ADVERTISEMENT

‘ರಾಜ್ಯ ಸರ್ಕಾರಕ್ಕೆ ಆಮ್‌ ಆದ್ಮಿ ಉತ್ತರ’

ಗಡಿನಾಡು ಉತ್ಸವಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 7:00 IST
Last Updated 6 ಜನವರಿ 2014, 7:00 IST

ಕಾರವಾರ: ‘ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸದೇ ಇದ್ದಲ್ಲಿ ದೆಹಲಿಯಲ್ಲಿ ಆಮ್‌ಆದ್ಮಿ ಪಕ್ಷ ನೀಡಿದ ಉತ್ತರದಂತೆ ರಾಜ್ಯದಲ್ಲಿ ಜಯಕರ್ನಾಟಕ ಸಂಘಟನೆ ರಾಜ್ಯ ಸರ್ಕಾರಕ್ಕೆ ಉತ್ತರ ನೀಡಲಿದೆ’ ಎಂದು ಜಯಕರ್ನಾಟಕ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಎನ್. ಜಗದೀಶ ಹೇಳಿದರು.

ಜಯಕರ್ನಾಟಕದ ಸಂಘಟನೆಯ 2ನೇ ವರ್ಷಾಚರಣೆಯ ನಿಮಿತ್ತ ನಗರದ ಮಯೂರವರ್ಮ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ‘ಗಡಿನಾಡು ಉತ್ಸವ’ದಲ್ಲಿ   ಅವರು ಮಾತನಾಡಿದರು.

‘ದೆಹಲಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕಿಳಿದಿರುವ ಆಮ್‌ ಆದ್ಮಿ ಪಕ್ಷವನ್ನು ಜನರು ಬೆಂಬಲಿಸಿದ್ದಾರೆ. ರಾಜ್ಯದಲ್ಲಿಯೂ ಇಂತಹ ಅನಿವಾರ್ಯ ಬಂದರೆ, ಜಯಕರ್ನಾಟಕ ಸಂಘಟನೆ ಆಮ್‌ಆದ್ಮಿ ಪಕ್ಷದ ರೀತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿಯಲಿದೆ’ ಎಂದರು.

‘ರಾಜ್ಯದಲ್ಲಿ ಸರ್ಕಾರಿ, ಖಾಸಗಿ ಶಾಲೆ ಎಂದು ಬಡವರಿಗೆ ಹಾಗೂ ಉಳ್ಳವರಿಗೆ ಒಂದೊಂದು ರೀತಿಯ ಶಿಕ್ಷಣ ನೀಡುವ ಪದ್ಧತಿ ಇದೆ. ಇದು ಬದಲಾಗಬೇಕು. ಎಲ್ಲರಿಗೂ ಸಮಾನ ಶಿಕ್ಷಣ ದೊರೆಯಬೇಕು ಎನ್ನುವುದೇ ಪಕ್ಷದ ಗುರಿ. ಈ ಹಿನ್ನೆಲೆಯಲ್ಲಿ ಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸಬೇಕು’ ಎಂದು ಆಗ್ರಹಿಸಿದರು.

ವಕೀಲ ನಾಗರಾಜ ನಾಯಕ ಮಾತನಾಡಿ, ‘ರಾಜ್ಯದಲ್ಲಿ ಕನ್ನಡದ ಉಳಿವಿಗಾಗಿ ಸ್ವಾತಂತ್ರ್ಯಪೂರ್ವದಿಂದಲೂ ಹೋರಾಟಗಳು ನಡೆಯುತ್ತ ಬಂದಿದೆ. ಆದರೂ, ಕನ್ನಡದ ಮೇಲಿನ ಇಂಗ್ಲಿಷ್‌ನ ಪ್ರಭಾವ ನಿಂತಿಲ್ಲ. ಹೀಗಾಗಿ ಕನ್ನಡಪರ ಸಂಘಟನೆಗಳು ಕನ್ನಡ ಭಾಷೆಯನ್ನು ಉಳಿಸಲು ಶ್ರಮಿಸಬೇಕು’ ಎಂದರು.

