ಕುಮಟಾ ಪಟ್ಟಣದ ರೈತ ಸಂಪರ್ಕ ಕೇಂದ್ರ.
ಕುಮಟಾ: ಕೃಷಿ ಇಲಾಖೆಯಿಂದ ಶೇ 50ರ ಸಹಾಯಧನದಲ್ಲಿ ದೊರೆಯುತ್ತಿದ್ದ ಸಾವಯವ ಗೊಬ್ಬರ ಕಳೆದ ಎರಡು ವರ್ಷದಿಂದ ಸ್ಥಗಿತಗೊಂಡಿದ್ದು, ರೈತರು ಸಹಕಾರಿ ಸಂಘ ಅಥವಾ ಖಾಸಗಿ ಗೊಬ್ಬರ ಅಂಗಡಿಯಲ್ಲಿ ಪೂರ್ತಿ ಹಣಕೊಟ್ಟು ಅವುಗಳನ್ನು ಖರೀದಿಸಬೇಕಾದ ಸ್ಥಿತಿನಿ ರ್ಮಾಣವಾಗಿದೆ .
₹200 ಬೆಲೆಯ 50 ಕೆಜಿ ತೂಕದ ಕಪ್ಪು ಸಾವಯವ ಗೊಬ್ಬರ ಕೃಷಿ ಇಲಾಖೆಯ ತಾಲ್ಲೂಕಿನ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ50ರಷ್ಟು ಸಹಾಯಧನದಲ್ಲಿ ದೊರೆಯುತ್ತಿತ್ತು.ಆದರೆ,ಈಗ ದೊರೆಯುತ್ತಿಲ್ಲವಾದ್ದರಿಂದ ರೈತರಿಗೆ ತೊಂದರೆಯಾಗಿದೆ.
’ಕಡಿಮೆ ಬೆಲೆಯ ಕಪ್ಪು ಸಾವಯವ ಗೊಬ್ಬರ ಭತ್ತದ ಸಸಿ ನಾಟಿ ಮಾಡುವ ಮೊದಲು ಮಣ್ಣಿನಲ್ಲಿ ಮಿಶ್ರಣ ಮಾಡುತ್ತಿದ್ದೆವು. ನಾಟಿ ಮಾಡಿದ ಭತ್ತದ ಸಸಿಗಳು ಹಸಿರಾಗಿ ಎದ್ದು ಬರಲು ಈ ಗೊಬ್ಬರ ಸಹಕಾರಿಯಾಗಿತ್ತು. ಮನೆಯ ತರಕಾರಿ ತೋಟಕ್ಕೂ ಸಗಣಿ ಗೊಬ್ಬರದ ಜೊತೆ ಈ ಸಾವಯವ ಗೊಬ್ಬರವನ್ನು ಮಿಶ್ರಣ ಮಾಡಿ ಬಳಸುತ್ತಿದ್ದೆವು. ಇದರಿಂದ ತರಕಾರಿಯ ಉತ್ತಮ ಇಳುವರಿ ಬರುತ್ತಿತ್ತು. ಆದರೆ, ಕಳೆದ ಎರಡು ವರ್ಷಗಳಿಂದ ರೈತ ಸಂಪರ್ಕ ಕೇಂದ್ರದಲ್ಲಿ ಈ ಗೊಬ್ಬರ ಸಹಾಯಧನದಲ್ಲಿ ವಿತರಣೆ ಮಾಡುವುದನ್ನು ಕೃಷಿ ಇಲಾಖೆ ನಿಲ್ಲಿಸಿದೆ' ಎಂದು ತಾಲ್ಲೂಕಿನ ಬೊಗರಿಬೈಲದ ಕೃಷಿಕ ನಾರಾಯಣ ನಾಯ್ಕ ತಿಳಿಸಿದರು.
ಮಾಹಿತಿ ನೀಡಿದ ಸಹಾಯಕ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ, `ಮೂರು ವರ್ಷಗಳ ಹಿಂದೆ ಕುಮಟಾ, ತಾಲ್ಲೂಕಿನ ಮಿರ್ಜಾನ, ಕೂಜಳ್ಳಿ ಹಾಗೂ ಗೋಕರ್ಣ ರೈತ ಸಂಪರ್ಕ ಕೇಂದ್ರಗಳಿಂದ ಕ್ರಮವಾಗಿ ತಲಾ 25 ಟನ್, 5.25 ಟನ್, 25 ಟನ್ ಹಾಗೂ 25 ಟನ್ ಸಾವಯವ ಗೊಬ್ಬರವನ್ನು ಸುಮಾರು 185 ರೈತರು ಸಹಾಯಧನ ಸೌಲಭ್ಯದಲ್ಲಿ ಒಯ್ದಿದ್ದರು. ಕಳೆದ ಎರಡು ವರ್ಷಗಳಿಂದ ಕೃಷಿ ಇಲಾಖೆ ಸಾವಯವ ಗೊಬ್ಬರ ಪೂರೈಕೆಯನ್ನು ನಿಲ್ಲಿಸಿದೆ. ಬೇಡಿಕೆ ಸಲ್ಲಿಸಿದರೂ ಇಲಾಖೆಯಿಂದ ಗೊಬ್ಬರ ಪೂರೈಕೆ ಆಗುತ್ತಿಲ್ಲ. ಆದ್ದರಿಂದ ರೈತರು ತಾವೇ ಸಾವಯವ ಗೊಬ್ಬರವನ್ನು ತಯಾರು ಮಾಡಿ ಭತ್ತದ ಗದ್ದೆಗೆ ಬಳಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.