ADVERTISEMENT

ಕಾರವಾರ: ಹೊಸ ಪುಸ್ತಕಗಳಿಲ್ಲದ ಗ್ರಾಮೀಣ ಗ್ರಂಥಾಲಯ

ಮೂಲಸೌಕರ್ಯ ಕೊರತೆ, ಇಕ್ಕಟ್ಟಾದ ಜಾಗದಲ್ಲಿ ಓದುವ ಅನಿವಾರ್ಯತೆ

ಗಣಪತಿ ಹೆಗಡೆ
Published 10 ಫೆಬ್ರುವರಿ 2025, 5:33 IST
Last Updated 10 ಫೆಬ್ರುವರಿ 2025, 5:33 IST
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಗ್ರಾಮ ಚಾವಡಿ ಪಕ್ಕದಲ್ಲಿ ಇಕ್ಕಟ್ಟಾದ ಕಟ್ಟಡದಲ್ಲಿರುವ ಗ್ರಂಥಾಲಯ
ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ಗ್ರಾಮ ಚಾವಡಿ ಪಕ್ಕದಲ್ಲಿ ಇಕ್ಕಟ್ಟಾದ ಕಟ್ಟಡದಲ್ಲಿರುವ ಗ್ರಂಥಾಲಯ   

ಕಾರವಾರ: ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿರುವ ಗ್ರಂಥಾಲಯಗಳ ಪೈಕಿ ಬಹುತೇಕ ಮೂಲಸೌಕರ್ಯಗಳ ಕೊರತೆ ಸಮಸ್ಯೆ ಎದುರಿಸುತ್ತಿದ್ದರೆ, ಇತ್ತೀಚೆಗೆ ಪ್ರಕಟಗೊಳ್ಳುವ ಪುಸ್ತಕಗಳ ಲಭ್ಯತೆ ಇಲ್ಲ ಎಂಬ ದೂರು ಓದುಗರಿಂದ ಕೇಳಿ ಬರುತ್ತಿದೆ.

ಜಿಲ್ಲೆಯಲ್ಲಿರುವ 229 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ 236 ಗ್ರಾಮೀಣ ಗ್ರಂಥಾಲಯಗಳಿವೆ. ಅವುಗಳ ಪೈಕಿ 210 ಸ್ವಂತ ಕಟ್ಟಡದಲ್ಲಿದ್ದರೆ, 26 ಗ್ರಂಥಾಲಯಗಳು ಇತರೆ ಕಟ್ಟಡಗಳಲ್ಲಿವೆ. ಗ್ರಂಥಾಲಯಗಳು ಓದುಗರನ್ನು ಸೆಳೆಯುವ ಜೊತೆಗೆ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿ ನೀಡುವ ಮಾಹಿತಿ ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿವೆ.

ಎಲ್ಲ ಗ್ರಂಥಾಲಯಗಳಲ್ಲಿ ಡಿಜಿಟಲ್ ಪುಸ್ತಕಗಳ ಓದಿಗೆ ಅನುಕೂಲ ಮಾಡಿಕೊಡಲಾಗಿದೆ ಎಂಬುದಾಗಿ ದಾಖಲೆ ಹೇಳುತ್ತಿದೆ. ಆದರೆ, ನೆಟ್‍ವರ್ಕ್ ಸಮಸ್ಯೆ ಇರುವ ಕಾರಣ ಬಹುತೇಕ ಕಡೆಯಲ್ಲಿ ಡಿಜಿಟಲ್ ಗ್ರಂಥಾಲಯಗಳ ಬಳಕೆ ಸರಿಯಾಗಿ ನಡೆಯುತ್ತಿಲ್ಲ. ಬಹುತೇಕ ಕಡೆಯಲ್ಲಿ ದಿನಪತ್ರಿಕೆಯನ್ನೂ ತರಿಸುತ್ತಿಲ್ಲ ಎಂಬುದು ಓದುಗರ ದೂರು. ಕಾರವಾರ ಸೇರಿದಂತೆ ಹಲವು ಕಡೆಯಲ್ಲಿ ಗ್ರಂಥಾಲಯಕ್ಕೆ ಬರುವ ಓದುಗರ ಸಂಖ್ಯೆ ತೀರಾ ಕಡಿಮೆ. ಓದುಗರನ್ನು ಸೆಳೆಯಲು ಹೊಸತನದ ವ್ಯವಸ್ಥೆಗಳಲ್ಲಿ ಗ್ರಂಥಾಲಯದಲ್ಲಿ ಅಳವಡಿಸಿಕೊಳ್ಳಬೇಕು ಎಂಬುದು ಜನರ ಒತ್ತಾಯ.

