ADVERTISEMENT

12 ಕುರಿ ಸಾವು: ವಿಷಾಹಾರ ಸೇವನೆಯ ಶಂಕೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2019, 21:25 IST
Last Updated 14 ಅಕ್ಟೋಬರ್ 2019, 21:25 IST
ಮೃತ ಕುರಿಗಳ ಎದುರು ಮಾಲೀಕರು
ಮೃತ ಕುರಿಗಳ ಎದುರು ಮಾಲೀಕರು   

ಶಿರಸಿ: ತಾಲ್ಲೂಕಿನ ಇಸಳೂರಿನಲ್ಲಿ ಸೋಮವಾರ 12 ಕುರಿಗಳು ಮೃತಪಟ್ಟಿವೆ. ವಿಷ ಪ್ರಾಶನದಿಂದ ಅವು ಮೃತಪಟ್ಟಿರಬಹುದೆಂದು ಶಂಕಿಸಲಾಗಿದೆ.

ಇಸಳೂರಿನ ಓಂಕಾರಪ್ಪ ಅವರಿಗೆ ಸೇರಿದ ಒಂಬತ್ತು ಹೆಣ್ಣು ಹಾಗೂ ಎರಡು ಗಂಡು ಕುರಿಗಳು ಮೇಯಲು ಹೋದ ಸಂದರ್ಭದಲ್ಲಿ ಸತ್ತಿವೆ. ಇದರಿಂದ ಅವರಿಗೆ ₹ 1.5 ಲಕ್ಷ ನಷ್ಟವಾಗಿದೆ.

‘ಮನೆಯಲ್ಲಿ ಒಟ್ಟು 45 ಕುರಿಗಳಿವೆ. ಕುರಿ ಸಾಕಣೆಯಿಂದ ಜೀವನ ನಡೆಸುತ್ತಿರುವ ನಮಗೆ ಈ ನಷ್ಟ ಭರಿಸುವುದು ಕಷ್ಟ. ಮರಿ ಹಾಕುವ ಹಂತದಲ್ಲಿದ್ದ ಕುರಿಗಳು ಸಹ ಮೃತಪಟ್ಟಿವೆ. ಇವುಗಳ ಸಾವಿನ ಬಗ್ಗೆ ಶಂಕೆಯಿದೆ. ನಮಗೆ ಸರ್ಕಾರ ಪರಿಹಾರ ನೀಡಬೇಕು’ ಎಂದು ಓಂಕಾರಪ್ಪ ವಿನಂತಿಸಿದರು.

ADVERTISEMENT

ಪಶು ವೈದ್ಯ ಡಾ.ಗಣೇಶ ಹೆಗಡೆ ಅವರು ಸ್ಥಳಕ್ಕೆ ಭೇಟಿ ನೀಡಿ ಮಾದರಿ ಸಂಗ್ರಹಿಸಿದ್ದಾರೆ.

‘ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗುತ್ತದೆ. ಯಾವ ಕಾರಣಕ್ಕೆ ಕುರಿಗಳು ಮೃತಪಟ್ಟಿವೆ ಎಂಬ ಸಂಗತಿ ವರದಿ ಬಂದ ಮೇಲಷ್ಟೇ ಗೊತ್ತಾಗಲಿದೆ. ಉಳಿದ ಕುರಿಗಳಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆವಹಿಸಿ, ಚಿಕಿತ್ಸೆ ನೀಡಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.