ನಗರಸಭೆ ಅಧ್ಯಕ್ಷೆ ಲೀಲಾಬಾಯಿ ಠಾಣೇಕರ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಿಕ್ಷಕಿ ಖುರ್ಷಿದಾ ಬಾನು, ನೃತ್ಯ ಕಲಾವಿದ ಪ್ರಥಮ ನಾಯ್ಕ, ಲೇಖಕ ಮಾರುತಿ ಬಾಡ್ಕರ್‌, ಕ್ರೀಡಾಪಟು ನಿವೇದಿತಾ ಸಾವಂತ ತಂದೆ ಪ್ರಶಾಂತ ಸಾವಂತ ಹಾಗೂ ಜಯಕರ್ನಾಟಕ ಸಂಘಟನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ಸುಧೀರ ಕುಮಾರ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಉಪಾಧ್ಯಕ್ಷೆ ಛಾಯಾ ಜಾಂವಕರ, ಮೀನುಗಾರ ಮುಖಂಡ ಗಣಪತಿ ಮಾಂಗ್ರೆ, ಕಡವಾಡ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮಾರುತಿ ನಾಯ್ಕ, ಚಿತ್ತಾಕುಲ ಗ್ರಾಮ ಪಂಚಾಯ್ತಿ ಅಧ್ಯಕ್ಷ ರಾಜು ತಾಂಡೇಲ, ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ರಾಮಚಂದ್ರಯ್ಯ, ಜಿಲ್ಲಾ ಉಸ್ತುವಾರಿ ಕೆ.ಎನ್‌. ಜಗದೀಶ, ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಅರ್ಗೇಕರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ದಿವ್ಯಾ ನಾಯ್ಕ, ಉಪಾಧ್ಯಕ್ಷ ದೇವಿದಾಸ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು.

ಮನರಂಜನಾ ಕಾರ್ಯಕ್ರಮ: ಸಭಾ ಕಾರ್ಯಕ್ರಮದ ನಂತರ ನಡೆದ ಮನರಂಜನಾ ಕಾರ್ಯಕ್ರಮ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಕನ್ನಡದ ಹಾಸ್ಯ ಕಲಾವಿದರಾದ ಬೀರಾದಾರ, ಬ್ಯಾಂಕ್‌ ಜನಾರ್ದನ ಅವರ ಹಾಸ್ಯ ಪ್ರೇಕ್ಷಕರ ಹೊಟ್ಟೆ ಹುಣ್ಣಾಗಿಸಿತು. ಭಿಕ್ಷುಕ ವೇಷದಲ್ಲಿ ವೇದಿಕೆ ಏರಿದ ಬೀರಾದಾರ ಅವರು ನೃತ್ಯ ಪ್ರದರ್ಶನದ ಮೂಲಕ ಪ್ರೇಕ್ಷಕರ ಮನಗೆದ್ದರು. ಜೂನಿಯರ್‌ ಜಾನಿಲಿವರ್‌ ಮಾತಿನಿಂದಲೇ ಪ್ರೇಕ್ಷಕರಿಗೆ ಕಚಗುಳಿ ಇಟ್ಟರೆ, ಜೂನಿಯರ್‌ ಗೋವಿಂದ ನಿರಾಶೆ ಮೂಡಿಸಲಿಲ್ಲ.

ಬೆಂಗಳೂರು ಹಾಗೂ ಮುಂಬೈ ಮೆಲೋಡಿಯಸ್‌ ತಂಡದವರಿಂದ ನಡೆದ ನೃತ್ಯ ಪ್ರದರ್ಶನ ಚಪ್ಪಾಳೆ ಗಿಟ್ಟಿಸಿಕೊಂಡಿತು. ಕನ್ನಡ ಹಾಗೂ ಹಿಂದಿ ಹಾಡುಗಳ ರಸಮಂಜರಿ ಕಾರ್ಯಕ್ರಮ ಪ್ರೇಕ್ಷಕರನ್ನು ಸಮಾಧಾನ ಪಡಿಸಲಷ್ಟೇ ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.