ADVERTISEMENT

‘ಶುದ್ಧ ಮಲೆನಾಡು ಗಿಡ್ಡ ಗುರುತಿಸುವಿಕೆ ಆಗಲಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 6:37 IST
Last Updated 17 ಸೆಪ್ಟೆಂಬರ್ 2013, 6:37 IST

ಶಿರಸಿ: ‘ಪಶ್ಚಿಮಘಟ್ಟ ಪ್ರದೇಶದಲ್ಲಿ ಲಭ್ಯವಿರುವ ಸಂಕರಮುಕ್ತ ಶುದ್ಧ ಮಲೆನಾಡು ಗಿಡ್ಡ ಜಾನುವಾರು ತಳಿಯನ್ನು ಗುರುತಿಸುವ ಕಾರ್ಯ ತುರ್ತಾಗಿ ನಡೆಯಬೇಕಾಗಿದೆ‘ ಎಂದು ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆ ನಿರ್ದೇಶಕ ಡಾ. ಡಿ.ಎಂ.ದಾಸ್ ಹೇಳಿದರು.

ಇಂಡಿಯನ್ ಬ್ಯೂಯಾಟ್ರಿಶಿಯನ್ಸ್ ಅಸೋಸಿಯೇಶನ್, ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರು ಹಾಗೂ
ಇಂಡಿಯನ್‌ ವೆಟರ್ನರಿ ರಿಸರ್ಚ್‌ ಇನಸ್ಟಿಟ್ಯೂಟ್‌ ಇಜ್ಜತ್‌ನಗರ ಜಂಟಿಯಾಗಿ ಸೋಮವಾರ ಇಲ್ಲಿನ ತೋಟಗಾರರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ‘ಉದ್ಯಮಶೀಲತೆ ಅಭಿವೃದ್ಧಿ, ಮಲೆನಾಡು ಗಿಡ್ಡ ತಳಿಯ ಮುಂದಿನ ಸವಾಲು, ಇಂದಿನ ಪಶು ಆಹಾರದ ಗುಣಮಟ್ಟ’ ಕುರಿತ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಮಲೆನಾಡು ಗಿಡ್ಡ ಪಶ್ಚಿಮಘಟ್ಟ ಭಾಗದ ವಿಶೇಷ ತಳಿಯಾಗಿದ್ದು, ತಳಿ ಸಂಕರಣದ ಕಾರಣದಿಂದ ಈ ಜಾತಿಯ ಹಸುಗಳು ವಿರಳವಾಗುತ್ತಿವೆ. ಅಪ್ಪಟ ಮಲೆನಾಡು ಗಿಡ್ಡ ಹಸುಗಳನ್ನು ಗುರುತಿಸಿ, ನಂತರ ಅವುಗಳ ಅಭಿವೃದ್ಧಿ, ಹಾಲು ಉತ್ಪಾದನೆ ಹೆಚ್ಚಳದ ಕುರಿತು ದೃಷ್ಟಿ ಬೀರಬೇಕಾಗಿದೆ’ ಎಂದರು.

‘ಹೈನುಗಾರಿಕೆಯಲ್ಲಿ ಉತ್ಪಾದನಾ ವೆಚ್ಚ ಕಡಿಮೆಯಾದಾಗ ಮಾತ್ರ ರೈತರು ರಾಸುಗಳನ್ನು ಸಾಕಲು ಆಸಕ್ತಿ ತೋರುತ್ತಾರೆ. ರೈತರಲ್ಲಿ ದೃಢತೆ ಮೂಡಿಸುವ ದಿಸೆಯಲ್ಲಿ ಪಶು ವೈದ್ಯರು ವಿಶ್ವವಿದ್ಯಾಲಯ ಮಟ್ಟದ ಸಂಶೋಧನೆಗಳನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡಬೇಕು’ ಎಂದರು.