ADVERTISEMENT

ಶಿರಸಿ ತಾಲ್ಲೂಕಿನ ಕೆಲವು ಕಡೆ ಪ್ರತ್ಯೇಕ ಕಟ್ಟಡ ಇಲ್ಲದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿಯೆ ಗ್ರಂಥಾಲಯ ನಡೆಸಲಾಗುತ್ತಿದೆ. ನೆಟ್‍ವರ್ಕ್ ಸಮಸ್ಯೆ ಕಾರಣದಿಂದ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಅಷ್ಟಾಗಿ ಕೆಲಸ ಮಾಡುತ್ತಿಲ್ಲ. ಎರಡು ಗ್ರಂಥಾಲಯಗಳಿಗೆ ಗ್ರಂಥಪಾಲಕರ ನೇಮಕ ಆಗಿಲ್ಲ.

‘ಗ್ರಂಥಾಲಯಗಳಲ್ಲಿ ಪುಸ್ತಕಗಳ ಕೊರತೆಯಿಲ್ಲ. ಮೂಲ ಸೌಕರ್ಯ ಕಲ್ಪಿಸಲಾಗಿದೆ’ ಎಂಬುದಾಗಿ ತಾಲ್ಲೂಕು ಪಂಚಾಯಿತಿ ಇಒ ಸತೀಶ ಹೆಗಡೆ ಹೇಳುತ್ತಾರೆ.

‘ಗೋಕರ್ಣದ ಸಾರ್ವಜನಿಕ ಗ್ರಂಥಾಲಯ ಇಕ್ಕಟ್ಟಾದ ಜಾಗದಲ್ಲಿದೆ. ಇಲ್ಲಿ ಚೆಸ್, ಕೆರಮ್, ಲುಡೊ ಆಟದ ಸೌಲಭ್ಯವೂ ಇದ್ದ ಕಾರಣ, ಅದನ್ನೇ ಆಡಲು ಹಲವು ಜನರು ಬರುತ್ತಿದ್ದಾರೆ. ಗ್ರಂಥಾಲಯದ ನಿರ್ವಹಣೆಯೂ ಸುಲಭವಲ್ಲ. ಕೆಲವು ಸಲ ಸಣ್ಣಪುಟ್ಟ ಖರ್ಚುಗಳನ್ನು ನಾವೇ ಭರಿಸಬೇಕಾಗುತ್ತದೆ’ ಎನ್ನುತ್ತಾರೆ ಗ್ರಂಥಾಲಯದ ಮೇಲ್ವಿಚಾರಕರು.

ಯಲ್ಲಾಪುರ ತಾಲ್ಲೂಕಿನ ಗ್ರಾಮಾಂತರ ಭಾಗದಲ್ಲಿ 15 ಗ್ರಂಥಾಲಯಗಳಿದ್ದು, ಈ ಪೈಕಿ ಉಮ್ಮಚಗಿ ಗ್ರಂಥಾಲಯ ಮಾತ್ರ ಸ್ವಂತ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಉಳಿದವು ಖಾಸಗಿ ಅಥವಾ ಬಾಡಿಗೆ ಕಟ್ಟಡದಲ್ಲಿವೆ.

