ADVERTISEMENT

ಪಕ್ಷಿ ವೀಕ್ಷಣೆ ಕಾರ್ಯಾಗಾರ; 31 ಪ್ರಬೇಧಗಳ ಗುರುತು

​ಪ್ರಜಾವಾಣಿ ವಾರ್ತೆ
Published 16 ಜನವರಿ 2018, 9:41 IST
Last Updated 16 ಜನವರಿ 2018, 9:41 IST

ಕಾರವಾರ: ತಾಲ್ಲೂಕಿನ ಮಲ್ಲಾಪುರದ ಆದರ್ಶ ವಿದ್ಯಾಲಯ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಸುತ್ತಮುತ್ತಲಿನ ಜೀವಿ ಸಂಕುಲಗಳನ್ನು ಪರಿಚಯಿಸಲು ಇತ್ತೀಚಿಗೆ ನಡೆಸಿದ ಪಕ್ಷಿ ವೀಕ್ಷಣೆ ಕಾರ್ಯಾಗಾರದಲ್ಲಿ ಒಟ್ಟು 31 ಪ್ರಬೇಧಗಳನ್ನು ಗುರುತಿಸಲಾಗಿದೆ.

ಕೈಗಾ ಬರ್ಡ್ಸ್‌ ಹಾಗೂ ವಿದ್ಯಾಲಯದ ಇಕೋ ಕ್ಲಬ್‌ ಜಂಟಿಯಾಗಿ ಆಯೋಜಿಸಿದ್ದ ಈ ಕಾರ್ಯಾಗಾರದಲ್ಲಿ ಮಲ್ಲಾಪುರದ ಸುತ್ತಮುತ್ತಲಿನ ಕಾಳಿನದಿ ತೀರದಲ್ಲಿ ಪಕ್ಷಿ ವೀಕ್ಷಣೆ ನಡೆಸಲಾಯಿತು. ಕಂದು ಬೆನ್ನಿನ ಕಳಿಂಗ, ನೇರಳೆ ಸೂರಕ್ಕಿ, ಚೋರೆ ಹಕ್ಕಿ, ಮಧುರ ಕಂಠ ಹಾಗೂ ಬೂದು ಕಾಜಾಣ ಪಕ್ಷಿಗಳು ವಿದ್ಯಾರ್ಥಿಗಳ ಗಮನ ಸೆಳೆದವು. ಕೈಗಾ ಬರ್ಡ್ಸ್‌ ಪರಿಣಿತರು ಹಕ್ಕಿಗಳ ಪ್ರಬೇಧಗಳನ್ನು ಗುರುತಿಸುವುದು, ಅವುಗಳ ಗುಣಲಕ್ಷಣಗಳು, ಆಹಾರ ಪದ್ಧತಿ, ಹಾರಾಟ, ಕುಟುಂಬ ವ್ಯವಸ್ಥೆ ಹಾಗೂ ಇನ್ನಿತರ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ಒದಗಿಸಿದರು. ಕಾರ್ಯಾಗಾರದಲ್ಲಿ ಒಟ್ಟು 30 ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಸಮಾರೋಪ ಸಮಾರಂಭ: ವೀಕ್ಷಣೆಯ ಬಳಿಕ ನಡೆದ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಇಕೋ ಕ್ಲಬ್‌ನ ಅಧ್ಯಕ್ಷೆ ಶ್ವೇತಾ ಬರ್ಸೇಕರ್, ಸದಸ್ಯರಾದ ಹರ್ಷಿತಾ, ಮಂಜುಶ್ರೀ, ದೀಪಾ, ಮಹಮ್ಮದ್ ಹಾಗೂ ಅನಿಕೇತ ತಮ್ಮ ಅನುಭವ ಹಂಚಿಕೊಂಡರು. ಈ ವೇಳೆ ಕೈಗಾ ಬರ್ಡ್ಸ್‌ ವತಿಯಿಂದ ಇಕೋ ಕ್ಲಬ್‌ಗೆ ಪಕ್ಷಿಗಳ ಚಿತ್ರಪಟಗಳನ್ನು ನೀಡಲಾಯಿತು.

ADVERTISEMENT

ಕೈಗಾ ಬರ್ಡ್ಸ್‌ ಸಂಯೋಜಕ ಜಿ.ಮೋಹನದಾಸ, ಸದಸ್ಯರಾದ ಕೆ.ವಿ.ರಾಜೀವ, ಪಿ.ವಿಜಯನ್, ಕೆ.ಹರೀಶ್, ಹೆಚ್.ಜಿ.ಪ್ರಶಾಂತಕುಮಾರ, ಮಹಾಂತೇಶ ಓಶಿಮಠ ಹಾಗೂ ಆದರ್ಶ ವಿದ್ಯಾಲಯದ ಶಿಕ್ಷಕರಾದ ಎಸ್.ಎ.ಮಿರಾಶಿ, ಜೆ.ಪಿ.ನಾಗೇಕರ, ಛಾಯಾ ನಾಯ್ಕ ಕಾರ್ಯಾಗಾರ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.