’2007 ಜಾನುವಾರು ಗಣತಿ ಪ್ರಕಾರ ಪಶ್ಚಿಮಘಟ್ಟ ಪ್ರದೇಶದಲ್ಲಿ 12 ಲಕ್ಷ ಮಲೆನಾಡು ಗಿಡ್ಡ ರಾಸುಗಳಿವೆ. ಇವು ಕಡಿಮೆ ಹಾಲು ಕೊಡುವ ತಳಿಗಳೆಂಬ ಭಾವನೆ ಇದ್ದರೂ ಇವುಗಳಲ್ಲಿಯೂ ದಿನಕ್ಕೆ 4 ಲೀಟರ್‌ ಹಾಲು ಕೊಡುವ ಹಸುಗಳಿವೆ. ಅಂತಹ ಉತ್ಕೃಷ್ಟ ದನಗಳನ್ನು ಆಯ್ದ ತಳಿಗೆ ಒಳಪಡಿಸಿದರೆ ಹುಟ್ಟುವ ಹೆಣ್ಣು ಕರುಗಳು ಹೆಚ್ಚು ಹಾಲು ನೀಡುವ ಸಾಮರ್ಥ್ಯ ಹೊಂದಿರುತ್ತವೆ.

ಈ ಮಾದರಿ ಅನುಸರಿಸಿ ಮಲೆನಾಡು ಗಿಡ್ಡ ತಳಿಯ ಹಸುಗಳಲ್ಲಿ ಹಾಲು ಉತ್ಪಾದನೆ ಹೆಚ್ಚಿಸಲು ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ’ ಎಂದು ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ ಬೆಂಗಳೂರಿನ ಪ್ರಧಾನ ವಿಜ್ಞಾನಿ ಡಾ. ಕೆ.ಪಿ.ರಮೇಶ ಹೇಳಿದರು.

ಮಲೆನಾಡು ಗಿಡ್ಡ ತಳಿ ಅಭಿವೃದ್ಧಿ ಕುರಿತ ಕೈಪಿಡಿ ಬಿಡುಗಡೆ ಮಾಡಿದ ಇಂಡಿಯನ್ ವೆಟರ್ನರಿ ರಿಸರ್ಚ್‌ ಇನಸ್ಟಿಟ್ಯೂಟ್ ಇಜ್ಜತ್‌ ನಗರದ ಜಂಟಿ ನಿರ್ದೇಶಕ ಡಾ.ತ್ರಿವೇಣಿದತ್ ಮಾತನಾಡಿ, ‘ಪಶು ಆರೋಗ್ಯ, ಹಾಲು ಉತ್ಪಾದನೆ ಹೆಚ್ಚಳ, ಉತ್ಪಾದನಾ ತಂತ್ರಜ್ಞಾನ ಕೇಂದ್ರೀಕರಿಸಿ ಸಂಸ್ಥೆಯು 220 ಸಂಶೋಧನೆ ಕೈಗೆತ್ತಿಕೊಂಡಿದ್ದು, ಶೇ. 50ರಷ್ಟು ಪ್ರಗತಿಯಲ್ಲಿದೆ’ ಎಂದರು.

ಡಾ. ಜಿ.ವಿ.ಹೆಗಡೆ ಹುಳಗೋಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.   ಧಾರವಾಡ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ.ರಾಮಚಂದ್ರ ಭಟ್ಟ, ಪಶುವೈದ್ಯ ಡಾ.ಗೋವಿಂದಯ್ಯ, ಪಶುಪಾಲನಾ ಮತ್ತು  ಇಲಾಖೆ ಜಿಲ್ಲಾ ಉಪನಿರ್ದೇಶಕರಾದ ಎಂ.ಎಸ್.ಪಾಳೇಗಾರ, ಡಾ.ಸುಬ್ರಾಯ ಭಟ್ಟ, ಡಾ.ರವೀಂದ್ರ ಉಪಸ್ಥಿತರಿದ್ದರು.
ಡಾ. ಪಿ.ಎಸ್‌.ಹೆಗಡೆ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT