ದಾಂಡೇಲಿ: ‘ರಾಜಕಾರಣದಲ್ಲಿ ಬದಲಾವಣೆಯ ಕಾಲ ಸನ್ನಿಹಿತವಾಗಿದೆ. ಮುತ್ಸದ್ಧಿ ನಾಯಕ ನರೇಂದ್ರ ಮೋದಿ ಅವರ ನಾಯಕತ್ವಕ್ಕೆ ರಾಷ್ಟ್ರವ್ಯಾಪಿ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ದೇಶದ ಜನ ಬದಲಾವಣೆ ಬಯಸಿರುವುದರ ಜೊತೆಗೆ ಬಿಜೆಪಿಯ ತತ್ವ ಸಿದ್ಧಾಂತ ಮೆಚ್ಚಿ ಮತ್ತೊಮ್ಮೆ ದೇಶದ ಆಡಳಿತ ಚುಕ್ಕಾಣಿಯನ್ನು ಪಕ್ಷಕ್ಕೆ ಒದಗಿಸಿಕೊಡಲಿದ್ದಾರೆ’ ಎಂದು ಸಂಸದ ಅನಂತಕುಮಾರ ಹೆಗಡೆ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೆನರಾ ಕ್ಷೇತ್ರದಲ್ಲಿ ಈಗಾಗಲೆ ಚುನಾವಣಾ ಪ್ರಕ್ರಿಯೆ ಕುರಿತು ಕೆಲಸ ಕಾರ್ಯಗಳು ವೇಗವಾಗಿ ನಡೆಯುತ್ತಿವೆ. ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲಾಗಿದ್ದು, ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮುಗಿದು, ಜವಾಬ್ದಾರಿಯನ್ನು ಒಪ್ಪಿಸಲಾಗಿದೆ’ ಎಂದರು.
‘ಬಿಜೆಪಿಯ ಅಭಿವೃದ್ಧಿ ಕಲ್ಪನೆಗಳನ್ನು ಮತ್ತು ಎರಡು ಅವಧಿಯ ಯುಪಿಎ ಸರ್ಕಾರದ ಹಗರಣಗಳನ್ನು ಮನೆ ಮನೆಗೆ ತಲುಪಿಸುವ ಕಾರ್ಯವನ್ನು ಪಕ್ಷದ ಕಾರ್ಯಕರ್ತರ ಮೂಲಕ ಮಾಡುವುದರ ಜೊತೆಗೆ ಜನ ಜಾಗೃತಿ ಅಭಿಯಾನವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಿದ್ದೇವೆ’ ಎಂದರು.
‘ದಾಂಡೇಲಿಯಲ್ಲಿ ಕಾಯ್ದಿಟ್ಟ ಅರಣ್ಯ ಜಾಗವನ್ನು ರೆವಿನ್ಯೂ ಖಾತೆಗೆ ವರ್ಗಾಯಿಸುವಂತೆ ಪ್ರಯತ್ನ ಮಾಡಿದ ಫಲವಾಗಿ ಈಗಾಗಲೆ ಕೈಗೊಳ್ಳಲಾದ ಸಮೀಕ್ಷೆ ಕಾರ್ಯ ಅಂತಿಮ ಹಂತದಲ್ಲಿದೆ. ದಾಂಡೇಲಿ–ಅಳ್ನಾವರ ಮತ್ತು ಹುಬ್ಬಳ್ಳಿ –-ಅಂಕೋಲಾ ರೈಲ್ವೆ ಯೋಜನೆ ಪ್ರಕ್ರಿಯೆಗೆ ಪ್ರಾರಂಭವಾಗಿದೆ. ಕೃಷಿ, ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ರಾಷ್ಟ್ರೀಯ ಕೃಷಿ ನೀತಿ ನಿಯಾಮಾವಳಿಗಳು, ಗ್ರಾಮೀಣ ರಸ್ತೆಗಳು ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ನಮ್ಮ ಸಾಧನೆಗಳನ್ನ ಹೊತ್ತ ಕಿರು ಹೊತ್ತಿಗೆಯನ್ನು ಪ್ರಕಟಿಸಿ ಮತದಾರರಿಗೆ ತಲುಪಿಸುವ ಕಾರ್ಯವನ್ನು ಮಾಡಲಿದ್ದೇವೆ’ ಎಂದು ಹೇಳಿದರು.
ನರೇಂದ್ರ ಮೋದಿಯವರ ನಾಯಕತ್ವಕ್ಕೆ ಅಪಾರ ಜನಸ್ಪಂದನೆ ದೊರೆಯುತ್ತಿದೆ. ನಮೋ ಬ್ರಿಗೇಡ್ ಹೆಸರಿನಲ್ಲಿ ಸ್ವಯಂಸ್ಫೂರ್ತಿಯಾಗಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದ್ದಾರೆ’ ಎಂದು ಹೇಳಿದ ಅನಂತಕುಮಾರ ಹೆಗಡೆ, ‘ಕೆನರಾ ಕ್ಷೇತ್ರದಲ್ಲಿ ಬಿಜೆಪಿಗೆ ಪ್ರತಿಸ್ಪರ್ಧಿಯಿಲ್ಲ. ಬಿಜೆಪಿ ಗೆಲುವು ನಿಶ್ಚಿತ’ ಎಂದರು. ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರುಗಳಾದ ರಾಜು ಧೂಳಿ, ಸುಧಾಕರ ರೆಡ್ಡಿ, ಎಂ.ಸಿ.ಹೆಗಡೆ, ಅಶೋಕ ಪಾಟೀಲ, ರೋಶನ್ ನೇತ್ರಾವಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.