ಕಾರವಾರ: ಜಿಲ್ಲಾಡಳಿತ ಹಾಗೂ ನಗರಸಭೆ ಆಶ್ರಯದಲ್ಲಿ ಏ. 28 ಮೇ 2ರ ವರೆಗೆ ಒಟ್ಟು ದಿನಗಳ ವರೆಗೆ ಕರಾವಳಿ ಉತ್ಸವ ಸಂಘಟಿಸಲು ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ಸಚಿವ ಆನಂದ ಅಸ್ನೋಟಿಕರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು. ಮೊದಲೆರಡು ದಿನ ಜಿಲ್ಲಾಡಳಿತ, ಉಳಿದ ಮೂರು ದಿನ ಖಾಸಗಿಯಾಗಿ ಉತ್ಸವ ಸಂಘಟಿಸಲಾಗುತ್ತಿದೆ.
ಏ. 28 ಹಾಗೂ 29ರಂದು ಬಾಲಿವುಡ್‌ನ ಗಾಯಕರು ಹಾಗೂ ರಾಜ್ಯಮಟ್ಟದ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ನಂತರದ ಮೂರು ದಿನಗಳ ಕಾಲ ವಿವಿಧ ಪ್ರತಿಭಾವಂತ ತಂಡಗಳಿಂದ ಕಾರ್ಯಕ್ರಮ ಆಯೋಜಿಸಲು ಸಭೆ ನಿರ್ಧರಿಸಿದೆ.
ಉತ್ಸವದ ಪೂರ್ವಸಿದ್ಧತೆಗಾಗಿ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸ್ವಾಗತ ಸಮಿತಿ, ಸಾಂಸ್ಕೃತಿಕ ಸಮಿತಿ, ಕ್ರೀಡಾ ಸಮಿತಿ, ಸಾರಿಗೆ ಸಮಿತಿ, ಕ್ರೀಡಾ ಸಮಿತಿ, ಪ್ರಚಾರ ಸಮಿತಿ ಹಾಗೂ ವಸತಿ ಸಮಿತಿ ಸೇರಿದಂತೆ ಒಟ್ಟು 11 ಸಮಿತಿಗಳನ್ನು ರಚಿಸಲಾಗಿದೆ. ಖ್ಯಾತ ಗಾಯಕಿ ಶ್ರೇಯಾ ಘೋಷಾಲ್, ಸುನಿಧಿ ಚವ್ಹಾಣ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವ ಸಂಬಂಧ ಅವರನ್ನು ಸಂಪರ್ಕಿಸಲು ಸಭೆ ನಿರ್ಧರಿಸಿದೆ.
ಕಡಲತೀರದಲ್ಲಿ ಉದ್ಯಾನದಿಂದ ಯುದ್ಧ ನೌಕೆ ವಸ್ತು ಸಂಗ್ರಹಾಲಯದ ವರೆಗೆ ಅದ್ದೂರಿ ಕಾರ್ಯಕ್ರಮಗಳನ್ನು ಉತ್ಸವದ ಸಂದರ್ಭದಲ್ಲಿ ನಡೆಯಲಿದೆ. ಉತ್ಸವದ ಸಂದರ್ಭದಲ್ಲಿ ಏರ್ ಶೋ ನಡೆಸುವಂತೆ ನೌಕಾನೆಲೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು. ಸಾರ್ವಜನಿಕರಿಗೆ ಹತ್ತಿರವಾಗುವ ನಿಟ್ಟಿನಲ್ಲಿ ಕರಾವಳಿ ಉತ್ಸವದಲ್ಲಿ ಆಕರ್ಷಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು.
ವಿವಿಧ ಜಲಕ್ರೀಡೆಗಳು, ಬೀಚ್ ವಾಲಿಬಾಲ್, ಓಟ, ಮಕ್ಕಳ ಕ್ರೀಡೆ, ಸೀಬೈಕಿಂಗ್, ಪ್ಯಾರಾಸೈಲಿಂಗ್, ಕುಸ್ತಿ ಪ್ರದರ್ಶನಗಳು. ಐದು ದಿನಗಳವರೆಗೆ ಫಲಪುಷ್ಪ ಮೇಳ, ಶ್ವಾನ ಮೇಳ, ದೇಹಧಾರ್ಢ್ಯ ಸ್ಪರ್ಧೆ, ಫ್ಯಾಶನ್ ಶೋ, ರಂಗೋಲಿ ಸ್ಪರ್ಧೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಏರ್ಪಡಿಸಲು ಸಭೆ ನಿರ್ಧರಿಸಿದೆ.
ಕಾರವಾರಕ್ಕೆ ಪ್ಯಾಕೇಜ್ ಟೂರ್ ಏರ್ಪಡಿಸುವ ಕುರಿತು ಯೋಜನೆ ರೂಪಿಸಲು ಸಭೆ ಸಮ್ಮತಿಸಿದೆ.
ನಗರಸಭೆ ಅಧ್ಯಕ್ಷ ಗಣಪತಿ ಉಳ್ವೇಕರ್, ಜಿಲ್ಲಾಧಿಕಾರಿ ಇಂಕಾಂಗ್ಲೋ ಜಮೀರ್, ಡಾ. ನರಸಿಂಹಮೂರ್ತಿ, ಸಿಇಓ ಆರ್.ಜೆ.ಜೋಷಿ, ಎಸ್.ಪಿ. ಡಿ.ಬಾಲಕೃಷ್ಣ, ನಗರಸಭೆ ಆಯುಕ್ತ ಡಾ. ಉದಯಕುಮಾರ ಶೆಟ್ಟಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.