‘ಗ್ರಂಥಾಲಯಗಳಿಗೆ ಹೊಸ ಹೊಸ ಪುಸ್ತಕ ಬರುತ್ತಿಲ್ಲ. ಪುಸ್ತಕ ಪ್ರಕಟವಾಗಿ 3-4 ವರ್ಷದ ನಂತರವಷ್ಟೇ ಗ್ರಂಥಾಲಯಕ್ಕೆ ಬರುತ್ತಿದೆ. ಹೊಸ ಪುಸ್ತಕ ಗ್ರಂಥಾಲಯದಲ್ಲಿ ಇರುವುದಿಲ್ಲ’ ಎಂಬ ದೂರು ಓದುಗರದ್ದು.

‘ದಾಂಡೇಲಿ ತಾಲ್ಲೂಕಿನ ಅಂಬೇವಾಡಿ ಗ್ರಂಥಾಲಯಕ್ಕೆ ಕಳೆದ ಒಂದು ವರ್ಷದಿಂದ ಸಿಬ್ಬಂದಿ ಇಲ್ಲ. ಸದ್ಯ ಬಾಗಿಲು ಹಾಕಿದ್ದು ಪಂಚಾಯಿತಿ ಸಿಬ್ಬಂದಿ ಬೆಳಿಗ್ಗೆ ಬಾಗಿಲು ತೆಗೆದು ಪತ್ರಿಕೆ ಓದಲು ಅನುವು ಮಾಡುತ್ತಿದ್ದಾರೆ. ಅಂಬೇವಾಡಿ ಗ್ರಂಥಾಲಯಕ್ಕೆ ಸಿಬ್ಬಂದಿ ಬೇಡಿಕೆಯ ಕುರಿತು ಜಿಲ್ಲಾ ಕೇಂದ್ರ ಗ್ರಂಥಾಲಯಕ್ಕೆ ಪತ್ರ ಬರೆಯಲಾಗಿದೆ’ ಎಂಬುದಾಗಿ ಪಿಡಿಒ ಸಂತೋಷ ಹಳಬರ ಹೇಳುತ್ತಾರೆ. ಕೋಗಿಲಬನ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಂಥಾಲಯ ನಡೆಯುತ್ತಿದೆ.

‘ಕಳೆದ ಒಂದು ವರ್ಷದಿಂದ ಸಿಬ್ಬಂದಿ ಇಲ್ಲದ ಕಾರಣ ಗ್ರಂಥಾಲಯವನ್ನು ಸರಿಯಾಗಿ ಬಾಗಿಲು ತಗೆದಿದ್ದನ್ನು ನೋಡಿಲ್ಲ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಬಸವರಾಜ ಹುಡೇಕರ ದೂರುತ್ತಾರೆ.

ಮುಂಡಗೋಡ ತಾಲ್ಲೂಕಿನ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ಇರುವ ಗ್ರಂಥಾಲಯಗಳು ಡಿಜಿಟಲ್‌ ಆಗಿದ್ದರೂ, ಓದುಗರ ಕೊರತೆ ಕಾಡುತ್ತಿದೆ. ಕೆಲವು ಗ್ರಂಥಾಲಯಗಳಲ್ಲಿ ಸಮಯ ಪಾಲನೆ ಮಾಡುತ್ತಿಲ್ಲ ಎಂಬ ಆರೋಪವಿದೆ.

‘ಓದುಗರ ಕೋರಿಕೆಯಂತೆ ಗ್ರಂಥಾಲಯಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ಟಿ.ವೈ.ದಾಸನಕೊಪ್ಪ ಹೇಳುತ್ತಾರೆ.

