ADVERTISEMENT

1947ರ ತದ್ರೂಪು 2014 ಕ್ಯಾಲೆಂಡರ್‌!

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 7:16 IST
Last Updated 1 ಜನವರಿ 2014, 7:16 IST

ಕಾರವಾರ: ಹೊಸ ವರ್ಷದ ಸ್ವಾಗತಕ್ಕೆ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ. ಇದರ ಜೊತೆಯಲ್ಲಿಯೇ 2014ರ ಕ್ಯಾಲೆಂಡರ್‌ 1947ರ ಕ್ಯಾಲೆಂಡರ್‌ನೊಂದಿಗೆ ಹೋಲಿಕೆ ಯಾಗುತ್ತಿದ್ದು, ಸಾಕಷ್ಟು ಕುತೂಹಲಗಳನ್ನು ಮೂಡಿಸಿದೆ. ಹೌದು, 66 ವರ್ಷ ಹಿಂದಿನ ಕ್ಯಾಲೆಂಡರ್‌ ಈಗ ಮರುಕಳಿಸಿದಂತಿದೆ.

ಭಾರತೀಯ ಕ್ಯಾಲೆಂಡರ್‌ ಪ್ರಕಾರ 2014ನೇ ವರ್ಷದ ದಿನಾಂಕ, ವಾರಗಳು ಯಥಾವತ್ತಾಗಿ 1947ರ ವರ್ಷದ ಕ್ಯಾಲೆಂಡರ್‌ನಂತೆ ಇದೆ. ಇದೇ ವರ್ಷದಲ್ಲಿ ಭಾರತ ಬ್ರಿಟಿಷರ ಆಡಳಿತದಿಂದ ಮುಕ್ತವಾಗಿ ಸ್ವತಂತ್ರ ರಾಷ್ಟ್ರವಾಗಿತ್ತು. ಹೀಗಾಗಿ ಎಲ್ಲರ ಚಿತ್ತ ಈಗ ಹೊಷ ವರ್ಷದ ಕ್ಯಾಲೆಂಡರ್‌ನತ್ತ ನೆಟ್ಟಿದೆ.

ಈ ಎರಡು ಕ್ಯಾಲೆಂಡರ್‌ಗಳಲ್ಲಿ ವರ್ಷದ ಆರಂಭ (ಜನವರಿ 1) ಹಾಗೂ ಕೊನೆಯ (ಡಿಸೆಂಬರ್ 31) ದಿನ ‘ಬುಧವಾರ’ ಬಂದಿರುವುದು ವಿಶೇಷ. ಆದರೆ, ನಿಗದಿತ ದಿನಾಂಕದ ಹಬ್ಬಗಳನ್ನು ಹೊರತು ಪಡಿಸಿದರೆ, ಉಳಿದೆಲ್ಲ ಧಾರ್ಮಿಕ ಹಬ್ಬಗಳ ದಿನಾಂಕ ಹಾಗೂ ವಾರಗಳಲ್ಲಿ ಏರುಪೇರಾಗಿದೆ.

1947ನೇ ವರ್ಷದ ಆರಂಭದಲ್ಲಿ (ಜ.7) ಹುಣ್ಣಿಮೆ ಮೊದಲು ಬಂದಿತ್ತು. ಆದರೆ, ನೂತನ ವರ್ಷದ ಆರಂಭಲ್ಲಿಯೇ (ಜ.1) ಅಮಾವಾಸ್ಯೆ ಬಂದಿರುವುದು ಹಲವು ಊಹಾ ಪೋಹಗಳನ್ನು ಹುಟ್ಟುಹಾಕಿದೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಮಾಹಿತಿ, ಚರ್ಚೆಗಳು ಹರಿದಾಡುತ್ತಿವೆ. ಕಾಕತಾಳೀಯ ಎಂಬಂತೆ 1947 ರಂತೆಯೇ 2014ನೇ ವರ್ಷದ ಆರಂಭದ ಸಂದರ್ಭದಲ್ಲಿಯೇ ದೇಶದ ರಾಜಧಾನಿ ದೆಹಲಿ ರಾಜಕೀಯ ಐತಿಹಾಸಿಕ ಸಂಗತಿಗಳಿಂದ ಸುದ್ದಿಯಾಗುತ್ತಿರುವುದು ಕುತೂಹಲಕ್ಕೆ ಪುಷ್ಟಿ ನೀಡಿದೆ.

‘ಇದು ಇಂಗ್ಲಿಷ್‌ ಕ್ಯಾಲೆಂಡರ್‌ ಆಗಿರುವುದರಿಂದ ಹಿಂದೂ ಪಂಚಾಂಗದಂತೆ ಭವಿಷ್ಯ ಲೆಕ್ಕ ಹಾಕಲು ಬರುವುದಿಲ್ಲ. ಹಿಂದೂಗಳ ಹೊಸ ವರ್ಷ ಯುಗಾದಿಯಿಂದ ಪ್ರಾರಂಭವಾಗುತ್ತದೆ. ಅಂಕಿ ಅಂಶಗಳಲ್ಲಿ 1947ರ ಕ್ಯಾಲೆಂಡರ್‌ ಮರುಕಳಿಸಿರುವುದರಿಂದ ಕುತೂಹಲ ಸಹಜ. ಇದನ್ನೇ ಆಧಾರವಾಗಿಟ್ಟುಕೊಂಡು ಭವಿಷ್ಯದ ಒಳಿತು ಕೆಡುಕು ಲೆಕ್ಕಹಾಕಲು ಆಗುವುದಿಲ್ಲ.’ ಎನ್ನುತ್ತಾರೆ ಜ್ಯೋತಿಷಿ ಅನಂತ ಭಟ್ಟ.
-ಪ್ರಮೋದ ಹರಿಕಾಂತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT