ADVERTISEMENT

ಅಂಕೋಲಾ: 11 ಚೀಲ ಅಡಿಕೆ ಕದ್ದ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2021, 15:42 IST
Last Updated 13 ಸೆಪ್ಟೆಂಬರ್ 2021, 15:42 IST
ಅಂಕೋಲಾದ ನೇವಳಸೆಯಲ್ಲಿ ಅಡಿಕೆ ಕದ್ದೊಯ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕಳವಾಗಿದ್ದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ
ಅಂಕೋಲಾದ ನೇವಳಸೆಯಲ್ಲಿ ಅಡಿಕೆ ಕದ್ದೊಯ್ದ ಇಬ್ಬರು ಆರೋಪಿಗಳನ್ನು ಬಂಧಿಸಿದ ಪೊಲೀಸರು, ಕಳವಾಗಿದ್ದ ಅಡಿಕೆ ಮತ್ತು ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಂಡಿದ್ದಾರೆ   

ಅಂಕೋಲಾ: ತಾಲ್ಲೂಕಿನ ನೆವಳಸೆಯಲ್ಲಿ ಈಚಿಗೆ ನಡೆದ ಅಡಿಕೆ ಕಳವು ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಅಂಕೋಲಾ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಆರೋಪಿಗಳಿಂದ ಅಡಿಕೆ ಚೀಲಗಳು ಮತ್ತು ಕೃತ್ಯಕ್ಕೆ ಬಳಸಿದ ಕಾರು ವಶಕ್ಕೆ ಪಡೆಯಲಾಗಿದೆ.

ನೆವಳಸೆಯ ಆನಂದು ನಾಯ್ಕ ಮತ್ತು ಚಂದುಮಠದ ಮಾರುತಿ ಗೌಡ ಬಂಧಿತ ಆರೋಪಿಗಳು. ಆನಂದು, ಕಳವು ನಡೆದ ಮನೆಯ ಪಕ್ಕದ ನಿವಾಸಿ. ಇನ್ನೊಬ್ಬ ಆರೋಪಿ ಮಾರುತಿ, ಅಡಿಕೆ ಕಳವಾಗಿದ್ದ ಮಾಲೀಕನ ಹೊಸ ಮನೆಯ ನಿರ್ಮಾಣದಲ್ಲಿ ಕಾರ್ಮಿಕನಾಗಿ ಕಾರ್ಯ ನಿರ್ವಹಿಸಿದ್ದ. ಮನೆಯ ಮುಂಭಾಗದಲ್ಲಿ ಸಂಗ್ರಹಿಸಿಟ್ಟ 28 ಅಡಿಕೆ ಚೀಲಗಳಲ್ಲಿ 11 ಚೀಲ ಅಡಿಕೆಯನ್ನು ಇಬ್ಬರು ಗುರುವಾರ ತಡರಾತ್ರಿ ಕದ್ದೊಯ್ದಿದ್ದಾಗಿ ಆರೋಪಿಸಲಾಗಿದೆ. ಅವುಗಳನ್ನು ಎಂಟು ಚೀಲಗಳಲ್ಲಿ ತುಂಬಿಸಿ ಮಾರಾಟಕ್ಕೆ ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಇಲ್ಲಿನ ನೆವಳಸೆಯ ಮಾದೇವ ಗೌಡ ಎನ್ನುವವರ ನಿರ್ಮಾಣ ಹಂತದಲ್ಲಿರುವ ಮನೆಯ ಮುಂಭಾಗದಲ್ಲಿದ್ದ ಅಡಿಕೆ ಚೀಲಗಳು ಕಳವಾದ ಕುರಿತು ಮಾಲೀಕರು ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು ಖಚಿತ ಸುಳಿವಿನ ಆಧಾರದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿತರಿಂದ ಅಂದಾಜು ₹ 33,390 ಮೌಲ್ಯದ ಎಂಟು ಚೀಲಗಳಲ್ಲಿ ತುಂಬಿಡಲಾಗಿದ್ದ 1.38 ಕ್ಕಿಂಟಲ್‌ ತೂಕದ ಅಡಿಕೆ ಹಾಗೂ ಕಾರು ವಶಪಡಿಸಿಕೊಂಡಿದ್ದಾರೆ.

ADVERTISEMENT

ಸಿ.ಪಿ.ಐ ಸಂತೋಷ ಶೆಟ್ಟಿ, ಪಿ.ಎಸ್‌.ಐ ಪ್ರವೀಣ ಕುಮಾರ, ಹವಾಲ್ದಾರ ಮೋಹನದಾಸ ಶೇಣ್ವಿ, ಸಿಬ್ಬಂದಿ ಮಂಜನಾಥ ಲಕ್ಮಾಪುರ, ಭಗವಾನ ಗಾಂವಕರ, ಶೇಖರ ಸಿದ್ದಿ, ಪರಮೇಶ, ಜಗದೀಶ ನಾಯ್ಕ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.