ಹೊನ್ನಾವರ ತಾಲ್ಲೂಕಿನ ಚಿಕ್ಕನಕೋಡ ಹಾಗೂ ಸಾಲ್ಕೋಡ ಗ್ರಾಮದಲ್ಲಿ ತಲಾ ಎರಡು ಗ್ರಂಥಾಲಯಗಳಿವೆ. ಮಾಗೋಡು, ಕೆಳಗಿನೂರು, ಮಂಕಿ ಬಿ ಗ್ರಾಮ ಪಂಚಾಯಿತಿಗಳಲ್ಲಿ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆದಿದೆ.

ಸಿದ್ದಾಪುರ ತಾಲ್ಲೂಕಿನಲ್ಲಿ ಎರಡು ಕಡೆ ಸ್ವಂತ ಕಟ್ಟದ ಇಲ್ಲದ ಕಾರಣ ಪಕ್ಕದ್ದ ಸರ್ಕಾರಿ ಶಾಲೆಯಲ್ಲಿ ಗ್ರಂಥಾಲಯವನ್ನು ನಡೆಸಲಾಗುತ್ತಿದೆ.

‘ಕೆಲವು ಪಂಚಾಯಿತಿ ಕೇಂದ್ರದಿಂದ ಹಳ್ಳಿಗಳು ದೂರ ಇರುವುದರಿಂದ ಓದುಗರ ಅನುಕೂಲಕ್ಕಾಗಿ 41 ಹೆಚ್ಚುವರಿ ಗ್ರಂಥಾಲಯಗಳು ಮಂಜೂರಾಗಿವೆ. ಗ್ರಂಥಾಲಯಕ್ಕೆ ಸ್ಥಳವನ್ನು ಗುರುತಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಇಒ ದೇವರಾಜ ಹಿತ್ತಲಕೊಪ್ಪ ಹೇಳುತ್ತಾರೆ.

‘ಅಂಕೋಲಾ ತಾಲ್ಲೂಕಿನ ಶೇಟಗೇರಿ ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯದ ಅವಶ್ಯಕತೆಯಿದೆ. ಈಗ ಇರುವ ಗ್ರಂಥಾಲಯದ ಕಟ್ಟಡದಲ್ಲಿ ಸರಿಯಾದ ವಿದ್ಯುತ್ ಸಂಪರ್ಕ ಹಾಗೂ ಶೌಚಾಲಯಕ್ಕೆ ಸರಿಯಾಗಿ ನೀರಿನ ಸರಬರಾಜು ಇಲ್ಲದೆ ಓದುಗರಿಗೆ ತೊಂದರೆಯಾಗಿದೆ. ಕಟ್ಟಡ ಹಳೆಯದಾಗಿದ್ದು ಹೊಸ ಕಟ್ಟಡದ ಅಗತ್ಯವಿದೆ’ ಎನ್ನುತ್ತಾರೆ ಓದುಗ ದರ್ಶನ್ ನಾಯಕ.

ಪೂರಕ ಮಾಹಿತಿ: ರಾಜೇಂದ್ರ ಹೆಗಡೆ, ಸಂತೋಷಕುಮಾರ ಹಬ್ಬು, ರವಿ ಸೂರಿ, ಶಾಂತೇಶ ಬೆನಕನಕೊಪ್ಪ, ಎಂ.ಜಿ.ಹೆಗಡೆ, ಜ್ಞಾನೇಶ್ವರ ದೇಸಾಯಿ, ಪ್ರವೀಣಕುಮಾರ ಸುಲಾಖೆ, ಸುಜಯ್ ಭಟ್, ವಿಶ್ವೇಶ್ವರ ಗಾಂವ್ಕರ, ಅಜಿತ್ ನಾಯಕ.

