ರಥಮ, ದಾಂಡೇಲಿಯ ಜನತಾ ವಿದ್ಯಾಲಯ ದ್ವಿತೀಯ , ಜೊಯಿಡಾದ ಬೈಲಪಾರ್ ಪ್ರೌಢ ಶಾಲೆ ತೃತೀಯ ಸ್ಥಾನ ಪಡೆದವು. ತೋಟಗಾರಿಕೆ ವಿಭಾಗದಲ್ಲಿ ವೈ.ಟಿ.ಎಸ್.ಎಸ್. ಪ್ರಥಮ, ಸಿದ್ದಾಪುರ ತಾಲ್ಲೂಕಿನ ಕಾನಸೂರಿನ ಕಾಳಿಕಾ ಭವಾನಿ ಪ್ರೌಢ ಶಾಲೆ ಹಾಗೂ ಕಾವಂಚೂರಿನ ಮಲೆನಾಡು ಪ್ರೌಢ ಶಾಲೆ ದ್ವಿತೀಯ, ಸೂರ್ಯನಾರಾಯಣ ಪ್ರೌಢ ಶಾಲೆ ಬಿಸಲಕೊಪ್ಪ ತೃತೀಯ ಸ್ಥಾನ ಪಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.