
ಶಿರಸಿ: 'ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯಲ್ಲಿ ನಿರೀಕ್ಷಿತ ನೀರು ಲಭ್ಯವಾಗದೆ ಬೆಂಗಳೂರು ಮತ್ತು ಕೋಲಾರ ಭಾಗದ ನೀರಿನ ಅಗತ್ಯಕ್ಕಾಗಿ ಸರ್ಕಾರ ಅಘನಾಶಿನಿ ನದಿ ತಿರುವು ಯೋಜನೆಗೆ ಕೈಹಾಕಿದೆ ಎಂಬ ಅಂಶ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆಯ (ಎನ್‍ಡಬ್ಲ್ಯುಡಿಎ) ಸಾಧ್ಯತಾ ವರದಿಯಲ್ಲಿದೆ’ ಎಂದು ವೃಕ್ಷಲಕ್ಷ ಆಂದೋಲನದ ಪ್ರಮುಖರು ತಿಳಿಸಿದ್ದಾರೆ.
'ಶರಾವತಿ ನದಿ ತಿರುವು ಯೋಜನೆಗೆ ಎದುರಾದ ತೀವ್ರ ವಿರೋಧದ ಕಾರಣದಿಂದ ಪರ್ಯಾಯ ಮಾರ್ಗವಾಗಿ ಅಘನಾಶಿನಿಯನ್ನು ವೇದಾವತಿ ನದಿಗೆ ಜೋಡಿಸುವ ₹24 ಸಾವಿರ ಕೋಟಿ ವೆಚ್ಚದ ಬೃಹತ್ ನೀರಾವರಿ ಯೋಜನೆ ರೂಪಿಸಲಾಗಿದೆ. 35 ಟಿಎಂಸಿ ನೀರನ್ನು ಸಾಗಿಸುವ ಗುರಿಯ ಈ ಯೋಜನೆಯು 194 ಕಿ.ಮೀ ಉದ್ದದ ಕಾಲುವೆ, ಪೈಪ್‌ಲೈನ್, 4 ಹಂತಗಳಲ್ಲಿ ನೀರೆತ್ತುವ ಪ್ರಕ್ರಿಯೆ ಒಳಗೊಂಡಿದೆ. ಇದಕ್ಕಾಗಿ 1,300 ಮೆಗಾವ್ಯಾಟ್ ವಿದ್ಯುತ್ ಅಗತ್ಯವಿದೆ ಎಂದು ವರದಿ ತಿಳಿಸಿದೆ’ ಎಂದು ವೃಕ್ಷಲಕ್ಷ ಆಂದೋಲನ ವರದಿಯ ಮಾಹಿತಿ ಆಧರಿಸಿ ಪ್ರಮುಖರು ಹೇಳಿಕೆ ನೀಡಿದ್ದಾರೆ.
'ಯೋಜನೆಯು 35 ಟಿಎಂಸಿ ನೀರು ಸಾಗಣೆ, 4 ಕಡೆ ನೀರೆತ್ತುವ ಪ್ರಸ್ತಾಪಗಳು, 194 ಕಿ.ಮೀ ಉದ್ದದ ಕಾಲುವೆ, ಪೈಪ್‌ಲೈನ್, ಕಾಲುವೆ, ವಿದ್ಯುತ್ ಮಾರ್ಗ, ರಸ್ತೆ ಕಾಮಗಾರಿ, ಮುಳುಗಡೆ, ಅರಣ್ಯನಾಶ, ಕಟ್ಟಡ ನಿರ್ಮಾಣವನ್ನು ಒಳಗೊಂಡಿದೆ. ಅಘನಾಶಿನಿ ಕಣಿವೆಯ ಅರಣ್ಯ ನಾಶ, ಭೂಮಿ ಮುಳುಗಡೆ ಮತ್ತು ಪರಿಸರ ಅಸಮತೋಲನಕ್ಕೆ ದಾರಿ ಮಾಡಿಕೊಡಲಿದೆ. ಬೇಡ್ತಿ-ವರದಾ ಯೋಜನೆಯಡಿ ಅಘನಾಶಿನಿ ನೀರನ್ನು ಬೆಂಗಳೂರಿಗೆ ವರ್ಗಾಯಿಸುವ ಪ್ರಸ್ತಾವ ಕೇಂದ್ರ ಜಲಶಕ್ತಿ ಸಚಿವಾಲಯದ ಪರಿಶೀಲನೆಯಲ್ಲಿದ್ದು, ಶೀಘ್ರವೇ ರಾಜ್ಯ ಸರ್ಕಾರದಿಂದ ಜಾರಿ ಹಂತಕ್ಕೆ ಬರುವ ಸಾಧ್ಯತೆಯಿದೆ' ಎಂದು ವೃಕ್ಷಲಕ್ಷದ ಸಂಚಾಲಕರಾದ ಕೆ.ವೆಂಕಟೇಶ, ಗಣಪತಿ ಕೆ. ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.