ಶಿರಸಿ ತಾಲ್ಲೂಕಿನ ಕುಳವೆ ಗ್ರಾಮ ಪಂಚಾಯಿತಿ ಗ್ರಂಥಾಲಯ
ಗ್ರಾಮೀಣ ಗ್ರಂಥಾಲಯಗಳು ಓದಲು ಅನುಕೂಲ ಮಾಡಿಕೊಡುವ ಜೊತೆಗೆ ಸರ್ಕಾರಿ ಯೋಜನೆಗಳ ಮಾಹಿತಿ ನೀಡುವ ಅರಿವು ಕೇಂದ್ರವಾಗಿಯೂ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಸೌಕರ್ಯಗಳನ್ನು ಹಂತ ಹಂತವಾಗಿ ಒದಗಿಸಲಾಗುತ್ತಿದೆ
ಈಶ್ವರ ಕಾಂದೂ ಜಿಲ್ಲಾ ಪಂಚಾಯಿತಿ ಸಿಇಒ
ಓದುಗರು ಅಪೇಕ್ಷೆಪಟ್ಟ ಪುಸ್ತಕಗಳನ್ನು ತರಿಸಲು ಅನುಕೂವಾಗುವಂತೆ ಗ್ರಂಥಾಲಯಗಳಿಗೆ ಅನುದಾನ ನೀಡಬೇಕು. ಆಗ ಓದುಗರ ಆದ್ಯತೆಯ ಪುಸ್ತಕ ತರಿಸಬಹುದು
ದತ್ತಾತ್ರೇಯ ಕಣ್ಣಿಪಾಲ ವಜ್ರಳ್ಳಿಯ ಗ್ರಂಥಪಾಲಕ
ಗ್ರಂಥಾಲಯದಲ್ಲಿ ಅಗತ್ಯ ವ್ಯವಸ್ಥೆಗಳಿವೆ. ಆದರೆ ಸ್ಥಳ ತೀರಾ ಚಿಕ್ಕದಾಗಿದೆ. ಗ್ರಾಮ ಪಂಚಾಯಿತಿ ಬೇರೆ ಸ್ಥಳದಲ್ಲಿ ಅನುಕೂಲ ಕಲ್ಪಿಸಿದರೆ ಅನುಕೂಲ ಎಂಬುದು ಓದುಗರ ಅಭಿಪ್ರಾಯ
ಹರ್ಷ ಬೋಮಕರ್ ಗೋಕರ್ಣ ಗ್ರಂಥಾಲಯದ ಮೇಲ್ವಿಚಾರಕ
ಹೊನ್ನಾವರ ಪಟ್ಟಣ ಪಂಚಾಯಿತಿ ಆವಾರದಲ್ಲಿರುವ ಸಾರ್ವಜನಿಕ ಗ್ರಂಥಾಲಯದಲ್ಲಿ ಶೌಚಾಲಯ ಕೈ ತೊಳೆಯಲು ಬೇಸಿನ್ ಇದ್ದರೆ ಓದುಗರಿಗೆ ಅನುಕೂಲ ಆಗುತ್ತದೆ
ದಿನೇಶ ಕಾಮತ್ ಹೊನ್ನಾವರ ರೋಟರಿ ಕ್ಲಬ್ ಹಿರಿಯ ಸದಸ್ಯ
1700ಕ್ಕೂ ಹೆಚ್ಚು ಓದುಗ ಸದಸ್ಯರು
ಹಳಿಯಾಳ ಪಟ್ಟಣದಲ್ಲಿರುವ ಗ್ರಂಥಾಲಯ ಸ್ವಂತ ಸುಸಜ್ಜಿತ ಕಟ್ಟಡ ಹೊಂದಿದೆ. 1700ಕ್ಕೂ ಹೆಚ್ಚು ಓದುಗ ಸದಸ್ಯರು ನೋಂದಣಿ ಮಾಡಿಕೊಂಡಿದ್ದಾರೆ. ವಿಶೇಷವಾಗಿ ಮಕ್ಕಳಿಗಾಗಿಯೇ ಅಂದಾಜು ₹20 ಲಕ್ಷ ವೆಚ್ಚದಿಂದ ಮಕ್ಕಳ ಗ್ರಂಥಾಲಯವನ್ನು ನಿರ್ಮಿಸಲಾಗಿದೆ. ‘ಪುರಸಭೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆಗೆ ಅಗತ್ಯವಿರುವ ಪುಸ್ತಕಗಳನ್ನು ಶಾಸಕ ಆರ್‌.