ADVERTISEMENT

ತಾತ್ಕಾಲಿಕವಾಗಿ ಬಾಗಿಲುಮುಚ್ಚಿದ ಪ್ರಯೋಗಾಲಯ

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 9:40 IST
Last Updated 16 ಜನವರಿ 2018, 9:40 IST

ನಗರದ ಅಲಿಗದ್ದಾದಲ್ಲಿರುವ ಕುಡಿಯುವ ನೀರಿನ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ತಾತ್ಕಾಲಿಕವಾಗಿ ಬಾಗಿಲು ಮುಚ್ಚಿದೆ. ಇದನ್ನು ನಿರ್ವಹಿಸುತ್ತಿದ್ದ ಸಂಸ್ಥೆಯ ಗುತ್ತಿಗೆ ಅವಧಿಯು ಕಳೆದ ಆಗಸ್ಟ್‌ನಲ್ಲೇ ಮುಗಿದಿದೆ. ಹೊಸದಾಗಿ ಗುತ್ತಿಗೆದಾರರು ಕೇಂದ್ರವನ್ನು ವಹಿಸಿಕೊಳ್ಳುವವರೆಗೆ ಇದೇ ಸ್ಥಿತಿ ಮುಂದುವರಿಯಲಿದೆ.

ಇಲ್ಲಿನ ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ವಿಭಾಗದ ಕಟ್ಟಡದ ಹಿಂಭಾಗದಲ್ಲಿರುವ ಒಂದು ಕೊಠಡಿಯಲ್ಲಿ ಈ ಪ್ರಯೋಗಾಲಯ ಕಾರ್ಯ ನಿರ್ವಹಿಸುತ್ತಿದೆ. ಇದು ವಿಶಾಲವಾದ ಉತ್ತರ ಕನ್ನಡ ಜಿಲ್ಲೆಯಲ್ಲಿ ನೀರಿನ ಗುಣಮಟ್ಟ ಪರೀಕ್ಷೆಗೆ ಇರುವ ಏಕೈಕ ಕೇಂದ್ರವಾಗಿದೆ. ಬೆಂಗಳೂರಿನ ಗ್ಲೋಬಲ್ ಏಜೆನ್ಸಿ ಸಂಸ್ಥೆಯ ಗುತ್ತಿಗೆ ಅವಧಿ ಮುಗಿದ ಬಳಿಕ ನಾಲ್ಕೂವರೆ ತಿಂಗಳು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯೇ ನಿರ್ವಹಣೆ ಮಾಡಿತ್ತು. ಆದರೆ ಅಷ್ಟರಲ್ಲಾಗಲೇ ನಿಗದಿಯಾಗಿದ್ದ ಅನುದಾನ ಖಾಲಿಯಾಗಿ ಅಡಚಣೆಯಾಯಿತು.

ಈ ಬಗ್ಗೆ ‘ಪ್ರಜಾವಾಣಿ’ ಜತೆ ಮಾತನಾಡಿದ ನಗರಸಭೆಯ ಬೈತಖೋಲ್ ವಾರ್ಡ್ ಸದಸ್ಯೆ ಛಾಯಾ ಜಾವ್ಕರ್, ‘ಪ್ರಯೋಗಾಲಯದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಉಪಕರಣಗಳಿವೆ. ಹೊಸ ಗುತ್ತಿಗೆದಾರರು ನಿರ್ವವಹಣೆ ಜವಾಬ್ದಾರಿಯನ್ನು ವಸಿಕೊಳ್ಳುವುದು ತಡವಾದರೆ ಅವುಗಳು ಹಾಳಾಗುವ ಸಾಧ್ಯತೆಯಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಬೇಸಿಗೆ ಕಾಲ ನಮ್ಮ ಕಣ್ಣೆದುರೇ ಇದೆ. ಬಾವಿ, ಕೆರೆಗಳಲ್ಲಿ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ನೀರಿನ ಗುಣಮಟ್ಟ ತಿಳಿದುಕೊಳ್ಳುವುದು ಅತ್ಯಗತ್ಯ. ಆದ್ದರಿಂದ ಅಗತ್ಯ ಅನುದಾನ ಬಿಡುಗಡೆ ಮಾಡಬೇಕು. ಗ್ರಾಮೀಣ ಭಾಗದ ಜನರಿಗೆ ಗುಣಮಟ್ಟದ ಕುಡಿಯುವ ನೀರು ಸಿಗುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.

‘ಕೆಲವೇ ದಿನಗಳಲ್ಲಿ ಪುನರಾರಂಭ’

ಪ್ರಯೋಗಾಲಯ ನಡೆಸಲು ಅಗತ್ಯವಿರುವ ₨ 17 ಲಕ್ಷ ಅನುದಾನವನ್ನು ಸರ್ಕಾರ ಈಗಾಗಲೇ ಬಿಡುಗಡೆ ಮಾಡಿದೆ. ಆದ್ದರಿಂದ ಹಣಕಾಸು ಕೊರತೆಯಿಲ್ಲ ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಿ.ವಿ.ಪಾಟೀಲ್ ತಿಳಿಸಿದ್ದಾರೆ.

ಕೆಮಿಸ್ಟ್, ಲ್ಯಾಬ್ ಸಹಾಯಕ ಹಾಗೂ ಭದ್ರತಾ ಸಿಬ್ಬಂದಿ ನೇಮಕ ಸಂಬಂಧ ಈ ವಾರವೇ ಟೆಂಡರ್ ಕರೆಯಲಾಗುವುದು. ಕೆಲವೇ ದಿನಗಳಲ್ಲಿ ಪ್ರಯೋಗಾಲಯ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.