ಶಿರಸಿ: ‘ರಾಜ್ಯದ ಕಾಂಗ್ರೆಸ್ ಸರ್ಕಾರದ ಎರಡು ವರ್ಷ ಆಡಳಿತದಲ್ಲಿ ಶಿರಸಿ, ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ವಿವಿಧ ಯೋಜನೆಯಡಿ ₹382 ಕೋಟಿಯಷ್ಟು ಅನುದಾನ ತರಲಾಗಿದೆ’ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.
ನಗರದ ಶಾಸಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ‘ಚುನಾವಣೆ ಸಂದರ್ಭದಲ್ಲಿ ನೀಡಿದ ಭರವಸೆಯನ್ನು ಹಂತಹಂತವಾಗಿ ಈಡೇರಿಸಲಾಗುತ್ತಿದೆ. ಎರಡು ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾಗಿ ಸದನವನ್ನು ಉಪಯೋಗಿಸಿಕೊಂಡಿದ್ದೇನೆ’ ಎಂದರು.
‘ಅರಣ್ಯಭೂಮಿ ಅತಿಕ್ರಮಣ ಸಮಸ್ಯೆ ಜೀವಂತವಾಗಿದ್ದು, ಇದರ ನಿವಾರಣೆ ಸಂಬಂಧ ವಿಧಾನಸಭೆಯಲ್ಲಿ ಧ್ವನಿ ಎತ್ತಿದ್ದೆ. ಕಸ್ತೂರಿರಂಗನ್ ವರದಿ ಜಾರಿಯಿಂದ ಕ್ಷೇತ್ರದ ಹಲವು ಗ್ರಾಮಗಳು ಸಮಸ್ಯೆಗೆ ಒಳಗಾಗುತ್ತಿದ್ದವು. ಹೀಗಾಗಿ ಆ ಬಗ್ಗೆ ಸದನದಲ್ಲಿ ಚರ್ಚಿಸಿ, ವಿರೋಧ ಮಾಡಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಾಗಿದೆ. ನಗರದಲ್ಲಿ ಫಾರ್ಮ್ ನಂಬರ್ 3 ಸಮಸ್ಯೆ ಹಲವು ವರ್ಷಗಳಿಂದ ಇದ್ದು, ಪ್ರಸ್ತುತ ಬಿ ಖಾತಾ ವ್ಯವಸ್ಥೆ ಜಾರಿ ಮೂಲಕ ಪರಿಹಾರ ಕಂಡುಕೊಳ್ಳಲಾಗಿದೆ. ಅಡಿಕೆ ಬೆಳೆಗಾರರ ಹಿತಕ್ಕಾಗಿ ಎಲೆಚುಕ್ಕೆ ರೋಗ ಸಂಶೋಧನೆಗೆ ಅನುದಾನ ಬಿಡುಗಡೆ ಮಾಡಿಸಲಾಗಿದೆ’ ಎಂದರು.
‘ಎರಡು ವರ್ಷಗಳ ಅವಧಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಕಾಮಗಾರಿಗಳಿಗೆ ₹55 ಕೋಟಿ, ಗ್ರಾಮೀಣ ರಸ್ತೆ ಅಭಿವೃದ್ಧಿಗೆ ₹25 ಕೋಟಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ₹20 ಕೋಟಿ, ನಗರಸಭೆ ಕುಡಿಯುವ ನೀರಿನ ಕಾಮಗಾರಿಗೆ ₹65 ಕೋಟಿ, ಸಿದ್ದಾಪುರ ಮಳಲವಳ್ಳಿ ಕೈಗಾರಿಕಾ ವಸಾಹತು ಯೋಜನೆಗೆ ₹30 ಕೋಟಿ, ಸಿದ್ದಾಪುರ ಪಟ್ಟಣ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ₹58 ಕೋಟಿ, ಕಾನಸೂರು ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ₹26 ಕೋಟಿ, ಅಂಬೇಡ್ಕರ್ ವಸತಿ ಶಾಲೆ ನಿರ್ಮಾಣಕ್ಕೆ ₹22 ಕೋಟಿ ಸೇರಿ ಹಲವು ಕಾಮಗಾರಿಗಳಿಗಾಗಿ ₹382 ಕೋಟಿ ಅನುದಾನ ಮಂಜೂರು ಮಾಡಿ, ಕಾಮಗಾರಿಗಳಿಗೆ ಗುತ್ತಿಗೆ ಕರೆಯಲಾಗಿದೆ’ ಎಂದು ಮಾಹಿತಿ ನೀಡಿದರು.
‘ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಹಂತ ಹಂತವಾಗಿ ಇನ್ನಷ್ಟು ರಸ್ತೆಗಳ ಮೇಲ್ದರ್ಜೆ ಕಾರ್ಯ ಮಾಡಲಾಗುವುದು. ಜನಪರವಾಗಿ ಆಡಳಿತ ನೀಡಿ, ಮೂಲಸೌಕರ್ಯ ಹೆಚ್ಚಿಸಲು ಕ್ರಮವಹಿಸಲಾಗುವುದು’ ಎಂದರು.
ಪಕ್ಷದ ಪದಾಧಿಕಾರಿಗಳಾದ ಜಗದೀಶ ಗೌಡ, ಎಸ್.ಕೆ. ಭಾಗವತ, ದೀಪಕ ದೊಡ್ಡೂರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.