ವಿ.ದೇಶಪಾಂಡೆ ಅವರ ವಿ.ಆರ್.ಡಿ.ಎಂ ಟ್ರಸ್ಟ್ ವತಿಯಿಂದ 12 ರ‍್ಯಾಕ್‍ಗಳನ್ನು ದೇಣಿಗೆಯಾಗಿ ನೀಡಲಾಗಿದೆ’ ಎಂದು ಗ್ರಂಥಾಲಯದ ಸಿಬ್ಬಂದಿ ವಿಷ್ಣು ಮಾಚಕ್ ಹೇಳುತ್ತಾರೆ. ‘ತಾಲ್ಲೂಕು ಕೇಂದ್ರದ ಗ್ರಂಥಾಲಯದಲ್ಲಿ ಸಿಬ್ಬಂದಿ ಕೊರತೆ ಇದ್ದು ಈಗಾಗಲೇ ನಿಯೋಜನೆಗೊಂಡ ಸಿಬ್ಬಂದಿ ತಾತ್ಕಾಲಿಕ ನಿಯೋಜನೆ ಮೇರೆಗೆ ಇದ್ದಾರೆ’ ಎಂದು ಗ್ರಂಥಾಲಯದ ಸಲಹಾ ಸಮಿತಿ ಸದಸ್ಯ ಸತ್ಯಜಿತ ಗಿರಿ ಹೇಳುತ್ತಾರೆ.
ಡಿಜಿಟಲ್ ಗ್ರಂಥಾಲಯಕ್ಕೆ ನೆಟ್‍ವರ್ಕ್ ಸಮಸ್ಯೆ
ಜೊಯಿಡಾ ತಾಲ್ಲೂಕಿನ ನಾಗೋಡಾ ಅಣಶಿ ಆಖೇತಿಯಲ್ಲಿ ಗ್ರಂಥಾಲಯಕ್ಕೆ ಪ್ರತ್ಯೇಕ ಕಟ್ಟಡಗಳಿಲ್ಲದೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಗ್ರಂಥಾಲಯವನ್ನು ನಡೆಸಲಾಗುತ್ತಿದೆ. ನಂದಿಗದ್ದಾ ಅಣಶಿ ನಾಗೋಡಾ ಕಾತೇಲಿ ಗಾಂಗೋಡಾ ಆಖೇತಿ ಬಜಾರಕುಣಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಟ್‍ವರ್ಕ್ ಸಮಸ್ಯೆ ಇರುವುದರಿಂದ ಡಿಜಿಟಲ್ ಗ್ರಂಥಾಲಯ ವ್ಯವಸ್ಥೆ ಇಲ್ಲ. ನಾಗೋಡಾ ಗ್ರಂಥಾಲಯವನ್ನು ಬಾಪೇಲಿ ಕ್ರಾಸ್ ಆಖೇತಿ ಗ್ರಂಥಾಲಯವನ್ನು ಅನಮೋಡ ಮತ್ತು ಆವೇಡಾ ಗ್ರಂಥಾಲಯವನ್ನು ಗಣೇಶಗುಡಿ ಕೆಪಿಸಿ ಶಾಲೆಗಳಿಗೆ ಸ್ಥಳಾಂತರಿಸಿ ನಡೆಸಲಾಗುತ್ತಿದೆ. ‘ರಾಮನಗರದಲ್ಲಿ ಅಂಗವಿಕಲ ಸ್ನೇಹಿ ಗ್ರಂಥಾಲಯ ಪ್ರಾರಂಭಿಸಲಾಗಿದೆ’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ನಜೀರ್ ಸಾಬ್ ಅಕ್ಕಿ ಹೇಳುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.